ಸಾಫ್ಟ್‌ವೇರ್ ಉದ್ಯೋಗಿಗೆ ಹಲ್ಲೆ ನಡೆಸಿ ತನ್ನ ಮೇಲೆಯೇ ಹಲ್ಲೆಯಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರ ವಿರುದ್ದ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (ಬಿಎಸ್‌ಎಸ್) ಸೆಕ್ಷನ್ 109 (ಕೊಲೆಯತ್ನ), 115(2) (ಮಾರಣಾಂತಿಕ ಹಲ್ಲೆ), 304 (ಬಲವಂತವಾಗಿ ಮೈ ಮೇಲೆ ಇರುವ ವಸ್ತು ಕಿತ್ತುಕೊಳ್ಳುವುದು), 324 (ಅರಿವಿಗೆ ಇದ್ದರೂ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವುದು), 352 (ಶಾಂತಿಭಂಗ) ರ ಅಡಿ ಶಿಲಾದಿತ್ಯ ಬೋಸ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ.
ಶಿಲಾದಿತ್ಯ ಬೋಸ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ಅವರ ಪತ್ನಿ ಮಧುಮಿತಾ ದತ್ತ ಅವರು ದೂರು ನೀಡಿದ್ದರು. ದೂರು ಆಧರಿಸಿ ಸಾಫ್ಟ್‌ವೇರ್ ಇಂಜಿನಿಯರ್ ವಿಕಾಸ್ ಕುಮಾರ್ ಅವರನ್ನು ಸೋಮವಾರ (ಏ.21) ರಾತ್ರಿ ಪೊಲೀಸರು ಬಂಧಿಸಿದ್ದರು.
ಆದರೆ, ಶಿಲಾದಿತ್ಯ ಬೋಸ್ ಅವರೇ ವಿಕಾಸ್ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ.
“ಸೋಮವಾರ ಬೆಳಿಗ್ಗೆ ಸ್ನೇಹಿತನ ಬೈಕ್ ವಾಪಸ್ ನೀಡಲು ನಾನು ಹೋಗುತ್ತಿದ್ದೆ. ಟಿನ್ ಫ್ಯಾಕ್ಟರಿ ಬಳಿ ಬೈಕ್‌ಗೆ ಕಾರು ತಾಗಿದೆ. ಕಾರನ್ನು ಅಡ್ಡಹಾಕಿ ಏಕೆ ಗುದ್ದಿದ್ದು? ಎಂದು ಪ್ರಶ್ನಿಸಿದ್ದಕ್ಕೆ ಕಾರಿನಲ್ಲಿದ್ದ ವ್ಯಕ್ತಿ ಕಾಲಿನಿಂದ ಒದ್ದು ಬೈಕನ್ನು ಕೆಳಗೆ ಬೀಳಿಸಿದ್ದಾರೆ” ಎಂದು ಹಲ್ಲೆಗೊಳಗಾದ ವಿಕಾಸ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ.
“ನಾನು ಆಕ್ಷೇಪ ವ್ಯಕ್ತಪಡಿಸಿದಾಗ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಸ್ನೇಹಿತನಿಗೆ ಕರೆ ಮಾಡಲು ಮುಂದಾದಾಗ ಮೊಬೈಲ್ ಮತ್ತು ಬೈಕ್ ಕೀ ಕಿತ್ತು ಎಸೆದಿದ್ದಾರೆ. ನನ್ನ ಕುತ್ತಿಗೆ ಹಿಡಿದು ಸಾಯಿಸಲು ಯತ್ನಿಸಿದ್ದಾರೆ” ಎಂದು ಹೇಳಿದ್ದಾರೆ ಎಂದಿವೆ.
ಸುಳ್ಳು ಹೇಳಿದ ವಿಂಗ್ ಕಮಾಂಡರ್
ನನ್ನ ಮೇಲೆ ಹಲ್ಲೆಯಾಗಿದೆ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರು ವಿಡಿಯೋ ಮೂಲಕ ಆರೋಪಿಸಿದ್ದರು. ಈ ವೇಳೆ ಅವರ ಹಣೆಯಿಂದ ರಕ್ತ ಸೋರುತ್ತಿತ್ತು. “ಕನ್ನಡ ಭಾಷೆಯ ಕಾರಣಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ. ಡಿಆರ್‌ಡಿವೋ ಸ್ಟಿಕರ್ ನೋಡಿ ಹಲ್ಲೆ ಮಾಡಿದ್ದಾರೆ. ಇದು ಕರ್ನಾಟಕದ ಪರಿಸ್ಥಿತಿ” ಎಂಬಿತ್ಯಾದಿ ಆರೋಪಗಳನ್ನು ಶಿಲಾದಿತ್ಯ ಬೋಸ್ ಮಾಡಿದ್ದರು.
ಆದರೆ, ಪೊಲೀಸರು ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿದಾಗ, ಶಿಲಾದಿತ್ಯ ಬೋಸ್ ಅವರೇ ಟೆಕಿ ವಿಕಾಸ್ ಅವರನ್ನು ಅಟ್ಟಾಡಿಸಿ ಹಲ್ಲೆ ಮಾಡಿರುವುದು ಕಂಡು ಬಂದಿದೆ. ಅವರ ಪತ್ನಿ ಮಧುಮಿತಾ ಅವರೂ ವಾಗ್ವಾದ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ವರದಿಗಳ ಪ್ರಕಾರ, ವಿಕಾಸ್ ಅವರಿಗೆ ಹಲ್ಲೆ ನಡೆಸುವ ವೇಳೆ ಡಿಚ್ಚಿ ಹೊಡೆಯಲು ವಿಂಗ್ ಕಮಾಂಡರ್ ಯತ್ನಿಸಿದ್ದರು. ಈ ವೇಳೆ ಅವರ ಹಣೆಗೆ ಗಾಯವಾಗಿ ರಕ್ತ ಬಂದಿದೆ.
ಗಲಾಟೆ ನಡೆದ ಸಂದರ್ಭ ವಿಂಗ್ ಕಮಾಂಡರ್ ವಿಕಾಸ್ ಅವರ ಬೈಕ್ ಅನ್ನು ಬೀಳಿಸಿದ್ದಾರೆ. ಈ ವೇಳೆ ವಿಕಾಸ್ ಬೈಕ್ ಕೀ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದರು. ರೊಚ್ಚಿಗೆದ್ದ ವಿಂಗ್ ಕಮಾಂಡರ್ ವಿಕಾಸ್‌ಗೆ ಡಿಚ್ಚಿ ಹೊಡೆಯಲು ಮುಂದಾಗಿದ್ದಾರೆ. ಈ ವೇಳೆ ವಿಕಾಸ್ ಕೈ ಅಡ್ಡ ಹಿಡಿದಿದ್ದಾರೆ. ಆಗ ಕೈಯಲ್ಲಿದ್ದ ಬೈಕ್ ಕೀ ವಿಂಗ್ ಕಮಾಂಡರ್ ಹಣೆಗೆ ತಾಗಿ ರಕ್ತ ಬಂದಿದೆ. ಇದನ್ನೇ ಸಿಂಪತಿ ವಿಡಿಯೋಗೆ ಬಳಸಿಕೊಂಡ ವಿಂಗ್ ಕಮಾಂಡರ್, “ದೇವರು ನನಗೆ ಪವರ್ ಕೊಟ್ಟಿರೋದು ಸೇಡು ತೀರಿಸಿಕೊಳ್ಳಲು ಅಲ್ಲ” ಎಂದು ಸುಳ್ಳು ಹೇಳಿದ್ದಾರೆ.
ಕನ್ನಡ ಭಾಷೆಯ ವಿಚಾರ ಹಾಗೂ ತನ್ನ ಮೇಲೆ ಹಲ್ಲೆ ನಡೆಯುವಾಗ ಸ್ಥಳೀಯರು ಯಾರೂ ನೆರವಿಗೆ ಬರಲಿಲ್ಲ ಎಂದು ವಿಂಗ್ ಕಮಾಂಡರ್ ವಿಡಿಯೋ ಮಾಡಿ ಸಿಂಪತಿ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ. ಅವರ ಕಾರಿನ ಡ್ಯಾಶ್ ಕ್ಯಾಮರಾ ವಿಡಿಯೋ ಬಿಡುಗಡೆ ಮಾಡದೆ ಹಲ್ಲೆ ನಡೆದಿದೆ ಎಂಬ ವಿಡಿಯೋ ಅಷ್ಟೇ ಅಪ್ಲೋಡ್ ಮಾಡಿದ್ದರು. ಸಿಸಿಟಿವಿ ವಿಡಿಯೋಗಳು ಹೊರ ಬರುತ್ತಿದ್ದಂತೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮುಖವಾಡ ಕಳಚಿದೆ.
ವಿಕಾಸ್ ಪಕ್ಕೆಲುಬುಗಳಿಗೆ ವಿಂಗ್ ಕಮಾಂಡರ್ ಕಾಲಿನಿಂದ ಒದ್ದಿರುವ ಹಿನ್ನೆಲೆ, ಅವರು ಪಕ್ಕೆಲುವು ನೋವಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಹಲ್ಲೆಗೊಳಗಾದ ವಿಕಾಸ್ ಪರ ಕನ್ನಡಪರ ಸಂಘಟನೆಗಳು ನಿಂತಿವೆ. ಸೋಮವಾರ ಸಂಜೆಯಿಂದಲೇ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಬಂಧನಕ್ಕೆ ಆಗ್ರಹ ವ್ಯಕ್ತವಾಗಿತ್ತು.
ವಿಕಾಸ್‌ಗೆ ಕಾನೂನಿನ ನೆರವು ನೀಡಲು ಸಂಘಟನೆಗಳು ಮುಂದಾಗಿವೆ. ಕನ್ನಡ ಸಂಘಟನೆಗಳ ಒತ್ತಡದ ಬಳಿಕ ವಿಕಾಸ್ ನೀಡಿದ ದೂರು ಸ್ವೀಕರಿಸಿರುವ ಬೈಯಪ್ಪನಹಳ್ಳಿ ಪೊಲೀಸರು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ದ ಕೊಲೆಯ್ನ ಮತ್ತು ಇತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಟೋ ಚಾಲಕನೊಂದಿಗಿನ ‘ಹಿಂದಿ ಜಗಳ’ಕ್ಕೆ ಕನ್ನಡದಲ್ಲಿ ಕ್ಷಮೆಯಾಚಿಸಿದ ಉತ್ತರ ಭಾರತೀಯ


