ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರು ನ್ಯಾಯಾಲಯವು ಜಾರಿ ನಿರ್ದೇಶನಾಲಯದ (ಇಡಿ) ಮಾಜಿ ಅಧಿಕಾರಿ ಲಲಿತ್ ಬಜಾದ್ ಅವರಿಗೆ ಶುಕ್ರವಾರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬಜಾದ್ ಅವರು ಇಡಿಯ ಬೆಂಗಳೂರು ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಬ್ಯಾಂಕ್ ಖಾತೆ ಸ್ಥಗಿತಗೊಂಡಿರುವುದನ್ನು ತೆರವುಗೊಳಿಸುವ ಭರವಸೆಗೆ ಪ್ರತಿಯಾಗಿ 50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು 5 ಲಕ್ಷ ರೂಪಾಯಿ ಸ್ವೀಕರಿಸಿದ್ದರು ಎಂಬುದು ನಿಸ್ಸಂದೇಹವಾಗಿ ಸಾಬೀತಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಮಂಜುನಾಥ್ ಸಂಗ್ರೇಷಿ ಹೇಳಿದ್ದಾಗಿ barandbench.com ವರದಿ ಮಾಡಿದೆ.
ಜೈಲು ಶಿಕ್ಷೆಯ ಜೊತೆಗೆ ನ್ಯಾಯಾಲಯವು ಬಜಾದ್ ಅವರಿಗೆ 5.5 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ವರದಿ ಹೇಳಿದೆ.
“ಅಪರಾಧಿ ಲಲಿತ್ ಬಜಾದ್ ಅವರಿಗೆ 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 [ಲಂಚ] ಅಡಿಯಲ್ಲಿ 3 ವರ್ಷಗಳ ಸರಳ ಜೈಲು ಶಿಕ್ಷೆ ಮತ್ತು ರೂ. 5 ಲಕ್ಷ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದರೆ, ಅವರು 6 ತಿಂಗಳು ಹೆಚ್ಚುವರಿ ಸರಳ ಜೈಲು ಶಿಕ್ಷೆ ಅನುಭವಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಮುಂದುವರಿದು, “ಇದಲ್ಲದೆ, ಅಪರಾಧಿ ಲಲಿತ್ ಬಜಾದ್ ಅವರಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384 [ಸುಲಿಗೆ] ಅಡಿಯಲ್ಲಿ 1 ವರ್ಷದ ಸರಳ ಜೈಲು ಶಿಕ್ಷೆ ಮತ್ತು ರೂ. 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದರೆ, ಅವರು 1 ತಿಂಗಳ ಅವಧಿಗೆ ಸರಳ ಜೈಲು ಶಿಕ್ಷೆಯನ್ನು ಅನುಭವಿಸಬೇಕು” ಎಂದಿದೆ.
ಎರಡೂ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗಲಿದೆ. ಹಾಗಾಗಿ, ಬಜಾದ್ ಅವರು ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಿದೆ.
ಅಪೊಲೊ ಫಿನ್‌ವೆಸ್ಟ್ ಎಂಬ ಕಂಪನಿಯ ಮಾಲೀಕರಿಂದ ರೂ. 50 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಜಾದ್ ಅವರನ್ನು ಜೂನ್ 2021ರಲ್ಲಿ ಸಿಬಿಐ ಬಂಧಿಸಿತ್ತು.
ಬಜಾದ್ ಅವರು ಅಪೊಲೊ ಫಿನ್‌ವೆಸ್ಟ್ ಮಾಲೀಕರನ್ನು ಭೇಟಿಯಾಗಿ ರೂ. 50 ಲಕ್ಷ ಪಾವತಿಸದಿದ್ದರೆ ಚೀನೀ ಸಾಲ ಆ್ಯಪ್ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಕಂಪನಿಯ ಹೆಸರನ್ನು ಹೆಸರಿಸುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ, ಪ್ರಕರಣ ಒಂದು ದಶಕದ ಕಾಲ ಮುಂದುವರಿಯಲಿದೆ. ಅಲ್ಲಿಯವರೆಗೆ ನಿಮ್ಮ ಖಾತೆ ಸ್ಥಗಿತಗೊಂಡಿರಲಿದೆ ಎಂದು ಹೇಳಿದ್ದರು ಎನ್ನಲಾಗಿದೆ.
ಕೊನೆಗೆ, ಅಪೊಲೊ ಫಿನ್‌ವೆಸ್ಟ್ ಮಾಲೀಕರು ಬಜಾದ್ ಅವರಿಗೆ ರೂ. 5 ಲಕ್ಷ ಪಾವತಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಕೋರ್ಟ್, ಇಡಿ ಅಧಿಕಾರಿ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಮತ್ತು ರೂ. 5 ಲಕ್ಷ ಈಗಾಗಲೇ ಸುಲಿಗೆ ಮಾಡಿದ್ದಾರೆ ಎಂದು ಕಂಡುಕೊಂಡಿತ್ತು.
Courtesy : barandbench.com
ಕೋರ್ಟ್ ಆದೇಶಕ್ಕೆ ಗೌರವ, ಸತ್ಯಕ್ಕೆ ಬದ್ಧ: ಧರ್ಮಸ್ಥಳ ಪ್ರಕರಣದಲ್ಲಿ ಡಿಜಿಟಲ್ ಮಾಧ್ಯಮಗಳ ದಿಟ್ಟ ನಿರ್ಧಾರ


