ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜ ಶಾಲಾ-ಕಮಾಲ್ ಮೌಲಾ ಸಂಕೀರ್ಣದಲ್ಲಿ ವಸಂತ ಪಂಚಮಿ ಪೂಜೆ ಮತ್ತು ಶುಕ್ರವಾರದ ಜುಮಾ ನಮಾಝ್ ಎರಡನ್ನೂ ಶಾಂತಿಯುತವಾಗಿ ನಡೆಸುವಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ (ಜ.22) ನಿರ್ದೇಶನಗಳನ್ನು ನೀಡಿದೆ. ಭೋಜ ಶಾಲಾ-ಕಮಾಲ್ ಮೌಲಾದ ಧಾರ್ಮಿಕ ಸ್ವರೂಪಕ್ಕೆ ಸಂಬಂಧಿಸಿದಂತೆ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ವಿವಾದವಿದೆ.
ಜನವರಿ 23ರಂದು ವಸಂತ ಪಂಚಮಿಯ ಪ್ರಯುಕ್ತ ದಿನವಿಡೀ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವಂತೆ ಕೋರಿ ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.
ಭಾರತೀಯ ಪುರಾತತ್ವ ಇಲಾಖೆಯಿಂದ ರಕ್ಷಿಸಲ್ಪಟ್ಟ 11ನೇ ಶತಮಾನದ ಸ್ಮಾರಕವಾದ ಭೋಜ ಶಾಲೆಯನ್ನು ಹಿಂದೂಗಳು ಮತ್ತು ಮುಸ್ಲಿಮರು ವಿಭಿನ್ನವಾಗಿ ನೋಡುತ್ತಾರೆ. ಹಿಂದೂಗಳು ಇದನ್ನು ವಾಗ್ದೇವಿ (ಸರಸ್ವತಿ ದೇವತೆ) ಗೆ ಸಮರ್ಪಿತವಾದ ದೇವಾಲಯವೆಂದು ಪರಿಗಣಿಸುತ್ತಾರೆ. ಮುಸ್ಲಿಮರು ಇದನ್ನು ಕಮಾಲ್ ಮೌಲಾ ಮಸೀದಿ ಎಂದು ಪರಿಗಣಿಸುತ್ತಾರೆ. 2003ರ ಒಪ್ಪಂದದ ಪ್ರಕಾರ, ಹಿಂದೂಗಳು ಮಂಗಳವಾರ ಭೋಜ ಶಾಲೆ ಸಂಕೀರ್ಣದಲ್ಲಿ ಪೂಜೆ ಸಲ್ಲಿಸುತ್ತಾರೆ, ಮುಸ್ಲಿಮರು ಶುಕ್ರವಾರ ಅಲ್ಲಿ ನಮಾಝ್ ಮಾಡುತ್ತಾರೆ.
ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ವಾದ ಮಂಡಿಸಿ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪೂಜೆಗಳು ಮತ್ತು ಹವನಗಳು ಇರುತ್ತವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಮುಸ್ಲಿಮರ ಪರವಾಗಿ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ವಾದ ಮಂಡಿಸಿ, ಜುಮಾ ನಮಾಝ್ ಮಧ್ಯಾಹ್ನ 1 ರಿಂದ 3 ಗಂಟೆಯ ನಡುವೆ ನಡೆಯುತ್ತದೆ. ನಂತರ ಮುಸ್ಲಿಂ ಸಮುದಾಯದ ಸದಸ್ಯರು ಆವರಣವನ್ನು ಖಾಲಿ ಮಾಡುತ್ತಾರೆ ಹೇಳಿದ್ದರು. ಕೇಂದ್ರ ಮತ್ತು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಮತ್ತು ಮಧ್ಯಪ್ರದೇಶದ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ಹಾಜರಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ಇಡೀ ದಿನ ಪೂಜೆ ನಿರಂತರವಾಗಿ ನಡೆಯುವುದರಿಂದ ಸಂಜೆ 5 ಗಂಟೆಯ ನಂತರ ನಮಾಝ್ ಮಾಡಬಹುದೇ ಎಂದು ಜೈನ್ ಕೇಳಿದ್ದರು. ಜುಮಾ ನಮಾಝ್‌ಗೆ ನಿರ್ದಿಷ್ಟ ಸಮಯವಿದ್ದು, ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಖುರ್ಷಿದ್ ಸಮಸ್ಯೆ ತಿಳಿಸಿದ್ದರು.
ಮುಸ್ಲಿಮರು ನಮಾಝ್‌ಗೆ ಹಾಜರಾಗುವ ಸಾಧ್ಯತೆ ಇರುವ ವ್ಯಕ್ತಿಗಳ ಸಂಖ್ಯೆಯನ್ನು ಜಿಲ್ಲಾಡಳಿತಕ್ಕೆ ನೀಡಬಹುದು. ಇದರಿಂದ ಅವರಿಗೆ ಆವರಣದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಬಹುದು. ಜಿಲ್ಲಾಡಳಿತವು ನಮಾಝ್‌ಗೆ ಬರುವ ವ್ಯಕ್ತಿಗಳಿಗೆ ಪಾಸ್‌ಗಳನ್ನು ನೀಡುತ್ತದೆ ಎಂದು ಎಎಸ್‌ಜಿ ತಿಳಿಸಿದ್ದರು. ಇದಕ್ಕೆ ಒಪ್ಪಿದ ಖುರ್ಷಿದ್, ಇಂದು ಸಂಖ್ಯೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ವಾದ ಆಲಿಸಿದ ನ್ಯಾಯಾಲಯವು, “ಮುಸ್ಲಿಮರು ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯ ನಡುವೆ ಜುಮಾ ನಮಾಝ್ ಮಾಡಲು ಕಾಂಪೌಂಡ್ ಒಳಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಆ ಜಾಗಕ್ಕೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ದ್ವಾರಗಳಿರಬೇಕು ಎಂದು ಸೂಚಿಸಿದೆ.
ಅದೇ ರೀತಿ, ವಸಂತ ಪಂಚಮಿಯ ಪ್ರಯುಕ್ತ ಹಿಂದುಗಳಿಗೆ ಸಾಂಪ್ರದಾಯಿಕ ಸಮಾರಂಭಗಳನ್ನು ನಡೆಸಲು ಪ್ರತ್ಯೇಕ ಸ್ಥಳ ಲಭ್ಯವಾಗುವಂತೆ ಮಾಡಬೇಕು ಎಂದು ನಿರ್ದೇಶಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮುಸ್ಲಿಮರ ಪರ ವಕೀಲ ಸಲ್ಮಾನ್ ಖುರ್ಷಿದ್, ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ನಮಾಝ್‌ಗೆ ಬರುವ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಸಂಖ್ಯೆಯನ್ನು ಜಿಲ್ಲಾಡಳಿತಕ್ಕೆ ಒದಗಿಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಆಡಳಿತವು ನಮಾಝ್‌ಗೆ ಬರುವವರಿಗೆ ಪಾಸ್‌ಗಳನ್ನು ನೀಡಬಹುದು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲು ಯಾವುದೇ ಇತರ ನ್ಯಾಯಯುತ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎರಡೂ ಕಡೆಯವರು ಪರಸ್ಪರ ಗೌರವವನ್ನು ಕಾಪಾಡಿಕೊಳ್ಳಬೇಕು ಮತ್ತು ರಾಜ್ಯ, ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಮನವಿ ಮಾಡಿದೆ.


