ಬೆಂಗಳೂರು ‘ನಮ್ಮ ಮೆಟ್ರೋ’ ರೈಲು ಪ್ರಯಾಣಿಕರ ದರ ಗರಿಷ್ಠ 50%ದಷ್ಟು ಏರಿಕೆಯಾಗಿದ್ದು, ಭಾನುವಾರದಿಂದ ಪ್ರಯಾಣಿಕರು ಪರಿಷ್ಕೃತ ದರ ಪಾವತಿಸಬೇಕಾಗುತ್ತದೆ ಎಂದು ವರದಿಯಗಿದೆ. ಕನಿಷ್ಠ ದರ 10 ರೂ. ಹಾಗೆ ಉಳಿದಿದ್ದು, ಗರಿಷ್ಠ ದರವು ಶೇ. 50 ರಷ್ಟು ಏರಿಕೆಯಾಗಿದೆ.
ಸುಮಾರು ಎಂಟು ವರ್ಷಗಳ ನಂತರ ದರ ನಿಗದಿ ಸಮಿತಿಯ (ಎಫ್‌ಎಫ್‌ಸಿ) ಶಿಫಾರಸುಗಳ ಆಧಾರದ ಮೇಲೆ ನಮ್ಮ ಮೆಟ್ರೋವನ್ನು ನಿರ್ವಹಿಸುವ ಬಿಎಂಆರ್‌ಸಿಎಲ್ ದರಗಳನ್ನು ಪರಿಷ್ಕರಿಸಿದೆ. ದರ ಪರಿಷ್ಕರಣೆಯ ನಂತರ 60 ರೂ.ಗಳ ಹಿಂದಿನ ದರವೂ ಈಗ 90 ರೂ.ಗೆ ತಲುಪಿದೆ. ಬೆಂಗಳೂರು
0-2 ಕಿ.ಮೀ ವರೆಗಿನ ದೂರಕ್ಕೆ, ಪ್ರಯಾಣಿಕರು ಕನಿಷ್ಠ 10 ರೂ. ಪಾವತಿಸುವುದು ಮುಂದುವರಿಯಲಿದೆ. 2-4 ಕಿ.ಮೀ.ಗೆ, ದರವನ್ನು 20 ರೂ.ಗೆ ಮತ್ತು 4-6 ಕಿ.ಮೀ.ಗೆ 30 ರೂ.ಗೆ ಹೆಚ್ಚಿಸಲಾಗಿದೆ. 6-8 ಕಿ.ಮೀ.ಗೆ, ಪ್ರಯಾಣಿಕರು 40 ರೂ. ಪಾವತಿಸಬೇಕಾಗುತ್ತದೆ. 8-10 ಕಿ.ಮೀ. ಪ್ರಯಾಣಿಸುವವರು 50 ರೂ. ಪಾವತಿಸಬೇಕಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
10-15 ಕಿ.ಮೀ.ಗೆ ದರ 60 ರೂ., ಮತ್ತು 15-20 ಕಿ.ಮೀ.ಗೆ 70 ರೂ. 20-25 ಕಿ.ಮೀ.ಗೆ 80 ರೂ., ಮತ್ತು 25-30 ಕಿ.ಮೀ.ಗೆ 90 ರೂ. 30 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ 90 ರೂ. ದರ ನಿಗದಿಪಡಿಸಲಾಗಿದೆ.
ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ 5% ರಿಯಾಯಿತಿ ಮುಂದುವರಿಯುತ್ತದೆ. ಆಫ್-ಪೀಕ್ ಸಮಯದಲ್ಲಿ ಹೆಚ್ಚುವರಿ 5% ರಿಯಾಯಿತಿ ನೀಡಲಾಗುತ್ತದೆ. ಮಧ್ಯಾಹ್ನದಿಂದ ಸಂಜೆ 4 ಗಂಟೆಯವರೆಗೆ ಮತ್ತು ವಾರದ ದಿನಗಳಲ್ಲಿ ರಾತ್ರಿ 9 ಗಂಟೆಯ ನಂತರ ಪ್ರಯಾಣಿಸುವವರಿಗೆ ಒಟ್ಟು ರಿಯಾಯಿತಿ 10% ಕ್ಕೆ ಇಳಿಯುತ್ತದೆ.
ಇದಲ್ಲದೆ, ಸ್ಮಾರ್ಟ್ ಕಾರ್ಡ್ ಬಳಕೆದಾರರು ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಾದ ಜನವರಿ 26, ಆಗಸ್ಟ್ 15 ಮತ್ತು ಅಕ್ಟೋಬರ್ 2 ರಂದು ದಿನವಿಡೀ 10% ರಿಯಾಯಿತಿಯನ್ನು ಪಡೆಯುತ್ತಾರೆ. ಆದಾಗ್ಯೂ, ಸ್ಮಾರ್ಟ್ ಕಾರ್ಡ್ ಬಳಕೆದಾರರು ಕನಿಷ್ಠ 90 ರೂ. (ಈ ಹಿಂದೆ ರೂ. 50 ಇರಬೇಕಾಗಿತ್ತು) ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗಿದೆ. QR ಕೋಡ್‌ಗಳನ್ನು ಬಳಸುವವರಿಗೆ ರಿಯಾಯಿತಿ ಅನ್ವಯಿಸುವುದಿಲ್ಲ.
ಪ್ರವಾಸಿ ಮತ್ತು ಗುಂಪು ಟಿಕೆಟ್ ದರಗಳನ್ನು ಸಹ ಪರಿಷ್ಕರಿಸಲಾಗಿದ್ದು, ಒಂದು ದಿನದ ಪ್ರವಾಸಿ ಕಾರ್ಡ್ ಈಗ ರೂ. 300 ಆಗಿದ್ದರೆ, ಮೂರು ದಿನಗಳ ಕಾರ್ಡ್ ರೂ. 600 ಆಗಲಿದೆ. ಐದು ದಿನಗಳ ಪ್ರವಾಸಿ ಕಾರ್ಡ್ ರೂ. 800 ಆಗಲಿದೆ. ಗುಂಪು ಬುಕಿಂಗ್‌ಗಾಗಿ, ಪ್ರಯಾಣಿಕರು ಗುಂಪಿನ ಗಾತ್ರವನ್ನು ಆಧರಿಸಿ ರಿಯಾಯಿತಿಗಳನ್ನು ಪಡೆಯಲಿದ್ದಾರೆ. 25-99 ಗುಂಪುಗಳಿಗೆ 15% ರಿಯಾಯಿತಿ ಮತ್ತು 100-1,000 ಕ್ಕಿಂತ ಹೆಚ್ಚಿನ ಗುಂಪುಗಳಿಗೆ 20% ರಿಯಾಯಿತಿ ದೊರೆಯುತ್ತದೆ. 1,000 ಕ್ಕಿಂತ ಹೆಚ್ಚಿನ ಗುಂಪುಗಳಿಗೆ 25% ರಿಯಾಯಿತಿ ದೊರೆಯಲಿದೆ.
ಪ್ರಯಾಣ ದರ ಏರಿಕೆಗೆ ಪ್ರಯಾಣಿಕರ ಅಕ್ರೋಶ
“ಗುಂಪುಗಳಲ್ಲಿ ಪ್ರಯಾಣಿಸುವ ಜನರು (ಎರಡಕ್ಕಿಂತ ಹೆಚ್ಚು) ಈಗ ತಮ್ಮ ಕಾರು ಅಥವಾ ಕ್ಯಾಬ್‌ಗಳಲ್ಲಿ ಪ್ರಯಾಣ ಮಾಡುವುದು ಒಳ್ಳೆಯದು. ಯಾಕೆಂದರೆ ಮೆಟ್ರೋದಲ್ಲಿ ಅವರ ಒಟ್ಟು ಪ್ರಯಾಣ ದರವು ಒಂದೇ ಆಗಿರುತ್ತದೆ ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ” ಎಂದು ಮೊಬಿಲಿಟಿ ತಜ್ಞ ಸಂಜೀವ್ ದ್ಯಾಮನ್ನವರ್ ಹೇಳಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸುತ್ತಿರುವುದರ ಜೊತೆಗೆ ಮೆಟ್ರೋ ಪ್ರಯಾಣ ದರಗಳನ್ನು ಹೆಚ್ಚಿಸುತ್ತಿರುವುದರ ಬಗ್ಗೆ ಅವರು ಸರ್ಕಾರವನ್ನು ಟೀಕಿಸಿದ್ದಾರೆ.
ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವ ಹಲವಾರು ಪ್ರಯಾಣಿಕರು ”ನಮ್ಮ ಮೆಟ್ರೋ”ವನ್ನು ಭಾರತದ ಅತ್ಯಂತ ದುಬಾರಿ ಮೆಟ್ರೋ ಸೇವೆ ಎಂದು ಕರೆದಿದ್ದಾರೆ.
ಯಶವಂತಪುರದಿಂದ ಬೈಯಪ್ಪನಹಳ್ಳಿಗೆ ಪ್ರತಿದಿನ ಪ್ರಯಾಣಿಸುವ ಐಟಿ ಉದ್ಯೋಗಿ ಮೇಘಾ ಪ್ರತಿಕ್ರಿಯಿಸಿ, “ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಬದಲು, ‘ನಮ್ಮ ಮೆಟ್ರೋ’ವನ್ನು ಭವಿಷ್ಯದಲ್ಲಿ ಕಡಿಮೆ ಬಳಕೆ ಮಾಡುವಂತೆ ಮಾಡುತ್ತಿದೆ. ಅದಕ್ಕಾಗಿ ಶುಲ್ಕ ಪರಿಷ್ಕರಣಾ ಸಮಿತಿ ಶ್ರಮಿಸಿದೆ ಎಂದು ತೋರುತ್ತದೆ. ದರ ಏರಿಕೆಯನ್ನು ನಿರೀಕ್ಷಿಸಲಾಗಿತ್ತು, ಆದರೆ ಈ ಮಟ್ಟಿನ ಹೆಚ್ಚಳವನ್ನಲ್ಲ. ಈ ಹೆಚ್ಚಳವು ಅತಿಯಾಗಿದ್ದು, ಸಾಮಾನ್ಯ ಜನರಿಗೆ ಅದನ್ನು ಭರಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.
“ಈ ಮಟ್ಟಿನ ದರ ಏರಿಕೆಯಾದರೆ ಜನಸಾಮಾನ್ಯರು ಏನು ಮಾಡಬೇಕು? ನಾವು ಮೆಟ್ರೋ ಬಳಸುವುದನ್ನು ನಿಲ್ಲಿಸುತ್ತೇವೆ. ಹೆಚ್ಚಿನ ಸಾಲ ಮರುಪಾವತಿಯ ಹೊರೆಯನ್ನು ರಾಜ್ಯ ಸರ್ಕಾರ ಹೊರಲಿ” ಎಂದು ಕಾರ್ಪೊರೇಟ್ ಸಂಸ್ಥೆಯ ಆಶಿಶ್ ಹೇಳಿದ್ದಾರೆ. ಈಗ ನಮಗೆ ಇರುವ ಏಕೈಕ ಮಾರ್ಗವೆಂದರೆ ಬಿಎಂಟಿಸಿ ಬಸ್‌ಗಳನ್ನು ಬಳಸುವುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಪ್ರಯಾಣ ದರ ಏರಿಕೆಗೆ ಬಿಎಂಆರ್‌ಸಿಎಲ್ ಅನ್ನು ಟೀಕಿಸಿದ್ದು, ಇದು ಪ್ರಯಾಣಿಕರ ಮೇಲೆ ಹೊರೆಯಾಗಲಿದೆ ಎಂದು ಹೇಳಿದ್ದಾರೆ. ಈ ಮಟ್ಟಿನ ದರ ಏರಿಕೆಯು ಜನರು ಖಾಸಗಿ ವಾಹನಗಳತ್ತ ಹೊರಳುವಂತೆ ಮಾಡುತ್ತದೆ ಹಾಗೂ ಇದರಿಂದಾಗಿ ದಟ್ಟಣೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. “ಸಾರ್ವಜನಿಕ ಸಾರಿಗೆ ಕೈಗೆಟುಕುವ ದರದಲ್ಲಿರಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂಓದಿ: ಸಮುದ್ರ ಗಡಿ ಉಲ್ಲಂಘನೆ | ಶ್ರೀಲಂಕಾ ನೌಕಾಪಡೆಯಿಂದ 14 ಭಾರತೀಯ ಮೀನುಗಾರರ ಬಂಧನ; ಸರಣಿ ಮುಂದುವರಿಕೆ
ಸಮುದ್ರ ಗಡಿ ಉಲ್ಲಂಘನೆ | ಶ್ರೀಲಂಕಾ ನೌಕಾಪಡೆಯಿಂದ 14 ಭಾರತೀಯ ಮೀನುಗಾರರ ಬಂಧನ; ಸರಣಿ ಮುಂದುವರಿಕೆ


