Homeಮುಖಪುಟತುಮಕೂರು: ಫುಡ್ ಪಾರ್ಕ್ ನಲ್ಲಿ ಉದ್ಯೋಗವೂ ಇಲ್ಲ - ಎಚ್ಎಎಲ್ ಹೆಲಿಕಾಪ್ಟರ್ ಹಾರಲೇ ಇಲ್ಲ

ತುಮಕೂರು: ಫುಡ್ ಪಾರ್ಕ್ ನಲ್ಲಿ ಉದ್ಯೋಗವೂ ಇಲ್ಲ – ಎಚ್ಎಎಲ್ ಹೆಲಿಕಾಪ್ಟರ್ ಹಾರಲೇ ಇಲ್ಲ

- Advertisement -
- Advertisement -

ಜನವರಿ 2 ಅಂದರೆ ನಾಳೆ ತುಮಕೂರಿಗೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ಎಲ್ಲರಲ್ಲಿಯೂ ಹರ್ಷ. ಆದರೆ ಹಿಂದಿನ ಕಥೆ ಸ್ವಲ್ಪ ನೋಡಿದರೆ ಬೇಸರವಾಗುತ್ತದೆ. ಏನದು ನೋಡೋಣ ಬನ್ನಿ.

ತುಮಕೂರು ನಗರದ ಹೊರವಲಯದಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ದೇಶದ ಮೊದಲ ಆಹಾರ ಸಂಸ್ಕರಣಾ ಘಟಕ ಆರಂಭವಾಗಿ ಆರು ವರ್ಷ ಕಳೆದಿದೆ. ಈವರೆಗೆ ಈ ಘಟಕದಿಂದ ಹೇಳಿಕೊಳ್ಳುವಂಥ ಕೆಲಸಗಳೇ ಆಗಿಲ್ಲ. ಪ್ರಧಾನಿಯ ಭರವಸೆಯಂತೆ ಉದ್ಯೋಗ ಸೃಷ್ಟಿಯಾಗಿಲ್ಲ. ರೈತರಿಗೆ ಯಾವುದೇ ಪ್ರಯೋಜನ ಕೂಡ ಆಗಿಲ್ಲ. ಲೆಕ್ಕಕ್ಕೆ ಮಾತ್ರ ಆಹಾರ ಸಂಸ್ಕರಣ ಘಟಕ, ಸಾಧನೆ ಮಾತ್ರ ಶೂನ್ಯ. ರೈತರ ನೆರವಿಗೆ ಆಸರೆಗೆ ಬರಬೇಕಾಗಿದ್ದ ಈ ಘಟಕ ಇದ್ದೂ ಇಲ್ಲದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣ ಪುಸ್ತಕದ ಬದನೆಕಾಯಿ ಎಂಬಂತಾಗಿದೆ.

ಅದು 2014ನೇ ವರ್ಷ. ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಹಿಡಿದರು. ಪ್ರಧಾನಿಯಾದ ಹೊಸದು, ಹುಮ್ಮಸ್ಸು ತುಳುಕುತ್ತಿತ್ತು. ಅದೇ ಹೊತ್ತಲ್ಲಿ  ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಧಾನಿ ಮೋದಿ ದಕ್ಷಿಣ ಯಾತ್ರೆ ಕೈಗೊಂಡರು. ತುಮಕೂರಿಗೆ ಭೇಟಿ ನೀಡಿ ವಸಂತನರಸಾಪರುದಲ್ಲಿ ಆಹಾರ ಸಂಸ್ಕರಣಾ ಘಟಕ ಉದ್ಘಾಟನೆ ಮಾಡಿದರು. ಆಗ 10 ಸಾವಿರ ನೇರ ಉದ್ಯೋಗ, ಸುಮಾರು 25 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತವೆ. 12 ಜಿಲ್ಲೆಗಳ ರೈತರಿಗೆ ಇದರ ಉಪಯೋಗವಾಗುತ್ತದೆ. ರೈತರು ಬೆಳೆದ ತರಕಾರಿ, ಹಣ್ಣು ಮೊದಲಾದ ವಸ್ತುಗಳನ್ನು ಶೀತಲ ಘಟಕದಲ್ಲಿ ಕೆಡದಂತೆ ಸಂಗ್ರಹಿಸಿಡಬಹುದು ಎಂದು ಭವರಸೆ ನೀಡಿ ಹೋದರು.

ಪ್ರಧಾನಿ ಭರವಸೆ ನೀಡಿ ಆರು ವರ್ಷಗಳು ಉರುಳಿದ ಮೇಲೆ ಅಲ್ಲಿ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ರೈತರಿಗೂ ಅನುಕೂಲವಾಗಲಿಲ್ಲ. ಕೋಟ್ಯಂತರ ರೂಪಾಯಿ ಮಾತ್ರ ನಷ್ಟವಾಯಿತು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಘಟಕದಿಂದ ಪ್ರಧಾನಿ ಹೇಳಿದಷ್ಟು ನೇರ- ಪರೋಕ್ಷ ಉದ್ಯೋಗ ಸೃಷ್ಟಿಯಾಗಲೇ ಇಲ್ಲ. ಕೇವಲ 200 ಮಂದಿ ಕಾಯಂ ನೌಕರರು, 800 ಮಂದಿ ಗುತ್ತಿಗೆ ನೌಕರರು ಈಗ ದುಡಿಯುತ್ತಿದ್ದಾರೆ.  ಕಾಯಂ ಹುದ್ದೆಗಳಿಗೆ ಉತ್ತರ ಭಾರತದವರು ನೇಮಕವಾಗಿದ್ದರೆ, ಕಸ ಹೊಡೆಯುವುದು, ಕಸ ಹೊತ್ತುಹಾಕುವುದು ಮೊದಲಾದ ಸಣ್ಣಪುಟ್ಟ ಕೆಲಸಗಳಿಗೆ ಸ್ಥಳೀಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದಾರೆ.  ಉತ್ತರ ಭಾರತದ ಕಾಯಂ ನೌಕರರಿಗೆ ಹೆಚ್ಚು ವೇತನ, ಸ್ಥಳೀಯರಿಗೆ 7-8 ಸಾವಿರ ರೂಪಾಯಿ ನೀಡಿ ವೇತನ ಮತ್ತು ಕೆಲಸ ನೀಡುವಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸ್ಥಳೀಯರಿಂದ ಬಿಟ್ಟಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಕಾರ್ಮಿಕರು ದೂರಿದ್ದಾರೆ.

ಕೃಷಿ ಸಲಕರಣೆಗಳ ಅಬಿವೃದ್ದಿ, ಸಂಸ್ಕರಣೆಯ ಮೌಲ್ಯವರ್ಧನೆ, ಸುಗ್ಗಿಯ ನಂತರ ಸೌಲಭ್ಯ, ತಾಂತ್ರಿಕ ಸಹಾಯ ನೀಡುವುದು ಘಟಕ ಉದ್ದೇಶವೆಂದು ಇಂಡಿಯ ಫುಡ್ ಪಾರ್ಕ್ ಡಾಟ್ ಕೊ ಡಾಟ್ ಇನ್ ನಲ್ಲಿ ಹೇಳಿದ್ದು ಇದಕ್ಕೆ ಪೂರಕವಾಗಿ ಕೆಲಸ ಮಾಡದೇ ಇರುವುದು ಕಂಡು ಬಂದಿದೆ. ಅಷ್ಟೇ ಅಲ್ಲ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯೂ ಆಗಿಲ್ಲ. ಸುಸ್ಥಿರ ಕೃಷಿಮೌಲ್ಯ ಸಂಪರ್ಕ ಜಾಲವೂ ಸೃಷ್ಟಿಸುವಲ್ಲಿ ಈ ಘಟಕ ವಿಫಲವಾಗಿದೆ. ಉನ್ನತಗುಣಮಟ್ಟದ ಗ್ರಾಮೀಣ ಸಂಸ್ಕರಣಾ ಸೌಲಭ್ಯವನ್ನು ಕಲ್ಪಿಸುವುದು ಕೇವಲ ಕನಸಿನ ಮಾತಾಗಿದೆ. ಇದುವರೆಗೆ ರೈತರಿಗೆ ಬೇಗ ಹಾಳಾಗುವಂತಹ ಟಮೋಟೋ, ಈರೇಕಾಯಿ, ಉರುಳಿಕಾಯಿ, ಬದನೆ ಸೇರಿದಂತೆ ಯಾವುದೇ ತರಕಾರಿಗಳನ್ನು ಸಂಸ್ಕರಣೆ ಮಾಡುವ ಗೋಜಿಗೇ ಹೋಗಿಲ್ಲ. ಉತ್ಪಾದನೆ ಮತ್ತು ಸಂಸ್ಕರಣೆ ಸಾಮರ್ಥ್ಯ ಹೆಚ್ಚಿಸುವಂತಹ ಪ್ರಯತ್ನಗಳನ್ನು ಆಹಾರ ಸಂಸ್ಕರಣ ಘಟಕದಲ್ಲಿ ಮಾಡಿಲ್ಲ.

ಪ್ರಧಾನಿ ನರೇಂದ್ರ ಮೋದಿ ಈ ಘಟಕದಿಂದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಬೆಂಗಳೂರು ನಗರ ಹೀಗೆ ಸುಮಾರು 12 ಜಿಲ್ಲೆಯ ರೈತರು ತಾವು ಬೆಳೆದ ತರಕಾರಿ ಮತ್ತು ಹಣ್ಣಿನ ಬೆಳೆಗಳನ್ನು ಈ ಘಟಕದಲ್ಲಿ ಸಂರಕ್ಷಣೆ ಮಾಡಬಹುದು ಎಂದು ಹೇಳಿದ್ದರು. ಈ ಕಾರ್ಯವೂ ಆಗಿಲ್ಲ. ಇದು ಲಾಭವಾಗಿದ್ದು ಮಾತ್ರ ಉತ್ತರ ಭಾರತದ ಮಾರ್ವಾಡಿ ಮಾಲಿಕನಿಗೆ. ಆಹಾರ ಸಂಸ್ಕರಣ ಮುಚ್ಚಿಹೋಗುವ ಹಂತದಲ್ಲಿದ್ದು, ಮಾಲಿಕ ಆ ಘಟಕವನ್ನೇ ಬೇರೆಯವರಿಗೆ ಲಾಭಕ್ಕೆ ಮಾರಲು ತುದಿಗಾಲಲ್ಲಿ ನಿಂತಿದ್ದಾರೆ. ಅಂದರೆ ಘಟಕ ಉದ್ದೇಶವೇ ಹಾಳಾಗಿದ್ದು ಹಣವೂ ಪೋಲಾಗಿದೆ. ಇದನ್ನು ಕೇಳುವವರು ಯಾರೂ ಇಲ್ಲ.

ಎಚ್‌ಎಎಲ್‌ ಕಥೆ ಭಿನ್ನವಲ್ಲ!

2016 ಮಾರ್ಚ್ 8 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್ ನಲ್ಲಿ ಹಿಂದೂಸ್ತಾನ ಏರೋನಾಟಿಕ್ ಲಿಮಿಟೆಡ್ ಸಂಸ್ಥೆಯಡಿ ಲಘು ಯುದ್ದ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. 2018ರ ಡಿಸೆಂಬರ್ ಅಂತ್ಯಕ್ಕೆ ಮೊದಲ ಹೆಲಿಕಾಪ್ಟರ್ ಹಾರಲಿದೆ ಎಂದು ಅಂದಿನ ವೇದಿಕೆಯಲ್ಲಿ ಭಾಷಣ ಮಾಡಿ ಹೇಳಿದರು. ಪ್ರಧಾನಿ ಈ ಮಾತುಗಳನ್ನಾಡಿ ಮೂರು ವರ್ಷ ಕಳೆದರೂ ಹೆಲಿಕಾಪ್ಟರ್ ಹಾರಲೇ ಇಲ್ಲ. ಪ್ರಧಾನಿ ಮೋದಿ ಅವರ ಎರಡನೇ ಭರವಸೆಯೂ ಸುಳ್ಳಾಗಿದೆ.

ಎಚ್.ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಸ್ಥಾಪನೆಗೆ ಸಣ್ಣ ಮತ್ತು ಅತಿಸಣ್ಣ ರೈತರಿಂದ ಅಕ್ಷರಶಃ ಭೂಮಿಯನ್ನು ಕಸಿದುಕೊಳ್ಳಲಾಯಿತು. ಹಲವು ವರ್ಷಗಳಿಂದ ಅದೇ ಭೂಮಿಯನ್ನು ನೆಚ್ಚಿಕೊಂಡು ಬರುತ್ತಿದ್ದ ರೈತರಿಗೆ ಭೂಮಿಯೇ ಇಲ್ಲವಾಯಿತು. ಬಗರ್ ಹುಕುಂ ಸಾಗುವಳಿದಾರರನ್ನು ಬೆದರಿಸಿ ಭೂಮಿ ಕಿತ್ತುಕೊಂಡರು. ಸುಮಾರು 40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ 70 ಕುಟುಂಬಗಳಿಗೆ ಭೂಮಿಯೂ ಇಲ್ಲ, ಪರಿಹಾರವನ್ನೂ ನೀಡಿಲ್ಲ. ಗೋಮಾಳದಲ್ಲಿ ಉಳುಮೆ ಮಾಡುವ ಜೊತೆಗೆ ಅಲ್ಲಿಯೆ ಗುಡಿಸಲು ನಿರ್ಮಿಸಿ ವಾಸ ಮಾಡುತ್ತಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬೆದರಿಸಿ ಬೇರೆ ಸ್ಥಳಾಂತರ ಮಾಡುವಂತೆ ಮಾಡಲಾಗಿದೆ.

ಕೆಲವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ವಿಚಾರಣೆಯ ಹಂತದಲ್ಲಿವೆ. ಇದರ ನಡುವೆಯೂ 615 ಎಕರೆ ಭೂಮಿಯಲ್ಲಿ ಹೆಲಿಕಾಪ್ಟರ್ ತಯಾರಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಆದರೆ ರಕ್ಷಣಾ ಇಲಾಖೆಯಿಂದ ಬೇಡಿಕೆ ಪತ್ರ ಬಂದಿಲ್ಲ. ಹೀಗಾಗಿ ಹೆಲಿಕಾಪ್ಟರ್ ತಯಾರಿಸುವುದನ್ನು ಇಂದಿಗೂ ಆರಂಭಿಸಿಲ್ಲ. 2018ರ ಡಿಸೆಂಬರ್ ಅಂತ್ಯದೊಳಗೆ ಹೆಲಿಕಾಪ್ಟರ್ ಹಾರುತ್ತದೆ ಎಂಬ ಮೋದಿ ಮಾತುಗಳು ಹುಸಿಯಾಗಿವೆ. ಎರಡು ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರೂ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ತಯಾರಿಕೆಗೆ ಗ್ರೀನ್ ಸಿಗ್ನಲ್ ನೀಡದೇ ಇರುವುದು ಏಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಎಚ್.ಎಎಲ್  ಹೆಲಿಕಾಪ್ಟರ್ ಘಟಕಕ್ಕೆ ಶಂಕುಸ್ಥಾಪನೆಯಾಗಿ ನಾಲ್ಕು ವರ್ಷ ಪೂರೈಸುವ ಹಂತ ತಲುಪಿದ್ದರೂ ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಪ್ರಧಾನಿ ಹೇಳಿದಂತೆ ನಾಲ್ಕು ಸಾವಿರ ಉದ್ಯೋಗವೂ ಸೃಷ್ಟಿಯಾಗಿಲ್ಲ. ಹಾಗಾಗಿ ಪ್ರಧಾನಿ ಉದ್ಘಾಟಿಸಿದ ಆಹಾರ ಸಂಸ್ಕರಣ ಘಟಕದಲ್ಲಿ ಉದ್ಯೋಗವೂ ಇಲ್ಲ. ಎಚ್ ಎಎಲ್ ಹೆಲಿಕಾಪ್ಟರ್ ಗಳು ಹಾರಲೇ ಇಲ್ಲ ಎಂದು ಜನ ನಗುವಂತಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾರತ ದೇಶಕ್ಕೆ ನರೇಂದ್ರ ಮೋದಿ ಮಾರಕವಾಗಿ ಇದ್ದಾರೆ ಮೋದಿಯ ಭಾಷಣ ಮಾಸ್ತ್ರ ಐಲೆಟ್ ಆಗಿರುತ್ತೆ ಅಷ್ಟೇ
    ಹಿಂದುತ್ವದ ಹೆಸರಿನಲ್ಲಿ ಮೋಹನ್ ಭಗವತ್ ರವರ ಕುಚೇಲನ್ ಆಗಿ ಕಾರ್ಯನಿರ್ವಹಿಸುತ್ತಿರುವ ನರೇಂದ್ರ ಮೋದಿಯವರು
    ಉದ್ಯೋಗ ಸೃಷ್ಟಿಸಲು ತುಮಕೂರು ಒಂದರ ಕಥೆಯಲ್ಲ ಇಡೀ ದೇಶವೇ ತಲೆಕೆಳಗಾಗುವ ಗತಿ ಬಂದಿದೆ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...