“ಬೇಟಿ ಬಚಾವೋ” ಎಂದು ಕೇಂದ್ರದ ಯೋಜನೆ ಇರುವುದೇ ಬಿಜೆಪಿ ನಾಯಕರಿಂದ ಮಹಿಳೆಯರಿಗೆ ರಕ್ಷಿಸಿಕೊಳ್ಳಲು ಅಲ್ಲವೇ.? ಅಸಲಿಗೂ ನಾರಿ ಶಕ್ತಿಯಿಂದ ಬೆದರಿ ಬೆಂಡಾಗಿರುವುದು ನಿಮ್ಮದೇ ಪಕ್ಷದ ನಾಯಕರೇ ಹೊರತು ಸಾಮಾನ್ಯ ಜನರಲ್ಲ. ಅಷ್ಟಕ್ಕೂ ನಿಮ್ಮ ಪಕ್ಷದ ಘಟಾನುಘಟಿ 19 ನಾಯಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲು ಯಾವ ನಾರಿ ಶಕ್ತಿ ಅಡ್ಡ ಬಂದಿದೆ ಒಮ್ಮೆ ಜನರಿಗೆ ಹೇಳುವ ಧೈರ್ಯ ಮಾಡಿ ಎಂದು ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಕಾರ್ಕಳದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.
ತನ್ನ ವಿರುದ್ಧ ಸುನೀಲ್ ಕುಮಾರ್ ‘ಎಕ್ಸ್’ನಲ್ಲಿ ಮಾಡಿರುವ ಟೀಕೆಗೆ ‘ಫೇಸ್ ಬುಕ್ ಖಾತೆಯಲ್ಲಿ ತಿರುಗೇಟು ನೀಡಿರುವ ಬಿ.ಕೆ ಹರಿಪ್ರಸಾದ್, “ನಾನು ಚುನಾವಣಾ ಕಲಿ ಆಗದೇ ಇದ್ದರೂ ಪರವಾಗಿಲ್ಲ, ಆದರೆ ನಿಮ್ಮಂತೆ ‘ಪರಶುರಾಮನ’ ಕಲಿಯಂತೂ ಆಗಲಾರೆ. ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಧನಾರೀಶ್ವರನ್ನಾದರೂ ಮಾಡಲಿ ಎಂದು ಹೇಳುವ ಬದಲು ‘ಅರ್ಧನಾರೀಶ್ವರ ಪ್ರತಿಮೆ’ ಮಾಡಲಿ ಎಂದು ಹೇಳಿಕೆ ಕೊಟ್ಟಿದ್ದರೆ ಬಹುಶಃ ನಿಮಿಗೆ ಲಾಭವಾಗುತ್ತಿತ್ತು” ಎಂದು ಕುಟುಕಿದ್ದಾರೆ.
“ನಾರಿ ಶಕ್ತಿ, ನಾರಿ ತತ್ವದ ಉಪದೇಶ ನಿಮ್ಮ ಸಂಘದ ಸರ ಸಂಘ ಸಂಚಾಲಕರಿಗೆ ಮಾಡುವಿರಂತೆ, ಇಲ್ಲಿಯವರೆಗೂ ಬಿಜೆಪಿ ಪಕ್ಷ ಒಬ್ಬೇ ಒಬ್ಬ ಮಹಿಳೆಯನ್ನ ಯಾಕೆ ಅಧ್ಯಕ್ಷರನ್ನಾಗಿ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಇದ್ಯಾ? ಅಥವಾ “ಮಹಿಳೆ ನಾಲ್ಕು ಗೋಡೆಯಲ್ಲೇ ಬದುಕಬೇಕು” ಎಂದು ಮೋಹನ್ ಭಾಗವತ್ ಹೇಳಿಕೆಯಲ್ಲೇ ಉತ್ತರವಿದ್ಯಾ?” ಎಂದು ಪ್ರಶ್ನಿಸಿದ್ದಾರೆ.
“ಮಹಿಳೆಯರಿಗೆ ಗೌರವ ನೀಡುವ, ಸ್ಥಾನಮಾನ ಕೊಡುವ, ಸ್ವಾಭಿಮಾನದ ಬದುಕಿಗೆ ಅರ್ಥ ನೀಡುವ ಯಾವ ಮಾನದಂಡವೂ ಬಿಜೆಪಿಯ ಡಿಎನ್‌ಎ ಅಲ್ಲೇ ಇಲ್ಲ. ಅಷ್ಟಕ್ಕೂ ರಾಮ-ಪರಶುರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಮಾಯಕ ಜನರ ತೆರಿಗೆ ಹಣವನ್ನು ಜೇಬಿಗೆ ಇಳಿಸಿಕೊಂಡಂತೆ ಸುಲಭವಲ್ಲ ನಾರಿ ಶಕ್ತಿ ಬಗ್ಗೆ ಮಾತಾಡುವುದು. ಕರಾವಳಿಯ ಬಿಜೆಪಿ ಯುವಕರ ಪಟಾಲಂ ಮಹಿಳೆಯರನ್ನ, ಯುವತಿಯರನ್ನ ಯಾಮಾರಿಸಿ ಅತ್ಯಾಚಾರ ನಡೆಸಿ ಮೋಸ ಮಾಡುತ್ತಿರುವುದರ ವಿರುದ್ಧ ತುಟಿ ಬಿಚ್ಚದ ನಿಮಿಗೆ ಅದ್ಯಾವ ನಾರಿ ಶಕ್ತಿ, ನಾರಿ ತತ್ವದ ಬಗ್ಗೆ ಮಾತಾಡುವ ನೈತಿಕತೆ ಇದೆ?” ಎಂದು ಟೀಕಾ ಪ್ರಹಾರ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ನಾಯಕಿಯರನ್ನು ನೇಮಕ ಮಾಡುವ ಕುರಿತು ಕೇಂದ್ರ ಬಿಜೆಪಿ ನಾಯಕರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಬಿ.ಕೆ ಹರಿಪ್ರಸಾದ್, “ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅರ್ಧನಾರೀಶ್ವರರನ್ನು ಬೇಕಾದರು ಹುಡುಕಿಕೊಳ್ಳಲಿ” ಎಂದಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿರುಗೇಟು ನೀಡಿದ್ದ ಸುನೀಲ್ ಕುಮಾರ್, “ಮಾನ್ಯ ಹರಿಪ್ರಸಾದ್ ಅವರೇ, ಮೊದಲನೆಯದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಅಧ್ಯಕ್ಷರ ಆಯ್ಕೆ ಮಾಡುವುದಕ್ಕೆ ಬಿಜೆಪಿ ತನ್ನದೇ ಆದ ನಿಯಮ ಹಾಗೂ ಪದ್ಧತಿಯನ್ನು ಹೊಂದಿದ್ದು ಆ ಪ್ರಕ್ರಿಯೆಯ ಭಾಗ ಈಗ ಅಂತಿಮ ಹಂತಕ್ಕೆ ತಲುಪಿದೆ. ”
“ದಶಕಗಳ ಕಾಲ ಎಐಸಿಸಿ ಅಖಾಡದಲ್ಲಿ ಅಲೆದಾಡಿದ ನಿಮಗೆ ಪ್ರತಿಸ್ಪರ್ಧಿ ರಾಜಕೀಯ ಪಕ್ಷವೊಂದರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಸಾಮಾನ್ಯ ಜ್ಞಾನದ ಕೊರತೆ ಇರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ” ಎಂದಿದ್ದರು.
“ಇನ್ನು ಎರಡನೆಯದಾಗಿ ತಾವು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ” ಅರ್ಧನಾರೀಶ್ವರ” ನನ್ನು ಬೇಕಾದರೂ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಭಾರತೀಯ ತತ್ವಶಾಸ್ತ್ರದ ಮಹೋನ್ನತ ಚಿಂತನೆಯೊಂದನ್ನು ಅಣಕ ಮಾಡಿದ್ದೀರಿ. ಅರ್ಧನಾರೀಶ್ವರ ಎಂಬುದರ ಅರ್ಥ ವಿಸ್ತಾರವನ್ನು ನಿಮಗೆ ಪಾಠ ಮಾಡಬೇಕಾದ ಅನಿವಾರ್ಯತೆ ನಮಗಿಲ್ಲ”
“ಆದರೆ ಈ ಪದವನ್ನು ವ್ಯಂಗ್ಯಕ್ಕೆ ಬಳಸಿಕೊಂಡ ನೀವು ನಾರೀ ಶಕ್ತಿ ಹಾಗೂ ನಾರಿ ತತ್ವವನ್ನೇ ಅಪಮಾನಕ್ಕೆ ಗುರಿ ಮಾಡಿದ್ದೀರಿ. ಇತ್ತೀಚಿನ ದಿನಗಳಲ್ಲಿ ಅತೀವವಾಗಿ ಮಹಿಳಾಪರ ಕಾಳಜಿ ವ್ಯಕ್ತಪಡಿಸುತ್ತಿರುವ ನಿಮ್ಮ ಪಕ್ಷ ಈ ವಿಚಾರವನ್ನು ಹೇಗೆ ಗ್ರಹಿಸುತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿ ಎಂದು ನಾವು ಬಯಸುವುದಿಲ್ಲ” ಎಂದು ಹೇಳಿದ್ದರು.
ಸುನೀಲ್ ಕುಮಾರ್ ಅವರ ಮೇಲಿನ ಪೋಸ್ಟ್‌ಗೆ ಹರಿಪ್ರಸಾದ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.