ಬಾಪೂ ಮತ್ತೆ ಹುಟ್ಟಿ ಬರಬೇಡ…..!!!
———————————
ಬಾಪೂ ಮತ್ತೆ ಹುಟ್ಟಿ ಬರಬೇಡ
ನೀ ಕಂಡ ಗೋಡ್ಸೆಗೆ ಕವಲೊಡೆದಿದೆ
ಬೀದಿ ಬೀದಿಯಲಿ ಅವರದೇ
ಕಾರುಭಾರು!
ನೀನಂದುಕೊಂಡಂತಿಲ್ಲ
ನಿನ್ನ ಭಾರತ
ನೀ, ಮತ್ತೆ ಹುಟ್ಟಿ ಬರಬೇಡ
ಹಾಡು ಹಗಲಲೂ ಅವಳ
ಕಾಡುತಿದೆ ಭಯ
ಇನ್ನು ನಟ್ಟಿರುಳ ಮಾತೆಲ್ಲಿ?
ನೀನಂದುಕೊಂಡಂತಿಲ್ಲ
ನಿನ್ನ ಭಾರತ
ಬಾಪೂ ಮತ್ತೆ ಹುಟ್ಟಿ ಬರಬೇಡ
ಗೋಡ್ಸೆಗೆ ಮಂದಿರ ಕಟ್ಟಿ ಪೂಜಿಸುವಾಗ
ದಲಿತನಿಗೆ ಅದರ ಬಾಗಿಲು
ತೆರೆಯುವುದಾದರೂ ಹೇಗೆ?
ನೀನಂದುಕೊಂಡಂತಿಲ್ಲ
ನಿನ್ನ ಭಾರತ
ನೀ ಮತ್ತೆ ಹುಟ್ಟಿ ಬರಬೇಡ
ನಿನ್ನ ಹೆಸರನಿಟ್ಟ ಸಂಸ್ಥೆಗೂ
ಮದ್ಯದ ದೊರೆಗಳೇ
ಅಧಿಪರಾದಾಗ
ಮದ್ಯ ನಿಷೇಧ ಬರಿ ಪ್ರಹಸನ!
ನೀನಂದುಕೊಂಡಂತಿಲ್ಲ
ನಿನ್ನ ಭಾರತ
ಬಾಪೂ ಮತ್ತೆ ಹುಟ್ಟಿ ಬರಬೇಡ
ನಿನ್ನೆದೆಯ ಸೀಳಿಯಾಗಲಿ
ದೇಶ ವಿಭಜನೆಯೆಂದೆ
ದೇಶವೇ ಟಿಸಿಲೊಡೆದು ನಿಂತಿದೆ
ನೀನಂದುಕೊಂಡಂತಿಲ್ಲ
ನಿನ್ನ ಭಾರತ
ನೀ ಮತ್ತೆ ಹುಟ್ಟಿ ಬರಬೇಡ
ಹಿಟ್ಲರನು ಈ ನೆಲವನಾಳುತಿರಲು
ಖಲೀಫ ಉಮರನ
ಆಡಳಿತದ ಕನಸು
ನಿನ್ನ ಕನಸಿಗಷ್ಟೇ ಸೀಮಿತ
ನೀನಂದುಕೊಂಡಂತಿಲ್ಲ
ನಿನ್ನ ಭಾರತ
ಬಾಪೂ ಮತ್ತೆ ಹುಟ್ಟಿ ಬರಬೇಡ
ಭ್ರಮನಿರಸನನಾಗುವುದು ಖಚಿತ
ಕೋಮುವೈಭವವ ಕಂಡು
ನಿನ್ನ ಕನಸುಗಳೆಲ್ಲಾ
ಸಮಾಧಿಯಾಗಿವೆಯಿಲ್ಲಿ
ನೀನಂದುಕೊಂಡಂತಿಲ್ಲ
ನಿನ್ನ ಭಾರತ…


