ಪುರಸಭೆಯ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆದಿದೆ ಎಂಬುದನ್ನು ಅಧಿಕಾರಿಗಳು ಮತ್ತೆಹಚ್ಚಿದ ನಂತರ ದೊಡ್ಡ ವಿವಾದ ಭುಗಿಲೆದ್ದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಹಿಂದೂ ಬಲಪಂಥೀಯ ಸಂಘಟನೆಗಳು ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಾಪಕ ಪ್ರತಿಭಟನೆ ನಡೆಸಿವೆ.
ಡಿಸೆಂಬರ್ 17, 2025 ರಂದು, ಸಂಸ್ಕೃತಿ ಬಚಾವೊ ಮಂಚ್ ಮತ್ತು ಹಿಂದೂ ಉತ್ಸವ ಸಮಿತಿ ಸೇರಿದಂತೆ ಕೇಸರಿ ಸಂಘಟನೆಗಳ ಕಾರ್ಯಕರ್ತರು ಜಹಾಂಗೀರಾಬಾದ್‌ನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಬಳಿ 25 ಟನ್‌ಗಳಿಗೂ ಹೆಚ್ಚು ಮಾಂಸವನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆದಿದ್ದಾರೆ. ಆರಂಭದಲ್ಲಿ, ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವೈದ್ಯ ಬೇನಿ ಪ್ರಸಾದ್ ಗೌರ್ ಈ ಮಾಂಸವನ್ನು ಎಮ್ಮೆ ಎಂದು ಪ್ರಮಾಣೀಕರಿಸಿದರು. ಆದರೆ, ನಂತರ ಮಥುರಾದ ಪಶುವೈದ್ಯಕೀಯ ಕಾಲೇಜು ಪ್ರಯೋಗಾಲಯದಲ್ಲಿ ನಡೆದ ವಿಧಿವಿಜ್ಞಾನ ಪರೀಕ್ಷೆಯು ಇದು ಹಸು ಅಥವಾ ಸಂತತಿಯ ಮಾಂಸ ಎಂದು ದೃಢಪಡಿಸಿತು. ಮಧ್ಯಪ್ರದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದ್ದು, ಕಠಿಣ ದಂಡವನ್ನು ವಿಧಿಸಲಾಗುತ್ತದೆ.
ಮಾಂಸವು ಜಿನ್ಸಿಯಲ್ಲಿರುವ ಬಿಎಂಸಿ ನಿರ್ವಹಿಸುವ ಕಸಾಯಿಖಾನೆಯಿಂದ ತರಲಾಗಿದೆ ಎಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಇಲ್ಲಿ ಎಮ್ಮೆಗಳನ್ನು ಮಾತ್ರ ಕತ್ತರಿಸುವ ಅನುಮತಿ ಇದೆ. ಮಾಂಸ ವಿವಾದದ ಬಳಿಕ, ಬಿಎಂಸಿಯು ಜನವರಿ 9 ರಂದು ಕಸಾಯಿಖಾನೆಯನ್ನು ಮುಚ್ಚಿತು.
ಮಂಗಳವಾರ, ಮಧ್ಯಪ್ರದೇಶ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಶ್ ವಿಜಯವರ್ಗಿಯ ಅವರು ಡಾ. ಬೇಣಿ ಪ್ರಸಾದ್ ಗೌರ್ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶಿಸಿದರು. ನಾಗರಿಕ ಸಂಸ್ಥೆಯಿಂದ ಆಳವಾದ ತನಿಖೆಗೆ ಆದೇಶಿಸಿದರು. ಪುರಸಭೆಯ ಸಿಬ್ಬಂದಿಯ ಸಂಭಾವ್ಯ ಪಿತೂರಿಯನ್ನು ಪರಿಶೀಲಿಸುವುದು ಸೇರಿದಂತೆ ಪೊಲೀಸ್ ತನಿಖೆಗಳು ನಡೆಯುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಮೊದಲೇ ಬಂಧಿಸಲಾಗಿತ್ತು.
ಈ ಪ್ರಕರಣವು ಭೋಪಾಲ್‌ನಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಗೋಹತ್ಯೆ ಮತ್ತು ಅಕ್ರಮ ಮಾಂಸ ಸಾಗಣೆಯಲ್ಲಿ ತೊಡಗಿರುವವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿ ಬಜರಂಗ ದಳ, ಕರ್ಣಿ ಸೇನಾ ಮತ್ತು ಇತರ ಕೇಸರಿ ಗುಂಪುಗಳ ಕಾರ್ಯಕರ್ತರು ಸೋಮವಾರ ಮತ್ತು ಮಂಗಳವಾರ ಪ್ರತಿಭಟನೆ ನಡೆಸಿದರು. ಡಿಸೆಂಬರ್‌ನಿಂದ ಪದೇ ಪದೇ ಎಚ್ಚರಿಕೆಗಳನ್ನು ನಿರ್ಲಕ್ಷಿಸುತ್ತಿರುವ ಬಿಎಂಸಿ ಮತ್ತು ನಗರ ಅಧಿಕಾರಿಗಳನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಸಹ ಬಲಪಂಥೀಯ ಗುಂಪುಗಳ ಪ್ರತಿಭನೆಗೆ ಕೈಜೋಡಿದ್ದಾರೆ.
“ನಮ್ಮ ಭಾವನೆಗಳಿಗೆ ನೋವುಂಟು ಮಾಡಲಾಗಿದೆ; ಇದನ್ನು ಸಹಿಸುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗುತ್ತಿದೆ” ಎಂದು ಜೈ ಮಾ ಭವಾನಿ ಹಿಂದೂ ಸಂಘಟನೆಯ ಭಾನು ಹೇಳಿದರು. ಅಕ್ಟೋಬರ್ 2025 ರಲ್ಲಿ ಕಾರ್ಯಾಚರಣೆ ಆರಂಭಿಸಿದ ಕಸಾಯಿಖಾನೆಯನ್ನು ಕೆಡವಲು ಮತ್ತು ಪ್ರಮುಖ ಆರೋಪಿ ಅಸ್ಲಾಂ ‘ಚಮ್ದಾ’ ಖುರೇಷಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಈ ವಿವಾದವು ಬಿಎಂಸಿಯಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಪೊರೇಟರ್‌ಗಳು ಸಹ ಆಕ್ಷೇಪಿಸಿದ್ದಾರೆ. ವಿರೋಧ ಪಕ್ಷದ ನಾಯಕ ಎಸ್. ಝಾಕಿ, “ನಾವು ಡಿಸೆಂಬರ್‌ನಿಂದ ಈ ವಿಷಯವನ್ನು ಎಲ್ಲರ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ, ಆದರೆ ಅವರು ಕಿವುಡಾಗಿದೆ. ಈಗಲೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ನಾವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದರು.
ಯಾವುದೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜೀನಾಮೆ ನೀಡುವುದಾಗಿ ಬಿಜೆಪಿ ಕಾರ್ಪೊರೇಟರ್ ದೇವೇಂದ್ರ ಭಾರ್ಗವ ಬೆದರಿಕೆ ಹಾಕಿದರು. “ನಮ್ಮ ನಗರದಲ್ಲಿ ಘಟನೆ ಸಂಭವಿಸಿದ್ದು ಗಮನಕ್ಕೆ ಬಾರದೆ ಇರುವುದು ನಾಚಿಕೆಗೇಡಿನ ಸಂಗತಿ. ನಾನು ನಿಗಮಕ್ಕೆ ಗಡುವು ನೀಡಿದ್ದೇನೆ. ಯಾವುದೇ ಕ್ರಮ ಕೈಗೊಳ್ಳದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ” ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಸಿ ಅಧ್ಯಕ್ಷ ಕಿಶನ್ ಸೂರ್ಯವಂಶಿ, ಮೇಯರ್ ಮಾಲ್ತಿ ರೈ ಮತ್ತು ಸ್ಥಳೀಯ ಶಾಸಕ ಮತ್ತು ಕ್ಯಾಬಿನೆಟ್ ಸಚಿವ ವಿಶ್ವಾಸ್ ಸಾರಂಗ್ ಸಾರ್ವಜನಿಕರಿಗೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. “ಗೋಹತ್ಯೆ ಅಥವಾ ಗೋಮಾಂಸ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಾರನ್ನೂ ಬಿಡಲಾಗುವುದಿಲ್ಲ. ವ್ಯಾಪಾರಿಯಾಗಲಿ ಅಥವಾ ಅಧಿಕಾರಿಯಾಗಲಿ, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಸ್ಪಷ್ಟ ಮತ್ತು ದೃಢವಾದ ಸೂಚನೆಗಳನ್ನು ನೀಡಿದ್ದಾರೆ” ಎಂದು ಅವರು ಹೇಳಿದರು.
ಈ ಮಧ್ಯೆ, ಕಸಾಯಿಖಾನೆಯಿಂದ ಕೆಲವು ಮಾಂಸವನ್ನು ಮಹಾರಾಷ್ಟ್ರ ಮತ್ತು ಚೆನ್ನೈ ಮೂಲಕ ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಿರಬಹುದು ಎಂದು ದೃಢೀಕರಿಸದ ವರದಿಗಳು ಸೂಚಿಸುತ್ತವೆ. ನಗರದಾದ್ಯಂತ ಪ್ರತಿಭಟನೆ ಮತ್ತು ಸಾರ್ವಜನಿಕ ಆಕ್ರೋಶ ಮುಂದುವರಿದಂತೆ ಈ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.


