ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಭಯದಿಂದ ಪ್ರತಿದಿನ ಪಶ್ಚಿಮ ಬಂಗಾಳದಲ್ಲಿ ಮೂರ್ನಾಲ್ಕು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ (ಜ.23) ಹೇಳಿದ್ದಾರೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಈ ಸಾವುಗಳ ಹೊಣೆ ಹೊತ್ತುಕೊಳ್ಳಬೇಕು ಎಂದಿದ್ದಾರೆ.
ಎಸ್‌ಐಆರ್ ಸಂಬಂಧಿತ ಸಾವುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ದ ಏಕೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. “110ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಚುನಾವಣಾ ಆಯೋಗದ ವಿರುದ್ದ ಏಕೆ ಪ್ರಕರಣ ದಾಖಲಿಸಿಲ್ಲ. ಭಾರತೀಯ ಚುನಾವಣಾ ಆಯೋಗ ಈ ಸಾವುಗಳ ಹೊಣೆ ಹೊರಬೇಕು, ಕೇಂದ್ರ ಸರ್ಕಾರ ಕೂಡ ಹೊಣೆ ಹೊರಬೇಕು. ರಾಜ್ಯದಲ್ಲಿ ಚುನಾವಣಾ ಆಯೋಗದ ವಿರುದ್ಧ ಜನರು ಪೊಲೀಸ್ ದೂರುಗಳನ್ನು ದಾಖಲಿಸಿರುವ ನಿದರ್ಶನಗಳಿವೆ” ಎಂದು ಕೋಲ್ಕತ್ತಾದ ರೆಡ್‌ರೋಡ್‌ನಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸೇರಿದಂತೆ ದೇಶದಲ್ಲಿ ಚುನಾವಣಾ ಆಯೋಗ ಎಸ್‌ಐಆರ್ ಕೈಗೊಂಡಿರುವುದನ್ನು ಮಮತಾ ಬ್ಯಾನರ್ಜಿ ಆರಂಭದಿಂದಲೇ ವಿರೋಧಿಸುತ್ತಾ ಬಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 2025ರ ನವೆಂಬರ್ ತಿಂಗಳಲ್ಲಿ ಎಸ್‌ಐಆರ್ ಪ್ರಾರಂಭಗೊಂಡ ಬಳಿಕ, ಇದುವರೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಮಮತಾ ಬ್ಯಾನರ್ಜಿ ಐದು ಪತ್ರಗಳನ್ನು ಬರೆದಿದ್ದಾರೆ.
ನೇತಾಜಿ ಸುಭಾಶ್ ಚಂದ್ರ ಬೋಸ್ ಏನಾದರು ಬದುಕಿದ್ದರೆ ಅವರನ್ನೂ ಎಸ್‌ಐಆರ್ ವಿಚಾರಣೆಗೆ ಕರೆಸಲಾಗುತ್ತಿತ್ತು. ರವೀಂದ್ರನಾಥ ಟ್ಯಾಗೋರ್‌ನಿಂದ ಬೋಸ್‌ವರೆಗಿನ ರಾಷ್ಟ್ರೀಯ ಐಕಾನ್‌ಗಳನ್ನು ಅಗೌರವಿಸುವ ಮತ್ತು ದೇಶದ ಇತಿಹಾಸವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ಅಗೌರವ ತೋರಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ಕಾಂಗ್ರೆಸ್ ಪರಂಪರೆಯನ್ನು ನಂಬಿಕೊಂಡು ರಾಜಕೀಯದಲ್ಲಿರುವವರು ರಾಷ್ಟ್ರೀಯ ಐಕಾನ್‌ಗಳನ್ನು ನಡೆಸಿಕೊಳ್ಳುವ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು” ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರಿಗೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
“ವಸಾಹತುಶಾಹಿ ಹ್ಯಾಂಗೊವರ್” ಅನ್ನು ತೊಡೆದುಹಾಕುವ ಮೂಲಕ ಬಿಜೆಪಿ ನಿಜಕ್ಕೂ ದೇಶದ “ಇತಿಹಾಸವನ್ನು ಬದಲಾಯಿಸುತ್ತಿದೆ” ಎಂದು ಭಟ್ಟಾಚಾರ್ಯ ಈ ಹಿಂದೆ ಹೇಳಿದ್ದರು.
ಚುನಾವಣೆ ಸಮೀಪಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ರಾಜಕೀಯ ಗರಿಗೆದರಿದೆ. ಮೊದಲ ಹಂತದ ಎಸ್‌ಐಆರ್ ಪ್ರಕ್ರಿಯೆ ಬಳಿಕ, ಸುಮಾರು 58 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ, ಇದರಿಂದಾಗಿ ರಾಜ್ಯದಲ್ಲಿ ಮತದಾರರ ಸಂಖ್ಯೆ 7.66 ಕೋಟಿಯಿಂದ 7.08 ಕೋಟಿಗೆ ಕಡಿಮೆಯಾಗಿದೆ.
ಎಸ್‌ಐಆರ್ ಸಂಬಂಧ “ತಾರ್ಕಿಕ ವ್ಯತ್ಯಾಸಗಳ” ಹಿನ್ನೆಲೆ ಮತದಾರರಿಗೆ ನೋಟಿಸ್‌ಗಳನ್ನು ನೀಡಿರುವುದನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಸುಮಾರು 1.36 ಕೋಟಿ ಅಂತಹ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ ಫರಕ್ಕಾದಲ್ಲಿರುವ ಬ್ಲಾಕ್ ಅಭಿವೃದ್ಧಿ ಕಚೇರಿಯನ್ನು ಧ್ವಂಸ ಮಾಡಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಮುನೀರುಲ್ ಇಸ್ಲಾಂ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ಗುರುವಾರ (ಜ.22) ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104


