ಬೆಂಗಳೂರಿನ ಚಿಕ್ಕಬಾಣಾವರ ರೈಲು ನಿಲ್ದಾಣದ ಬಳಿ ಭಾನುವಾರ (ನ.24) ಮಧ್ಯಾಹ್ನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ಕೇರಳ ಮೂಲದ ಇಬ್ಬರು ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ರೈಲ್ವೆ ಪೊಲೀಸರು ಮೃತರನ್ನು ಕೇರಳದ ಪತ್ತನಂತಿಟ್ಟ ಜಿಲ್ಲೆಯ ಸ್ಟರ್ಲಿನ್ ಎಲಿಜಾ ಶಾಜಿ (19) ಮತ್ತು ಜಸ್ಟಿನ್ ಜೋಸೆಫ್ (20) ಎಂದು ಗುರುತಿಸಿದ್ದಾರೆ. ಇವರು ಸಪ್ತಗಿರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಹತ್ತಿರದ ಪಿಜಿಯಲ್ಲಿ ನೆಲೆಸಿದ್ದರು.
ಇದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಇತರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಮಧ್ಯಾಹ್ನ 2.35ರ ಸುಮಾರಿಗೆ ದುರ್ಘಟನೆ ನಡೆದಿದ್ದು, ಇಬ್ಬರೂ ರೈಲು ಡಿಕ್ಕಿ ಹೊಡೆದ ತಕ್ಷಣವೇ ಸಾವನ್ನಪ್ಪಿದ್ದಾರೆ. ಶವಗಳು ಹಳಿಗಳ ಮೇಲೆ ತೀವ್ರವಾಗಿ ಛಿದ್ರಗೊಂಡ ಸ್ಥಿತಿಯಲ್ಲಿ ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಪಿಜಿಗೆ ತೆರಳಲು ರೈಲ್ವೆ ಹಳಿ ದಾಟುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಘಟನೆಯ ಸಮಯದಲ್ಲಿ ರೈಲು ಅತಿ ವೇಗದಲ್ಲಿ ಚಲಿಸುತ್ತಿತ್ತು. ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆಯುವ ಹೊತ್ತಿಗೆ ನಿಲ್ದಾಣದಿಂದ ಹೊರಟು ವೇಗ ಪಡೆದುಕೊಂಡಿತ್ತು ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಮತ್ತು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ವರದಿ (ಯುಡಿಆರ್) ದಾಖಲಾಗಿದ್ದು, ವಿದ್ಯಾರ್ಥಿಗಳ ಇತ್ತೀಚಿನ ಚಟುವಟಿಕೆಗಳು ಮತ್ತು ಹಿನ್ನೆಲೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರೈಲ್ವೆ ಅಧಿಕಾರಿಗಳು ಸಹ ತನಿಖೆ ಆರಂಭಿಸಿದ್ದಾರೆ.
ಮೃತದೇಹಗಳನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿದ್ದು, ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ.


