1818 ರ ಆಂಗ್ಲೋ-ಮರಾಠಾ ಯುದ್ಧದ ನೆನಪಿಗಾಗಿ ಪುಣೆಯಿಂದ 40 ಕಿ.ಮೀ ದೂರದಲ್ಲಿರುವ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಐದು ಲಕ್ಷ ದಲಿತರು ಒಟ್ಟುಗೂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರವು ಸುಮಾರು 10,000 ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಿದೆ ಮತ್ತು ಇಂಟರ್ನೆಟ್ ಪ್ರವೇಶವನ್ನು ಸ್ಥಗಿತಗೊಳಿಸಿದೆ ಎಂದು ಪುಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವದಂತಿಯನ್ನು ತಡೆಯಲು ಸರ್ಕಾರವು ಕಾರ್ಯಕ್ರಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಾಲವನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಪುಣೆ ಜಿಲ್ಲಾಧಿಕಾರಿ ನೇವಲ್ ಕಿಶೋರ್ ರಾಮ್ ಈ ಹಿಂದೆ ಸೂಚಿಸಿದ್ದರು. ಸುಮಾರು ಐದು ಲಕ್ಷ ಜನರು ಈಗಾಗಲೇ ಸ್ಥಳದಲ್ಲಿ ಜಮಾಯಿಸಿದ್ದಾರೆ ಎಂದು ವಿಶೇಷ ಇನ್ಸ್‌ಪೆಕ್ಟರ್ ಜನರಲ್ (ಕೊಲ್ಹಾಪುರ ಶ್ರೇಣಿ) ಸುಹಾಸ್ ವಾಡ್ಕೆ ತಿಳಿಸಿದ್ದಾರೆ. ಸ್ಮಾರಕದ ಬಳಿ ಒಟ್ಟು ಸೇರುವ ಜನರ ಸಂಖ್ಯೆ ಇನ್ನು ಸಹ ಏರಿಕೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಇಲ್ಲಿ 10 ಲಕ್ಷ ಜನರು ಭಾಗವಹಿಸಿದ್ದರು.
ಇಂದು ಮುಂಜಾನೆಯೆ ಸ್ಮಾರಕಕ್ಕೆ ಭೇಟಿ ನೀಡಿ ಹೂ ಅರ್ಪಿಸಿದವರಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಪ್ರಮುಖ ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್ ಸೇರಿದ್ದಾರೆ. ಹಲವು ಮಂತ್ರಿಗಳು ಸಹ ಭಾಗವಹಿಸುವ ನಿರೀಕ್ಷೆಯಿದೆ.
1818ರ ಸಮಯದಲ್ಲಿ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಮಹರ್ ಸಮುದಾಯದ ಸೈನಿಕರು ಜಾತಿ ತಾರತಮ್ಯ, ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು ಮೇಲ್ಜಾತಿ ಪೇಶ್ವೆಗಳ ವಿರುದ್ಧದ ಮೂರನೇ ಆಂಗ್ಲೋ-ಮರಾಠಾ ಯುದ್ದದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವನ್ನು ಬೆಂಬಲಿಸಿದರು. ಕೇವಲ 500 ಜನ ದಲಿತ ಸೈನಿಕರು ದಿಟ್ಟ ಹೋರಾಟದ ಮೂಲಕ ಪೇಶ್ವೆ ಸೈನ್ಯವನ್ನು ಮಣಿಸಿದ ನೆನಪಿಗಾಗಿ ಇಲ್ಲಿ ಪ್ರತಿವರ್ಷ ವಿಜಯೋತ್ಸವ ಆಚರಿಸಲಾಗುತ್ತದೆ.
ಆ ಯುದ್ಧದ ವಿಜಯದ ನೆನಪಿಗಾಗಿ ಭೀಮಾ ಕೋರೆಗಾಂವ್‌ನಲ್ಲಿ ಸ್ಮಾರಕ ‘ಜೈ ಸ್ತಂಭ’ ಸ್ಥಾಪಿಸಲಾಗಿದೆ. ಅಲ್ಲಿ ವಿಜಯದ 202 ನೇ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. ಆದರೆ ಎರಡು ವರ್ಷಗಳ ಹಿಂದೆ ಭೀಮಾ ಕೋರೆಗಾಂವ್‌ನಲ್ಲಿ 2018 ರ ಸಂಭ್ರಮಾಚರಣೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದರು.
ಈ ಕುರಿತು ಹಲವಾರು ದಲಿತ ಚಿಂತಕರ ಮೇಲೆ ಕೇಸುಗಳು ದಾಖಲಾಗಿವೆ. ಅವೆಲ್ಲವೂ ಸುಳ್ಳು ಕೇಸುಗಳಾಗಿದ್ದು, ಅವುಗಳನ್ನು ಹಿಂಪಡೆಯಬೇಕೆಂದು ಬಹಳಷ್ಟು ಹೋರಾಟಗಾರರು ಒತ್ತಾಯಿಸುತ್ತಲೇ ಇದ್ದಾರೆ.
ಈ ಬಾರಿಯ ಭದ್ರತೆ ಮತ್ತು ಜನಸಮೂಹ ನಿರ್ವಹಣಾ ವ್ಯವಸ್ಥೆಗಳು ತೃಪ್ತಿದಾಯಕವಾಗಿದ್ದವು ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.



Now a days one modern ” Periyar” is essential