ಪರಿಶಿಷ್ಟ ಜಾತಿ ಮತ್ತು ಪಂಗಡದ (ಎಸ್‌ಸಿ/ಎಸ್‌ಟಿ) ಒಳ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ವಿರೋಧಿಸಿ ‘ಮೀಸಲಾತಿ ಬಚಾವೋ ಸಂಘರ್ಷ ಸಮಿತಿ’ಯು ಇಂದು (ಆ. 21) ಭಾರತ ಬಂದ್‌ಗೆ ಕರೆ ನೀಡಿದೆ. ದಲಿತ, ಆದಿವಾಸಿ ಸಂಘಟನೆಗಳು ಮತ್ತು ಕೆಲ ರಾಜಕೀಯ ಪಕ್ಷಗಳು ಬೆಂಬಲಿಸಿವೆ.
ಎಸ್‌ಸಿ, ಎಸ್‌ಟಿ ವರ್ಗಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಇದರ ವಿರುದ್ದ ಉತ್ತರ ಭಾರತದಲ್ಲಿ ಮುಖ್ಯವಾಗಿ ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರಗಳಲ್ಲಿ ಅಸಮಧಾನ ವ್ಯಕ್ತವಾಗಿದೆ. ಹಾಗಾಗಿ, ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಬಂದ್ ಆಗದಿದ್ದರೂ, ಅಲ್ಲಲ್ಲಿ ಪ್ರತಿಭಟನೆಗಳು ನಡೆಯುವ ಸಾಧ್ಯತೆಯಿದೆ.
ಮೀಸಲಾತಿ ವಿಷಯ ಮಾತ್ರವಲ್ಲದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ನ್ಯಾಯ ಮತ್ತು ಸಮಾನತೆ ಒದಗಿಸುವುದೂ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ದಲಿತ ಮತ್ತು ಆದಿವಾಸಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟವು (ಎನ್‌ಎಸಿಡಿಎಒಆರ್) ಸರ್ಕಾರದ ಮುಂದಿಟ್ಟಿದೆ.
#WATCH | Bihar: Visuals from Jehanabad where Bharat Bandh supporters have blocked the NH 83 in Unta.
The 'Reservation Bachao Sangharsh Samiti' are observing a day-long Bharat Bandh today to protest the Supreme Court's recent judgment on reservations. pic.twitter.com/vIdlGbxMbi
— ANI (@ANI) August 21, 2024
ಬಂದ್ ವೇಳೆ ದೇಶದಾದ್ಯಂತ, ಮುಖ್ಯವಾಗಿ ರಾಜಸ್ಥಾನದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ. ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕ ಯು.ಆರ್ ಸಾಹೂ ಅವರು ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಂದ್‌ಗೆ ಕರೆ ಕೊಟ್ಟಿರುವ ಸಂಘಟನೆಗಳ ಜೊತೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಂದ್ ವೇಳೆ ಆಸ್ಪತ್ರೆಗಳು, ತುರ್ತು ಆಂಬ್ಯುಲೆನ್ಸ್ ಸೇವೆಗಳು, ವೈದ್ಯಕೀಯ ಸೇವೆಗಳು, ಪೊಲೀಸ್ ಸೇವೆಗಳು ಎಂದಿನಂತೆ ಇರಲಿದೆ. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಶಾಲಾ-ಕಾಲೇಜುಗಳು ಕೂಡಾ ತೆರೆದಿರಲಿದೆ ಎಂದು ವರದಿಯಾಗಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿರುವ ಸಾಧ್ಯತೆ ಹಿನ್ನೆಲೆ, ಪೊಲೀಸರು ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ರಾಹುಲ್ ಪೌರತ್ವ ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಅರ್ಜಿ; ಪಿಐಎಲ್ ಪೀಠಕ್ಕೆ ವರ್ಗಾಯಿಸಿದ ದೆಹಲಿ ಹೈಕೋರ್ಟ್


