ಭೀಮಾ ಕೊರೆಗಾಂವ್-ಎಲ್ಗರ್ ಪರಿಷತ್ ಪ್ರಕರಣದಲ್ಲಿ ಸಿಲುಕಿ ಮುಂಬೈನ ಖಾಸಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು ಅವರ ಆರೋಗ್ಯ ವರದಿಯನ್ನು ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ಆರೋಗ್ಯದ ಆಧಾರದ ಮೇಲೆ ಹನಿ ಬಾಬು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಅವರ ಪತ್ನಿ ಜೆನ್ನಿ ರೋವೆನ್ನಾ ಅವರು ಸಲ್ಲಿಸಿದ್ದ ಅರ್ಜಿಯನ್ನು, ನ್ಯಾಯಮೂರ್ತಿ ಎಸ್.ಎಸ್. ಶಿಂಧೆ ಮತ್ತು ನ್ಯಾಯಮೂರ್ತಿ ಎನ್.ಜೆ. ಜಮದಾರ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: ಜೈಲು ಅಧಿಕಾರಿಗಳಿಂದ ಚಿಕಿತ್ಸೆ ವಿಳಂಬ: ಸೋಂಕಿನಿಂದ ಹದಗೆಟ್ಟ ಪ್ರಾಧ್ಯಾಪಕ ಡಾ. ಹನಿ ಬಾಬು ಅವರ ಕಣ್ಣು
ಕಳೆದ ತಿಂಗಳ ಅವರ ವೈದ್ಯಕೀಯ ವರದಿಯಲ್ಲಿ ಅವರ ಕಣ್ಣಿನ ನರದಲ್ಲಿ ಊತ ಇರುವುದರಿಂದ ಎಂಆರ್‌ಐ ಸ್ಕ್ಯಾನ್ ಮತ್ತು ಇತರ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದರಿಂದ, ನ್ಯಾಯಾಲಯವು ಅವರನ್ನು ಮುಂದಿನ ಆದೇಶದವರೆಗೂ ಆಸ್ಪತ್ರೆಯಲ್ಲಿರಲು ಆದೇಶ ನೀಡಿತ್ತು.
ಆದರೆ, ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಎರಡು ತಿಂಗಳ ಚಿಕಿತ್ಸೆಯ ನಂತರ ಹನಿಬಾಬು ಅವರ ಕಣ್ಣಿನ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಅವರನ್ನು ಪ್ರತಿನಿಧಿಸುವ ವಕೀಲ ಪಯೋಶಿ ರಾಯ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಕಣ್ಣಿನ ಒಂದು ಕಡೆಯಲ್ಲಿ ಮಾತ್ರ ಸ್ವಲ್ಪ ಊತ ಉಳಿದಿದೆ, ಇದನ್ನು ರೋಗ ನಿರೋಧಕಗಳನ್ನು ನೀಡಿ ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: `ಸೆರೆಮನೆಯಲ್ಲಿ ನಿರಪರಾಧಿ’ – ಪ್ರೊ. ಹನಿಬಾಬು ಅವರ ಕುಟುಂಬ ನಮ್ಮೆಲ್ಲರನ್ನು ಉದ್ದೇಶಿಸಿ ಬರೆದಿರುವ ಪತ್ರ
ಹೈಕೋರ್ಟ್‌ನ ಮೇ 19 ರ ಆದೇಶದ ಪ್ರಕಾರ, ಖಾಸಗಿ ಆಸ್ಪತ್ರೆಯ ಚಿಕಿತ್ಸೆಯ ಶುಲ್ಕವನ್ನು ಹನಿ ಬಾಬು ಅವರ ಕುಟುಂಬವು ಭರಿಸಬೇಕು ಎಂಬ ಷರತ್ತಿನ ಮೇರೆಗೆ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಹನಿಬಾಬು ಅವರನ್ನು ಕಳೆದ ವರ್ಷದ ಜುಲೈನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಭೀಮಾ ಕೊರೆಗಾಂವ್-ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿಸಿತ್ತು.
ಮುಂದಿನ ವಿಚಾರಣೆಯ ಮೊದಲು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಈಗ ಖಾಸಗಿ ಆಸ್ಪತ್ರೆಗೆ ನಿರ್ದೇಶಿಸಿದೆ. ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 6 ರಂದು ನಡೆಸಲಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿಬಾಬು ಬಂಧನದಲ್ಲಿ


