ಪಶ್ಚಿಮ ಬಂಗಾಳದ 19 ವರ್ಷದ ವಲಸೆ ಕಾರ್ಮಿಕನನ್ನು ಬಂಧಿಸಿ ಎರಡು ತಿಂಗಳ ಕಾಲ ರಾಜಸ್ಥಾನದ ಬಂಧನ ಕೇಂದ್ರದಲ್ಲಿ ಇರಿಸಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ನಂತರ ಬಂದೂಕು ತೋರಿಸಿ ಬಲವಂತವಾಗಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದೆ ಎಂದು ಕುಟುಂಬ ಆರೋಪಿಸಿದೆ.
ಅಮೀರ್ ಶೇಖ್ ಗಡಿಪಾರು ಮಾಡಲಾಗಿರುವ ವಲಸೆ ಕಾರ್ಮಿಕ. ಅವರು ಬಾಂಗ್ಲಾದೇಶದಿಂದ ಅಲ್ಲಿನ ಜನರೊಂದಿಗೆ ಇದ್ದು ಮಾತನಾಡಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅಮೀರ್ ಅವರ ಚಿಕ್ಕಪ್ಪ ಮೊಹಮ್ಮದ್ ಅಜ್ಮಲ್ ಶೇಖ್ ಹೇಳಿದ್ದಾಗಿ scroll.in ವರದಿ ಮಾಡಿದೆ.
ವಿಡಿಯೋದಲ್ಲಿ, ಅಮೀರ್ ಶೇಖ್ ಅವರು ಪಶ್ಚಿಮ ಬಂಗಾಳದ ಮಾಲ್ಡಾ ನಿವಾಸಿ ಎಂದು ಹೇಳುವುದನ್ನು ನೋಡಬಹುದು. ಅವರು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಅವರನ್ನು ಬಾಂಗ್ಲಾದೇಶಿ ಎಂಬ ಅನುಮಾನದ ಮೇಲೆ ಬಂಧಿಸಿದ್ದರು ಎಂದು scroll.in ಹೇಳಿದೆ.
ತನ್ನ ಆಧಾರ್ ಕಾರ್ಡ್ ಮತ್ತು ಪೋಷಕರ ಹೆಚ್ಚುವರಿ ದಾಖಲೆಗಳನ್ನು ಪೊಲೀಸರಿಗೆ ತೋರಿಸಿದ್ದೇನೆ ಎಂದು ಅಮೀರ್ ಶೇಖ್ ಹೇಳಿದ್ದಾರೆ. ಆದರೆ, ಪೊಲೀಸರು ಐಡಿ ಪ್ರೂಫ್ ತರುವಂತೆ ಒತ್ತಾಯಿಸಿದ್ದರು. ಅದು ಅವರ ಬಳಿ ಇರಲಿಲ್ಲ ಎಂದು scroll.in ವಿವರಿಸಿದೆ.
“ನನಗೆ ಬಾಂಗ್ಲಾದೇಶದಲ್ಲಿ ಯಾರೂ ಪರಿಚಯವಿಲ್ಲ, ನನ್ನ ಬಳಿ ತಿನ್ನಲು ಏನೂ ಇಲ್ಲ” ಎಂದು ಅಮೀರ್ ಶೇಖ್ ಹೇಳುತ್ತಿರುವುದು ವಿಡಿಯೋದಲ್ಲಿ ಇದೆ.
Amir Sheikh, a 21-year-old migrant worker from Malda, Bengal was detained in Rajasthan and thrown across the border into Bangladesh using a JCB by @BSF_India – despite having valid Indian documents!
This isn’t security. pic.twitter.com/WfBhdQoUar— Pritish Roy (@PritishRoyAITC) July 25, 2025
ಅಮೀರ್ ಶೇಖ್ ಮೂರು ತಿಂಗಳ ಹಿಂದೆ ರಾಜಸ್ಥಾನಕ್ಕೆ ಹೋಗಿದ್ದರು ಎಂದು ಚಿಕ್ಕಪ್ಪ ಮೊಹಮ್ಮದ್ ಅಜ್ಮೌಲ್ ಶೇಖ್ scroll.inಗೆ ಹೇಳಿದ್ದಾರೆ.
“ಒಬ್ಬ ಗುತ್ತಿಗೆದಾರ ನಮಗೆ ಅಮೀರ್ ಬಂಧನದ ಬಗ್ಗೆ ಮಾಹಿತಿ ನೀಡಿದ್ದರು. ನಾವು ಅವರ ಸಹಾಯದಿಂದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೆವು. ಆಧಾರ್ ಮತ್ತು ಜನನ ಪ್ರಮಾಣಪತ್ರಗಳನ್ನೂ ಸಲ್ಲಿಸಿದ್ದೆವು. ಆದರೆ ಅವರು (ಪೊಲೀಸರು) ಅವುಗಳನ್ನು ಸ್ವೀಕರಿಸಿಲ್ಲ” ಎಂದು ಅಜ್ಮೌಲ್ ಶೇಖ್ ಆರೋಪಿಸಿದ್ದಾರೆ.
ಅಮೀರ್ ಶೇಖ್ ಅವರನ್ನು ಬಿಡುಗಡೆ ಮಾಡಲು ರಾಜಸ್ಥಾನ ಪೊಲೀಸರು 50,000 ರೂ.ಗಳನ್ನು ಕೇಳಿದ್ದರು. ಅಷ್ಟೊಂದು ಹಣ ಕೊಡಲು ನಮಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಅಮೀರ್ ರಾಜಸ್ಥಾನದ ಬಂಧನ ಕೇಂದ್ರದಲ್ಲಿ ಎರಡು ತಿಂಗಳು ಕಳೆದರು” ಎಂದು ಅಜ್ಮೌಲ್ ಶೇಖ್ ತಿಳಿಸಿದ್ದಾರೆ.
ವಿಡಿಯೋದಲ್ಲಿ ಕಾಣಿಸಿಕೊಳ್ಳುವವರೆಗೆ ಅಮೀರ್ ಎಲ್ಲಿದ್ದರು ಎಂದು ನಮಗೆ ಗೊತ್ತಿರಲಿಲ್ಲ. ಬಾಂಗ್ಲಾದೇಶದ ವ್ಯಕ್ತಿಯೊಬ್ಬರು ನಮಗೆ ಕರೆ ಮಾಡಿದ ನಂತರ ನಾವು ಅವರೊಂದಿಗೆ ಒಮ್ಮೆ ಮಾತನಾಡಿದೆವು. ಗಡಿ ಭದ್ರತಾ ಪಡೆ ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಅಮೀರ್ ಹೇಳಿಕೊಂಡಿದ್ದಾರೆ ಎಂದು ಅಜ್ಮೌಲ್ ಶೇಖ್ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ದೂರು ದಾಖಲಿಸಿರುವ ಅಮೀರ್ ಕುಟುಂಬ, 1950ರ ದಶಕದಿಂದಲೂ ಭಾರತದಲ್ಲಿ ವಾಸಿಸುತ್ತಿರುವುದನ್ನು ಸಾಬೀತುಪಡಿಸುವ ದಾಖಲೆಗಳು ತಮ್ಮ ಬಳಿ ಇದೆ ಎಂದು ತಿಳಿಸಿದೆ.
ಬಾಂಗ್ಲಾದೇಶೀಯರು ಎಂಬ ಅನುಮಾನದ ಮೇಲೆ ದೇಶದ ಹಲವು ಭಾಗಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಇತ್ತೀಚಿಗೆ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೋಲ್ಕತ್ತಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿತ್ತು.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೊಲೀಸರು ಬಂಗಾಳಿ ಮಾತನಾಡುವ ಜನರನ್ನು, ಹೆಚ್ಚಾಗಿ ಮುಸ್ಲಿಮರನ್ನು ಬಂಧಿಸಿ ಭಾರತೀಯ ನಾಗರಿಕರು ಎಂದು ಸಾಬೀತುಪಡಿಸಲು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪವಿದೆ.
ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ವಿಫಲರಾದ ಹಲವಾರು ಜನರನ್ನು ಬಲವಂತವಾಗಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ ಅರೋಪವಿದೆ. ಕೆಲ ಜನರನ್ನು ತಪ್ಪಾಗಿ ಗಡಿಯಾಚೆಗೆ ತಳ್ಳಿ ಬಳಿಕ ವಾಪಸ್ ಕರೆದುಕೊಂಡು ಬಂದ ಬಗ್ಗೆ ವರದಿಯಾಗಿವೆ.
ಮೇ ತಿಂಗಳಲ್ಲಿ, ಕೇಂದ್ರ ಗೃಹ ಸಚಿವಾಲಯವು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಬಂದ ದಾಖಲೆರಹಿತ ವಲಸಿಗರೆಂದು ಶಂಕಿಸಲಾಗಿರುವ ವ್ಯಕ್ತಿಗಳ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು.
ಜುಲೈ 19ರಂದು ಹರಿಯಾಣದ ಗುರುಗ್ರಾಮದಲ್ಲಿ ಪೊಲೀಸರು ಬಾಂಗ್ಲಾದೇಶದವರೆಂಬ ಅನುಮಾನದ ಮೇಲೆ ಕನಿಷ್ಠ 74 ವಲಸೆ ಕಾರ್ಮಿಕರನ್ನು ಬಂಧಿಸಿದ್ದರು. ಇವರಲ್ಲಿ 11 ಮಂದಿ ಪಶ್ಚಿಮ ಬಂಗಾಳದವರು ಮತ್ತು 63 ಮಂದಿ ಅಸ್ಸಾಂನವರು ಎಂದು ದಿ ವೈರ್ ವರದಿ ಮಾಡಿತ್ತು.
ಮಂಗಳವಾರ scroll.in ಮಾಡಿರುವ ವರದಿ ಪ್ರಕಾರ, ಅಸ್ಸಾಂ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ಮಗನನ್ನು ಕೂಡ ದಾಖಲೆರಹಿತ ಬಾಂಗ್ಲಾದೇಶಿ ವಲಸಿಗ ಎಂಬ ಅನುಮಾನದ ಮೇಲೆ ಬಂಧಿಸಲಾಗಿದೆ.
ಬುಧವಾರ, ಮಾನವ ಹಕ್ಕುಗಳ ಸಂಸ್ಥೆ ಭಾರತವು ಕಾನೂನುಬಾಹಿರವಾಗಿ ಜನರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಛತ್ತೀಸ್‌ಗಢ: ಕ್ರಿಶ್ಚಿಯನ್ ಕುಟುಂಬಕ್ಕೆ ‘ಘರ್ ವಾಪ್ಸಿ’ಗೆ ನಿರಾಕರಿಸಿದ್ದಕ್ಕೆ ಬಹಿಷ್ಕಾರ; ಅರಣ್ಯದಲ್ಲಿ ಆಶ್ರಯ


