ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಕೇಂದ್ರ ವಿಭಾಗದ ಮಹಿಳಾ ಪೊಲೀಸರು ಮಂಗಳವಾರ (ಜ.21) ಬಂಧಿಸಿದ್ದಾರೆ.
ಕೆ.ಆರ್ ಮಾರುಕಟ್ಟೆಯ ಕೂಲಿ ಕಾರ್ಮಿಕರಾದ ಗಣೇಶ್ (23) ಮತ್ತು ಶರವಣ (35) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಜನವರಿ 19ರಂದು ರಾತ್ರಿ 11.30ರ ಸುಮಾರಿಗೆ ಯಲಹಂಕಕ್ಕೆ ತೆರಳಲು ಬಸ್‌ಗಾಗಿ ಸಂತ್ರಸ್ತೆ ಕಾಯುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ಆರೋಪಿಗಳೊಂದಿಗೆ ಬಸ್‌ಗಳ ಬಗ್ಗೆ ವಿಚಾರಿಸಿದ್ದಾರೆ. ಬಸ್ ತೋರಿಸುವುದಾಗಿ ಗೋಡೌನ್ ಸ್ಟ್ರೀಟ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ಅತ್ಯಾಚಾರವೆಸಗಿದ ಬಳಿಕ ಸಂತ್ರಸ್ತೆಯಿಂದ 650 ರೂಪಾಯಿ ಹಣ, ಚಿನ್ನದ ತಾಳಿ, ಓಲೆ, ಬೆಳ್ಳಿಯ ಕಾಲು ಚೈನು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರೀಶೀಲಿಸಿದ್ದರು. ಅದರಲ್ಲಿನ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೆ.ಆರ್ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇಬ್ಬರೂ ಆರೋಪಿಗಳಿಗೆ ಮನೆಯಿಲ್ಲ. ಹಲವು ವರ್ಷಗಳ ಹಿಂದೆಯೇ ಕುಟುಂಬದಿಂದ ದೂರವಾಗಿದ್ದಾರೆ. ಹಗಲಿನಲ್ಲಿ ಕೆಲಸ ಮಾಡಿ, ರಾತ್ರಿ ಹೊತ್ತು ಕೆ.ಆರ್ ಮಾರುಕಟ್ಟೆಯ ಖಾಲಿ ಜಾಗಗಳಲ್ಲಿ ಮಲಗುತ್ತಿದ್ದರು ಎಂದು ವರದಿಗಳು ಹೇಳಿವೆ.
ಸಂತ್ರಸ್ತೆ ಪತಿ ಜೊತೆ ಜಗಳ ಮಾಡಿಕೊಂಡು ವಾರದ ಹಿಂದೆ ನಗರಕ್ಕೆ ಬಂದಿದ್ದರು. ಭಾನವಾರ ರಾತ್ರಿ ಯಲಹಂಕದ ತನ್ನ ಅಣ್ಣನ ಮನೆಗೆ ತೆರಳಲು ಕೆ.ಆರ್ ಮಾರುಕಟ್ಟೆಯಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಅತ್ಯಾಚಾರ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ; ಮಾಂಸ ಮಾರಾಟ ನಿಷೇಧಕ್ಕೆ ಹೋಟೆಲ್‌ಗಳ ಸಂಘ ವಿರೋಧ


