Homeಅಂತರಾಷ್ಟ್ರೀಯಬೆಂಗಳೂರು ಮಾದರಿ ಗಲಭೆ: ಸ್ವೀಡನ್‌ನ ಮಾಲ್ಮೊ ನಗರ ಹೊತ್ತಿ ಉರಿಯಲು ಕಾರಣವೇನು?

ಬೆಂಗಳೂರು ಮಾದರಿ ಗಲಭೆ: ಸ್ವೀಡನ್‌ನ ಮಾಲ್ಮೊ ನಗರ ಹೊತ್ತಿ ಉರಿಯಲು ಕಾರಣವೇನು?

ಅಲ್ಲಿನ ಈ ಗಲಭೆಯನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅದನ್ನು ವಿಜೃಂಭಿಸಲಿಲ್ಲ, ದಿನದ 24 ಗಂಟೆ ಅದನ್ನೇ ತೋರಿಸಿ ಪ್ರಚೋದಿಸಲಿಲ್ಲ. ಬದಲಿಗೆ ಕೊನೆ ಪುಟದ ಒಂದು ಸುದ್ದಿಯಾಗಿ ಅಷ್ಟೇ ಪ್ರಸಾರ ಮಾಡಿತು.

- Advertisement -
- Advertisement -

ಸ್ವೀಡನ್‌ನ ಮೂರನೇ ಅತಿ ದೊಡ್ಡ ನಗರ ಮಾಲ್ಮೊದಲ್ಲಿ ಬೆಂಗಳೂರು ಮಾದರಿ ಗಲಭೆ ನಡೆದಿದ್ದು, ನಗರ ಹೊತ್ತಿ ಉರಿದಿದೆ. ಅಲ್ಲಿನ ರೋಸನ್ ಗಾರ್ಡ್‌ ಪ್ರದೇಶದಲ್ಲಿ ನೆರೆದಿದ್ದ 300ಕ್ಕೂ ಹೆಚ್ಚು ಜನರಿದ್ದ ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿದೆ. ಅವರೆಲ್ಲರೂ ಇಸ್ಲಾಂ ವಿರುದ್ಧದ ಚಟುವಟಿಕೆಗಳನ್ನು ವಿರೋಧಿಸಿ, ಇಸ್ಲಾಮೋಫೋಬಿಯಾದ ವಿರುದ್ಧ ಪ್ರತಿಭಟಿಸಲು ಸೇರಿದ್ದರು ಎನ್ನಲಾಗಿದೆ.

ಸ್ವೀಡನ್‌ನ ಮಾಲ್ಮೊದಲ್ಲಿ ಬಲಪಂಥೀಯ ಸ್ಟ್ರಾಮ್ ಕುರ್ಸ್ ಪಕ್ಷದ ಸದಸ್ಯರು ಕುರಾನ್ ಪ್ರತಿಯನ್ನು ಸುಟ್ಟು ಹಾಕಿದ ನಂತರ ಗಲಭೆ ಆರಂಭವಾಗಿದೆ. ಅದಕ್ಕೂ ಹಿಂದಿನ ದಿನ ಪಕ್ಷದ ನಾಯಕ ರಾಸ್ಮಸ್ ಪಲುಡಾನ್ ಅವರಿಗೆ “ನಾರ್ಡಿಕ್ ದೇಶಗಳಲ್ಲಿ ಇಸ್ಲಾಮೀಕರಣ” ವಿಷಯದ ಕುರಿತು ಮಾಲ್ಮೋದಲ್ಲಿ ಸಭೆ ನಡೆಸಲು ಅನುಮತಿ ನಿರಾಕರಿಸಲಾದ್ದರಿಂದ ರೊಚ್ಚಿಗೆದ್ದ ಬಲಪಂಥೀಯ ಕಾರ್ಯಕರ್ತರು ಕುರಾನ್ ಸುಟ್ಟಿದ್ದಾರೆ ಎಂದು ಸ್ವೀಡಿಸ್ ಪ್ರತಿಕೆ ಅಫ್ಟನ್ಬ್ಲಾಡೆಟ್ ವರದಿ ಮಾಡಿದೆ. ಈ ಹಿಂದೆ ಜನಾಂಗೀಯ ಗುಂಪುಗಳ ವಿರುದ್ಧ ಪ್ರಚೋದನೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ಸ್ವೀಡಿಷ್ ಕಲಾವಿದ ಡಾನ್ ಪಾರ್ಕ್ ರಾಸ್ಮಸ್ ಪಲುಡಾನ್ ಅವರನ್ನು ಆಹ್ವಾನಿಸಿದ್ದರು.

ರಾಸ್ಮಸ್ ಪಲುಡಾನ್ ಯಾರು?

ಡೆನ್ಮಾರ್ಕ್‌ನ ವಕೀಲ ರಾಸ್ಮಸ್ ಪಲುಡಾನ್ 2017ರಲ್ಲಿ ತೀವ್ರ ಬಲಪಂಥೀಯ ಸ್ಟ್ರಾಮ್ ಕುರ್ಸ್ ಪಕ್ಷದ ಸ್ಥಾಪಕ. ಈತನ ಪಕ್ಷ ಮುಸ್ಲಿಂ ವಿರೋಧಿ ಮನೋಭಾವವನ್ನು ಹೊಂದಿದೆ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸದಾ ಮುಸ್ಲಿಂ ವಿರೋದಿ ಅಂಶಗಳನ್ನು ಪ್ರಸಾರ ಮಾಡುವ, ಕುರಾನ್ ಸುಟ್ಟು ಹಾಕುವ ವಿಡಿಯೋಗಳನ್ನು ಈತ ಅಪ್‌ಲೋಡ್‌ ಮಾಡಿದ್ದಾನೆ. ಆ ರೀತಿಯ ಮುಸ್ಲಿಂ ಜನಾಂಗೀಯ ಅವಹೇಳನದ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಜೂನ್‌ನಲ್ಲಿ ಆತನಿಗೆ ಮೂರು ತಿಂಗಳು ಜೈಲುವಾಸ ಮತ್ತು ವಕೀಲ ವೃತ್ತಿ ಮಾಡದಂತೆ ನಿಷೇಧ ಹೇರಿತ್ತು. 2019ರಲ್ಲಿಯೂ ಸಹ ಜನಾಂಗೀಯ ಅವಹೇಳನದ ಭಾಷಣ ಮಾಡಿದ್ದಕ್ಕಾಗಿ ಆತನಿಗೆ 14 ದಿನಗಳ ಬಂಧನ ಶಿಕ್ಷೆ ವಿಧಿಸಲಾಗಿತ್ತು. ಜನಾಂಗೀಯ ನಿಂದನೆ, ದ್ವೇ‍ಷ ಭಾಷಣ, ಮಾನಹಾನಿ, ಯದ್ವಾತದ್ವಾ ವಾಹನ ಚಾಲನೆ ಸೇರಿದಂತೆ ಇದುವರೆಗೂ ಸುಮಾರು 14 ಪ್ರಕರಣಗಳಲ್ಲಿ ಈತ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ.

ರಾಸ್ಮಸ್ ಪಲುಡಾನ್. Photo Courtesy: DR

3 ಲಕ್ಷ ಮುಸ್ಲಿಮರನ್ನು ಡೆನ್ಮಾರ್ಕ್‌ನಿಂದ ಹೊರಹಾಕುವ ಮತ್ತು ಇಸ್ಲಾಂ ಧರ್ಮವನ್ನು ನಿಷೇಧಿಸುವುದಾಗಿ ಘೋಷಿಸಿ ಈತ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾನೆ. ಈ ಶುಕ್ರವಾರ ಸ್ವೀಡನೆ ಆತನನ್ನು 2 ವರ್ಷಗಳ ಕಾಲ ಸ್ವೀಡನ್‌ಗೆ ಕಾಲಿಡದಂತೆ ನಿಷೇಧ ಹೇರಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸ್ವೀಡನ್‌ನಲ್ಲಿನ ವಲಸಿಗರ ಸ್ಥಿತಿಗತಿ

ಸ್ವೀಡನ್ ಐತಿಹಾಸಿಕವಾಗಿ ನಿರಾಶ್ರಿತರ ಸ್ವರ್ಗ ಎಂದು ಹೆಸರು ಗಳಿಸಿದೆ. ಕೆನಡಾ ಮತ್ತು ಆಸ್ಟ್ರೇಲಿಯಾ ನಂತರ ಅತಿ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದ ದೇಶ ಇದಾಗಿದೆ. 2013-2014ರ ಸಮಯದಲ್ಲಿ ಸಿರಿಯಾದಿಂದ ವಲಸೆ ಬಂದ ಹಲವಾರು ಜನರಿಗೆ ಇದು ಖಾಯಂ ವಾಸಿಸಲು ಅನುಮತಿ ನೀಡಿದೆ. ಸಿರಿಯಾ ಯುದ್ದ ಆರಂಭವಾದಾಗಿನಿಂದ ಸುಮಾರು 70,000 ಸಿರಿಯನ್ನರು ಇಲ್ಲಿಗೆ ವಲಸೆ ಬಂದಿದ್ದಾರೆ.

2015 ರ ವರ್ಷವೊಂದರಲ್ಲೇ ಸ್ವೀಡನ್‌ ಆಶ್ರಯಕ್ಕಾಗಿ ದಾಖಲೆಯ 1,62,000 ಅರ್ಜಿಗಳನ್ನು ಸ್ವೀಕರಿಸಿದೆ. ಅದರಲ್ಲಿ ಮುಖ್ಯವಾಗಿ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರು ಮತ್ತು ಯುದ್ಧ ಪೀಡಿತ ದೇಶಗಳಿಂದ ಆಶ್ರಯ ಪಡೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬಲಪಂಥೀಯರ ವಾದ

ಸ್ವೀಡಿಷ್ ಸಂಸತ್ತಿನ ಮೂರನೇ ಅತಿದೊಡ್ಡ ಪಕ್ಷವಾಗಿರುವ ಬಲಪಂಥೀಯ ಸ್ವೀಡನ್ ಡೆಮೋಕ್ರಾಟ್ ಇದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಮುಖವಾಗಿ ಮುಸ್ಲಿಂ ವಲಸಿಗರ ಒಳಹರಿವು ಅಪರಾಧದ ಉಲ್ಬಣಕ್ಕೆ ಕಾರಣವಾಗಿದೆ ಎಂದು ಅದು ಆರೋಪಿಸಿದೆ. ಇದು ವಿಶ್ವದ ಅತ್ಯಂತ ಉದಾರವಾದ ಕಲ್ಯಾಣ ಕಾರ್ಯಕ್ರಮಗಳನ್ನು ಹೊಂದಿರುವ ದೇಶದಲ್ಲಿ ಸಾರ್ವಜನಿಕ ಹಣಕಾಸಿನ ಮೇಲೆ ಒತ್ತಡ ಹೇರುತ್ತಿದೆ ಎಂದು ಪಕ್ಷ ಆರೋಪಿಸಿದೆ.

ಹೆಚ್ಚಿನ ಸಂಖ್ಯೆಯ ವಲಸಿಗರಲ್ಲಿ ಕೌಶಲ್ಯ ಮತ್ತು ವಿದ್ಯಾರ್ಹತೆಯ ಸಮಸ್ಯೆಯಿದೆ. ಹಾಗಾಗಿ ಅವರೆಲ್ಲರೂ ಕೆಲಸ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಇದು ಇತರ ಹೆಚ್ಚು ತೆರಿಗೆ ಕಟ್ಟುವವರ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ 2018 ರಲ್ಲಿ ಸ್ವೀಡನ್‌ನಲ್ಲಿ ನಿರುದ್ಯೋಗ ದರವು ಶೇಕಡಾ 3.8 ರಷ್ಟಿದ್ದರೆ, ವಲಸಿಗ ಸ್ವೀಡಿಶ್ ಜನಸಂಖ್ಯೆಯಲ್ಲಿ ಇದು ಶೇ. 15ಕ್ಕೇರಿತ್ತು. ಇದನ್ನಿಟ್ಟುಕೊಂಡು ಅಲ್ಲಿನ ಬಲಪಂಥೀಯ ಪಕ್ಷಗಳು ವಲಸಿಗ ವಿರೋಧಿ ಭಾವನೆ, ಮುಸ್ಲಿಂ ವಿರೋಧಿ ಭಾವನೆ ಮೂಡಿಸಲು ನಿರತವಾಗಿವೆ ಎನ್ನಲಾಗುತ್ತಿದೆ.

ವಾಸ್ತವ ಮತ್ತು ಮಾಧ್ಯಮಗಳ ಜವಾಬ್ದಾರಿ

ಆದರೆ ಅಲ್ಲಿನ ಬಹುಸಂಖ್ಯಾತ ಜನರು ವಲಸೆಯನ್ನು ಬೆಂಬಲಿಸಿ ಆಶ್ರಯ ನೀಡುವ ಮನೋಭಾವ ಹೊಂದಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ವಲಸೆಗೆ ಕಾರಣವೇನು? ನಿರಾಶ್ರಿತರ ಸಮಸ್ಯೆಗಳನ್ನು ಹೇಗೆ ಅರ್ಥೈಸಬೇಕು, ಮಾನವೀಯ ಆಧಾರದಲ್ಲಿ ಹೇಗೆ ಗ್ರಹಿಸಬೇಕು ಮತ್ತು ಎಲ್ಲರಿಗೂ ಉದ್ಯೋಗ ಸೃಷ್ಠಿ ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಬಲಪಂಥೀಯರು ನಿರಾಕರಿಸುತ್ತಿದ್ದಾರೆ ಎಂಬುದು ಪ್ರಜಾಪ್ರಭುತ್ವವಾದಿಗಳ ವಾದವಾಗಿದೆ.

ಇನ್ನು ಅಲ್ಲಿನ ಈ ಗಲಭೆಯನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅದನ್ನು ವಿಜೃಂಭಿಸಲಿಲ್ಲ, ದಿನದ 24 ಗಂಟೆ ಅದನ್ನೇ ತೋರಿಸಿ ಪ್ರಚೋದಿಸಲಿಲ್ಲ. ಬದಲಿಗೆ ಕೊನೆ ಪುಟದ ಒಂದು ಸುದ್ದಿಯಾಗಿ ಅಷ್ಟೇ ಪ್ರಸಾರ ಮಾಡಿತು. ಇದೀಗ ಅಲ್ಲಿನ ಪತ್ರಿಕೆಗಳನ್ನು ಹುಡುಕಿದರೆ ಗಲಭೆಯ ಸುದ್ದಿಯೇ ತಿಳಿಯುವುದಿಲ್ಲ. ಭಾರತದ ಮಾಧ್ಯಮಗಳು ಇದನ್ನು ಅನುಸರಿಸುವ ಅಗತ್ಯವಿದೆ ಎನಿಸುತ್ತದೆ.

ಸ್ವೀಡನ್ ನಗರ: Photo Courtesy: Forbes

ಸ್ವೀಡನ್ ಹಲವು ಬಹುವೈವಿಧ್ಯತೆಗಳನ್ನು ಒಳಗೊಂಡಿರುವ ದೇಶ. ಆದರೆ ಅಲ್ಲಿ ಈಗ ಇಸ್ಲೋಮೊಫೋಬಿಯ ಹರಡಲು ಬಲಪಂಥೀಯರು ಸ್ವೀಡನ್‌ನ ವಲಸಿಗರನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ರಸ್ತೆ ಮತ್ತು ರೈಲು ಸಾರಿಗೆ ಮೂಲಕ ಸ್ವೀಡನ್‌ ಪ್ರವೇಶಿಸಬೇಕಾದರೆ ಮಾಲ್ಮೊ ನಗರದ ಮೂಲಕವೇ ಹಾದುಹೋಗಬೇಕು. ಹಾಗಾಗಿ ಹೆಚ್ಚಿನ ನಿರಾಶ್ರಿತರು ಅಲ್ಲಿ ನೆಲೆಸಿರುವುದು ಹೌದಾದರೂ ಅವರನ್ನು ಎರಡನೇ ದರ್ಜೆಯ ಪ್ರಜೆಯಾಗಿ ಕಾಣುವುದು, ಅವಹೇಳನ ಮಾಡುವುದು ಗಲಭೆಗೆ ಕಾರಣವಾಗುತ್ತವೆ. ಅದರ ಹೊರತು ಬಹಳಷ್ಟು ಜನರು ಅಲ್ಲಿ ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಗಲಭೆಯ ಕುರಿತು ಮಾತನಾಡಲು ಸ್ನೇಹಿತರಿಗೆ ಫೋನ್ ಮಾಡಿದರೆ ಅದು ಇಲ್ಲಿ ದೊಡ್ಡ ವಿಷಯವಲ್ಲ ಎನ್ನುತ್ತಾರೆ ಎಂದು ಹಲವು ವರ್ಷಗಳ ಕಾಲ ಅಲ್ಲಿ ನೆಲೆಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಭರತ್ ಹೆಬ್ಬಾಳ್ ಹೇಳುತ್ತಾರೆ.

ಸ್ಟಾಕ್‌ಹೋಮ್‌ ಪ್ರಧಾನವಾಗಿ ವಲಸೆ ಬಂದ ಪ್ರದೇಶಗಳಲ್ಲಿ ಒಂದಾಗಿದ್ದು ಅಲ್ಲಿ ಗಲಭೆಗಳು ಹೆಚ್ಚಾಗಿವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ಸಮಸ್ಯೆಗಳ ಕುರಿತು ಮಾತನಾಡುವಾಗ ಉದಾಹರಣೆಯಾಗಿ ಸ್ವೀಡನ್‌ ಅನ್ನು ಉಲ್ಲೇಖಿಸಿದ್ದರು. ಆಗ ಸಹ ಗಲಭೆ ಭುಗಿಲೆದ್ದಿದ್ದು, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ, ಮತ್ತು ಲೂಟಿ ನಡೆದಿತ್ತು.


ಇದನ್ನೂ ಓದಿ: ಮೋದಿಯವರದ್ದೇ ಯೂಟ್ಯೂಬ್‌ನಲ್ಲಿ ಅವರ ಜನಪ್ರಿಯತೆ ಕುಸಿತ: ಮನ್ ಕಿ ಬಾತ್ ತಿರಸ್ಕರಿಸಿದ ವಿದ್ಯಾರ್ಥಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...