ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ‘ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆ’ ಆಯೋಜಿಸಿರುವುದನ್ನು ಖಂಡಿಸಿ ಹೋರಾಟಗಾರರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಐಐಎಸ್‌ಸಿ ಸಂಸ್ಥೆಯ ಕ್ಯಾಂಪಸ್ ಒಳಗೆ ಪ್ರತಿಭಟನೆ ಮತ್ತು ಹೊರಗೆ ಸುದ್ದಿಗೋಷ್ಠಿ ನಡೆಯಿತು. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ), ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆ(ಐಐಎಂ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರು (ಐಐಐಟಿಬಿ) ರಾಷ್ಟ್ರೀಯ ಉನ್ನತ ಸಂಶೊಧನಾ ಸಂಸ್ಥೆ(ಎನ್‌ಐಎಸ್) ಹಾಗೂ ಕರ್ನಾಟಕ ಸರ್ಕಾರ ಶೃಂಗಸಭೆಯಲ್ಲಿ ತೊಡಗಿಸಿಕೊಂಡಿದ್ದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಜಗತ್ತಿನಾದ್ಯಂತ ವಿಶ್ವವಿದ್ಯಾಲಯಗಳು ಇಸ್ರೇಲ್‌ನೊಂದಿಗಿನ ಸಂಬಂಧಕ್ಕೆ ಕಡಿವಾಣ ಹಾಕುತ್ತಿರುವಾಗ, ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಇಸ್ರೇಲ್ ಜೊತೆ ಕೈಜೋಡಿಸಿ, ನ್ಯಾಯ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ವಿರುದ್ಧ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಝಾದಲ್ಲಿ ನರಮೇಧ ಮತ್ತು ಲೆಬಾನಾನಿ ಜನತೆಯ ವಿರುದ್ಧ ಹಿಂಸಾತ್ಮಕ ಕ್ರಿಯೆಗಳನ್ನು ತೀವ್ರಗೊಳಿಸುತ್ತಾ..ಇಸ್ರೇಲ್ ಸಾವಿರಾರು ಜನರ ಹತ್ಯೆಗೆ ಕಾರಣವಾಗಿರುವ ಸಮಯದಲ್ಲೇ ಐಐಎಸ್‌ಇಯು ತನ್ನ ಸಭಾಂಗಣವನ್ನು ಸಮಾವೇಶಕ್ಕೆ ನೀಡಿರುವುದ್ದಕ್ಕೆ ಪ್ರತಿಭಟನೆ ಮತ್ತು ಸುದ್ದಿಗೋಷ್ಟಿಯಲ್ಲಿದ್ದ ಹೋರಾಟಗಾರರು, ವಿದ್ವಾಂಸರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತ ಮತ್ತು ಪ್ಯಾಲೆಸ್ತೀನ್ ಬಾವುಟಗಳನ್ನು ಒಟ್ಟಿಗೆ ಪ್ರದರ್ಶಿಸಲಾಯಿತು. ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು ಸಂಸ್ಥೆಯ ಐಶ್ವರ್ಯ ಅವರು ಸುದ್ದಿಗೋಷ್ಠಿ ಪ್ರಾರಂಭಿಸುತ್ತಿದ್ದಂತೆಯೇ, ಪೋಲಿಸರು ಬಂದು ಪ್ಯಾಲೆಸ್ತೀನ್ ಬಾವುಟವನ್ನು ತೆಗೆಯಬೇಕೆಂದು ಬಲವಂತ ಮಾಡುತ್ತಾ ಸುದ್ದಿಗೋಷ್ಠಿಯನ್ನು ನಿಲ್ಲಿಸಲು ಪ್ರಯತ್ನಿಸಿದರು. ಪೊಲೀಸರು ಪ್ಯಾಲೆಸ್ತೀನ್ ಬಾವುಟವನ್ನು ಒಬ್ಬ ಪ್ರತಿಭಟನಾಕಾರರ ಕೈಯಿಂದ ಕಿತ್ತೊಯ್ದ ನಂತರವೇ ಸುದ್ದಿಗೋಷ್ಠಿಯನ್ನು ಮುಂದುವರೆಸಲಾಯಿತು.
Hello @siddaramaiah Sir this is your AHINDA state? pic.twitter.com/SmJTt4AVJp
— Greeshma Kuthar (@jeegujja) September 23, 2024
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ (ಎಐಎಲ್‌ಎ) ಕ್ಲಿಫ್ಟನ್ ರೊಜಾರಿಯೋ ಅವರು “ನಾವು ಪ್ಯಾಲೆಸ್ತೀನ್‌ನ ಮಕ್ಕಳು ಮಹಿಳೆಯರ ಹತ್ಯೆಯನ್ನೊಳಗೊಂಡ ನರಮೇಧವನ್ನು ನೋಡುತ್ತಿದ್ದೇವೆ. ಹೀಗಿರುವಾಗ ನಮ್ಮ ಸಂಸ್ಥೆಗಳು ಇಸ್ರೇಲ್ ಜೊತೆ ವಾಣಿಜ್ಯ ಸಂಬಂಧಗಳನ್ನು ಬೆಳೆಸುತ್ತಿವೆ. ಇಸ್ರೇಲ್ ಜೊತೆ ಸಂಬಂಧಗಳನ್ನು ಬೆಳೆಸದಂತೆ ಸರ್ಕಾರಗಳಿಗೆ ಅಂತಾರಾಷ್ಟ್ರೀಯ ನ್ಯಾಯಾಲ ಆದೇಶ ನೀಡುತ್ತಿರುವಂತೆಯೇ ಐಐಎಸ್‌ಯು ಇಂದಿನ ಸಮಾವೇಶದಂತಹ ಕಾರ್ಯಕ್ರಮಗಳಿಗೆ ಆಶ್ರಯ ನೀಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ” ಎಂದರು.
ಖಗೋಳ ವಿಜ್ಞಾನಿ ಪ್ರಜ್ವಲ್ ಶಾಸ್ತ್ರಿ ಮಾತನಾಡಿ, ಐಐಎಸ್‌ಸಿ ಸಂಸ್ಥೆಯ ವ್ಯವಹಾರ ನೀತಿಗಳನ್ನು ಪ್ರಶ್ನಿಸಿದರು. “ನಾವು ಕೇಳಬೇಕಾಗಿರುವುದು ಏನೆಂದರೆ, ಈ ಸಂಸ್ಥೆಗಳು ಶಾಂತಿ ಮತ್ತು ಸಮಾತೆಯ ಬಾಳ್ವೆಗೋಸ್ಕರ ಜ್ಞಾನಾರ್ಥಿಗಳಾಗಿದ್ದಾವೆಯೇ? ಅಥವಾ ಹಿಂಸೆ, ಘರ್ಷಣೆ ಕದನಗಳನ್ನು ಪ್ರೋತ್ಸಾಹಿಸುತ್ತಿರುವೆಯೇ?. ಇಂತಹ ಸಮಾವೇಶಗಳನ್ನು ನಡೆಸುವುವುದು ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ನರಮೇಧವನ್ನು ಸಮರ್ಥಿಸಿದಂತೆ. ನಾವು ತಮ್ಮ ಸಭಾಂಗಣವನ್ನು ಮಾತ್ರ ಬಾಡಿಗೆಗೆ ನೀಡಿದ್ದೇವೆ ಎಂಬ ಐಐಎಸ್‌ಇಯ ಹೇಳಿಕೆಯನ್ನು ಪ್ರಶ್ನಿಸಬೇಕಾಗಿದೆ. ಅಂಬಾನಿಯಂತಹ ವಾಣಿಜ್ಯದಾರರು ಸಭಾಂಗಣದ ಲಭ್ಯತೆ ಕೋರಿದ್ದರೆ, ಪರಿಣಾಮಗಳನ್ನು ಪರಿಗಣಿಸದಯೇ ಐಐಎಸ್‌ಸಿ ಸಭಾಂಗಣವನ್ನು ನೀಡುತ್ತಿತ್ತೇ?” ಎಂದು ಪ್ರಶ್ನಿಸಿದರು.

“ಪ್ಯಾಲೆಸ್ತೀನ್ ಜನತೆಯ ಮೇಲೆ ಅಸ್ತ್ರಗಳನ್ನು ಬಳಸಿ ಇಸ್ರೇಲ್ ತನ್ನ ಅಸ್ತ್ರಗಳ ಶೋಧನೆ ಮಾಡುತ್ತಿದೆ. ಅದನ್ನು ಈ ಸಮಾವೇಶವು ಬೆಂಬಲಿಸುವುದೇ? ನಮ್ಮ ಶೈಕ್ಷಣಿಕ ಸಂಸ್ಥೆಗಳು ಇಂತಹದನ್ನು ಪ್ರಶ್ನೆಯಿಲ್ಲದೆ ಬೆಂಬಲಿಸಲು ನೈತಿಕತೆ ಇಲ್ಲವೇ? ಎಂದು ಸ್ತ್ರೀವಾದಿ ಚಳುವಳಿಗಾರರಾದ ಮಧು ಭೂಷಣ್ ಖಂಡನೆ ವ್ಯಕ್ತಪಡಿಸಿದರು. ಪ್ಯಾಲೆಸ್ತೀನ್ ಜನರಿಗೂ ಜೀವಿಸುವ ಹಕ್ಕಿದೆ. ಅದರೊಂದಿಗೆ ನಾವು ನಿಲ್ಲಬೇಕು. ನಮ್ಮ ಶೆಕ್ಷಣಿಕ ಸಂಸ್ಥೆಗಳ ಈ ನಡೆಯಿಂದ ನಮಗೆ ಬಹಳ ನೋವುಂಟಾಗಿದೆ” ಎಂದು ಹೇಳಿದರು.
ರಕ್ಷಣಾ ಮತ್ತು ಶಸ್ತ್ರಾಸ್ತ್ರ ವ್ಯಾಪಾರದ ಮೇಲೆ ಕೇಂದ್ರೀಕರಿಸಿದ ಈ ಸಮಾವೇಶವು, ಇಸ್ರೇಲ್ ವಿರುದ್ಧದ ಶಸ್ತ್ರಾಸ್ತ್ರ ನಿರ್ಬಂಧದ ಜಾಗತಿಕ ಕರೆಗಳಿಗೆ ವಿರುದ್ಧವಾಗಿವೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು. ಇಸ್ರೇಲ್‌ನ ಕ್ರಮಗಳನ್ನು ಬೆಂಬಲಿಸದಂತೆ ಸಂಸ್ಥೆಗಳನ್ನು ಒತ್ತಾಯಿಸುವ ಇತ್ತೀಚಿನ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ತೀರ್ಪಿನ ಬೆಳಕಿನಲ್ಲಿ, ಈ ಸಮಾವೇಶದಲ್ಲಿ ಕರ್ನಾಟಕ ಸರ್ಕಾರದ ಒಳಗೊಳ್ಳುವಿಕೆಯನ್ನೂ ಖಂಡಿಸಿದರು.
ಜಗತ್ತಿನಾದ್ಯಂತ ಅನೇಕರು ಪ್ಯಾಲೆಸ್ತೀನ್‌ನೊಂದಿಗೆ ಒಗ್ಗಟ್ಟಿನಿಂದ BDS( Boycott, Divestment, Sanctions) ಚಳುವಳಿ ಮೂಲಕ ಇಸ್ರೇಲ್‌ನಿಂದ ಹೂಡಿಕೆಯನ್ನು ತ್ಯಜಿಸಿದ್ದಾರೆ. ಐಐಎಸ್‌ಸಿ ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳು ಕೂಡ ಈ ಜಾಗತಿಕ ಚಳುವಳಿಗೆ ಸೇರಲು ಸಾರ್ವಜನಿಕರಿಂದ ಮನವಿ ಮಾಡಲಾಯಿತು. ಈ ಸಂಸ್ಥೆಗಳು ಮಾನವ ಹಕ್ಕುಗಳು ಮತ್ತು ನ್ಯಾಯದ ಸಾರ್ವತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧದ ಸಾಮೂಹಿಕ ಕರೆಗೆ ಸೇರಬೇಕೆಂದು ಒತ್ತಾಯಿಸಿದರು.
ಭಾರತ-ಇಸ್ರೇಲ್ ಶೃಂಗಸಭೆ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಭಾಂಗಣದಲ್ಲಿ ಥಿಂಕ್ ಇಂಡಿಯಾ, ಇಂಡಿಯನ್ ಚೇಂಬರ್ ಆಫ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಮತ್ತು ಮೈಸೂರು ಲ್ಯಾನ್ಸರ್ಸ್ ಹೆರಿಟೇಜ್ ಫೌಂಡೇಶನ್ ಇಂದು (ಸೆ.23) ಭಾರತ-ಇಸ್ರೇಲ್ ಶೃಂಗಸಭೆ ಕಾರ್ಯಕ್ರಮವನ್ನು ಆಯೋಜಿಸಿದೆ.
ಇದನ್ನೂ ಓದಿ : ‘ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆ’ ರದ್ದುಗೊಳಿಸುವಂತೆ ವಿದ್ಯಾರ್ಥಿಗಳು, ಅಧ್ಯಾಪಕರಿಂದ ಬೆಂಗಳೂರಿನ IIScಗೆ ಪತ್ರ


