ಬಾಂಗ್ಲಾದೇಶ ಸಂಸದ ಅನ್ವರುಲ್ ಅಝೀಂ ಅನಾರ್ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳು ಭಾನುವಾರ ದಕ್ಷಿಣ 24 ಪರಗಣ ಜಿಲ್ಲೆಯ ಕಾಲುವೆಯೊಂದರ ಬಳಿ ಮಾನವ ಮೂಳೆಗಳ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೇಪಾಳ ಪೊಲೀಸರು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಿದ್ದ ಪ್ರಕರಣದ ಶಂಕಿತ ಪ್ರಮುಖ ಆರೋಪಿ ಮೊಹಮ್ಮದ್ ಸಿಯಾಮ್ ಹುಸೇನ್ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಭಾಂಗಾರ್‌ನ ಕೃಷ್ಣಮತಿ ಗ್ರಾಮದ ಬಾಗ್ಜೋಲಾ ಕಾಲುವೆಯ ಆಗ್ನೇಯ ದಂಡೆಯಲ್ಲಿ ಮೂಳೆಗಳ ಭಾಗಗಳನ್ನು ಪತ್ತೆ ಹಚ್ಚಲಾಗಿದೆ.
ಕಾಲುವೆಯ ಬಳಿ ಸಿಕ್ಕ ಮೂಳೆಯ ಭಾಗಗಳು ಮಾನವನ ಮೂಳೆಯ ಭಾಗಗಳಂತೆ ಕಂಡು ಬರುತ್ತದೆ ಎಂದು ಸ್ಥಳದಲ್ಲಿ ಹಾಜರಿದ್ದ ವೈದ್ಯಕೀಯ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.
ಈ ಸಂಬಂಧ ಬಿಜೋಯ್‌ಗಂಜ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಮೂಳೆಯ ಭಾಗಗಳನ್ನು ಶೀಘ್ರದಲ್ಲೇ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು. ಅನ್ವರುಲ್ ಅಝೀಂ ಅನಾರ್ ಅವರ ದೇಹದ ಇತರ ಭಾಗಗಳನ್ನು ಪತ್ತೆಹಚ್ಚಲು ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಮೇ 12ರಂದು ಸಂಸದರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನ್ಯೂ ಟೌನ್ ಪ್ರದೇಶದ ಫ್ಲಾಟ್‌ನ ಸೆಪ್ಟಿಕ್ ಟ್ಯಾಂಕ್‌ನಿಂದ ಸಿಐಡಿಯು ಈ ಹಿಂದೆ 3.5 ಕೆಜಿ ತೂಕದ ಮಾಂಸದ ತುಂಡುಗಳನ್ನು ವಶಪಡಿಸಿಕೊಂಡಿತ್ತು. ಮೂಳೆ ಮತ್ತು ಮಾಂಸದ ತುಂಡುಗಳಿಗೆ ಸಂಬಂಧಿಸಿ ಡಿಎನ್‌ಎ ಪರೀಕ್ಷೆಗೆ ಮೃತ ಸಂಸದರ ಪುತ್ರಿ ಮುಂದಿನ ವಾರ ಕೋಲ್ಕತ್ತಾಗೆ ಆಗಮಿಸುವ ಸಾಧ್ಯತೆಯಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಹುಸೇನ್ ಅವರನ್ನು ನೇಪಾಳ ಪೊಲೀಸರು ಬಂಧಿಸಿ ಶುಕ್ರವಾರ ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಬಾಂಗ್ಲಾದೇಶ ಸಂಸದನ ದೇಹದ ಭಾಗಗಳು ಮತ್ತು ಕೃತ್ಯಕ್ಕೆ ಬಳಸಿದ ಸಾಧನಗಳನ್ನು ಪತ್ತೆಹಚ್ಚಲು ಭಾನುವಾರ ನ್ಯೂ ಟೌನ್ ಫ್ಲಾಟ್‌ಗೆ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಲಾಗಿದೆ.
ಆರೋಪಿ ಹುಸೇನ್‌ಗೆ ಶನಿವಾರ ಸಂಜೆ ಪಶ್ಚಿಮ ಬಂಗಾಳಕ್ಕೆ ಕರೆತರಲಾಗಿದೆ ಮತ್ತು ಉತ್ತರ 24 ಪರಗಣ ಜಿಲ್ಲೆಯ ಬರಸಾತ್‌ನಲ್ಲಿರುವ ಸ್ಥಳೀಯ ನ್ಯಾಯಾಲಯವು ಆತನನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಸಂಸದರ ಆಪ್ತ ಸ್ನೇಹಿತ ಅಮೆರಿಕದ ಪ್ರಜೆ ಅಖ್ತರುಝಾಮಾನ್ ಅಪರಾಧದಲ್ಲಿ ಭಾಗಿಯಾದವರಿಗೆ ಸುಮಾರು 5 ಕೋಟಿ ರೂ.ಗಳನ್ನು ನೀಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಖ್ತರುಜ್ಜಮಾನ್ ಕೋಲ್ಕತ್ತಾದಲ್ಲಿ ಫ್ಲಾಟ್ ಹೊಂದಿದ್ದು, ಸದ್ಯ ಅಮೆರಿಕದಲ್ಲಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಅವಾಮಿ ಲೀಗ್ ನಾಯಕ ಮತ್ತು ಸಂಸದ ಅನ್ವರುಲ್ ಅಝೀಂ ಅವರನ್ನು ಮೊದಲು ಕತ್ತು ಹಿಸುಕಿ ಕೊಲೆ ಮಾಡಿದ ನಂತರ ಅವನ ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೇ 12ರಂದು ಅನಾರ್ ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಕ್ಕೆ ಬಂದು ಬಾರಾನಗರದಲ್ಲಿರುವ ತನ್ನ ಸ್ನೇಹಿತ ಬಿಸ್ವಾಸ್‌ಗೆ ಸಂಬಂಧಿಸಿದ ಸ್ಥಳದಲ್ಲಿ ತಂಗಿದ್ದರು. ಆದರೆ ಮೇ.13ರಿಂದ ಕಾಣೆಯಾಗಿದ್ದರು. ಈ ಬಗ್ಗೆ ಅವರ ಸ್ನೇಹಿತ ಕೊಲ್ಕತ್ತಾದಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ಓದಿ: ‘ದಿ ಕಾರವಾನ್’ ಪತ್ರಕರ್ತರ ವಿರುದ್ಧದ ಎಫ್‌ಐಆರ್ ಖಂಡಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ


