ಸಾಮಾನ್ಯ ವಿಭಾಗದಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರೂ ಪಿಎಚ್‌ಡಿ ಮಾಡಲು ಪ್ರವೇಶ ನಿರಾಕರಿಸಿದ್ದಕ್ಕಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ದಲಿತ ವಿದ್ಯಾರ್ಥಿಯೊಬ್ಬರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿವಂ ಸೋಂಕರ್ ಪ್ರವೇಶ ಪಡೆಯಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದಾಗ ಉಪಕುಲಪತಿಗಳ ನಿವಾಸದ ಹೊರಗೆ ಧರಣಿ ಕುಳಿತಿದ್ದಾರೆ. ವಿದ್ಯಾರ್ಥಿಗಳು ಮತ್ತು ರಾಜಕಾರಣಿಗಳು ಸಹ ಶಿವಂ ಬೆಂಬಲ ಸೂಚಿಸಿದ್ದಾರೆ.
ಮಾಳವೀಯ ಸೆಂಟರ್ ಫಾರ್ ಪೀಸ್ ರಿಸರ್ಚ್‌ನಲ್ಲಿ ಪಿಎಚ್‌ಡಿ ಪ್ರವೇಶಕ್ಕಾಗಿ ಸೋಂಕರ್ ಪರೀಕ್ಷೆ ಬರೆದಿದ್ದರು. ಎರಡನೇ ರ‍್ಯಾಂಕ್ ಪಡೆದಿದ್ದರೂ ಅವರಿಗೆ ಪ್ರವೇಶ ಸಿಗಲಿಲ್ಲ. ವಿಭಾಗದಲ್ಲಿ ಒಟ್ಟು ಏಳು ಸೀಟುಗಳಿವೆ. ಆದರೆ, ಕೇವಲ ನಾಲ್ಕು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಸೋಂಕರ್ ಅವರನ್ನು ಬೆಂಬಲಿಸಲು ಕ್ಯಾಂಪಸ್ ತಲುಪಿದ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಜಯ್ ರೈ, ವಿಶ್ವವಿದ್ಯಾಲಯವು ಶಿಕ್ಷಣದ ದೇವಾಲಯವಾಗಿ ಸ್ಥಾಪಿಸಲ್ಪಟ್ಟಿದ್ದರೂ, ಅದು ಈಗ ತಾರತಮ್ಯ ಮತ್ತು ಅನ್ಯಾಯದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಪ್ರಧಾನಿಯವರ ಕ್ಷೇತ್ರದಲ್ಲಿ ಈ ರೀತಿ ನಡೆಯುತ್ತಿರುವುದು ‘ನಾಚಿಕೆಗೇಡಿನ’ ಸಂಗತಿ ಎಂದರು.
This student sitting on a dharna outside Banaras Hindu University belongs to the Dalit community. He says that there are 3 vacant seats for PhD in the university but he is not being given admission. He is being told that it is a general seat, how can it be given to a Dalit…. pic.twitter.com/Ivi1j83IiM
— The Dalit Voice (@ambedkariteIND) March 24, 2025
ಮೀಸಲಾತಿ ಅಥವಾ ಮೀಸಲಾತಿ ಇಲ್ಲದ ವರ್ಗಕ್ಕೆ ಸೇರುವ ಸೀಟುಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯನ್ನು ಕೌನ್ಸೆಲಿಂಗ್ ಅವಧಿಗೆ ಮಾತ್ರ ಮಾಡಬಹುದು ಎಂದು ವಿಶ್ವವಿದ್ಯಾಲಯದ ವಿವರಣೆಯಾಗಿದೆ. ಮೀಸಲಾತಿ ಸೀಟುಗಳಿಗೆ ಸೂಕ್ತ ಅರ್ಜಿಗಳು ಬರದ ಕಾರಣ ಖಾಲಿ ಉಳಿದಿವೆ. ಸೋಂಕರ್ ಸಾಮಾನ್ಯ ವಿಭಾಗದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ಅವರನ್ನು ಸಾಮಾನ್ಯ ವರ್ಗದ ಸ್ಥಾನಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿವಿ ಸಮರ್ಥಿಸಿಕೊಂಡಿದೆ.
ಸಮಾಜವಾದಿ ಪಕ್ಷದ ಎಂಎಲ್‌ಸಿ ಅಶುತೋಷ್ ಸಿನ್ಹಾ ಅವರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದು, ಸೋಂಕರ್ ಅವರ ಪರಿಸ್ಥಿತಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವುದಕ್ಕೆ ಉದಾಹರಣೆಯಾಗಿದೆ ಎಂದು ಆರೋಪಿಸಿದ್ದಾರೆ.
ಭೀಮ್ ಸೇನೆಯ ಮುಖ್ಯಸ್ಥ ಮತ್ತು ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಅವರು ಸೋಂಕರ್ ಅವರ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಇಡೀ ಪ್ರಕರಣವು ವಿಶ್ವವಿದ್ಯಾಲಯವು ಅಳವಡಿಸಿಕೊಂಡ ಪ್ರವೇಶ ಪ್ರಕ್ರಿಯೆಗಳ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಸೋಂಕರ್ ಅವರ ಸಮಸ್ಯೆ ಪರಿಹರಿಸದಿದ್ದರೆ ಆಂದೋಲನ ಪ್ರಾರಂಭಿಸುವುದಾಗಿ ವಿದ್ಯಾರ್ಥಿ ಸಂಘ ಎಚ್ಚರಿಕೆ ನೀಡಿದೆ. ವಿದ್ಯಾರ್ಥಿಗಳು ಈಗಾಗಲೇ ಕುಲಪತಿಯ ಪ್ರತಿಕೃತಿಯನ್ನು ಸುಟ್ಟು ಅವರ ವಿರುದ್ಧ ಘೋಷಣೆ ಕೂಗಿದ್ದಾರೆ.
ಈ ಮಧ್ಯೆ, ಸೋಂಕರ್, ಬಿಎಚ್‌ಯು ಸಂಸ್ಥಾಪಕ ಮದನ್ ಮೋಹನ್ ಮಾಳವೀಯ, ಭೀಮ್ ರಾವ್ ಅಂಬೇಡ್ಕರ್ ಮತ್ತು ಭಗವಾನ್ ರಾಮನ ಚಿತ್ರಗಳೊಂದಿಗೆ ಧರಣಿ ಕುಳಿತಿದ್ದಾರೆ.
ದಕ್ಷಿಣ ಕನ್ನಡ | ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು


