ಬೀದರ್ ಜಿಲ್ಲೆಯಲ್ಲಿ ಆಸ್ತಿಗಾಗಿ ನಡೆದಿದ್ದ ಕೊಲೆಯೊಂದನ್ನು ‘ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒಪ್ಪದಿದ್ದಕ್ಕೆ ನಡೆದ ಕೊಲೆ’ ಎಂದು ರಾಜ್ಯದ ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿರುವುದು ಬಯಲಾಗಿದೆ.
ನವೆಂಬರ್ 8ರಂದು ಬೀದರ್ ತಾಲೂಕಿನ ಮನ್ನಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾತೋಳಿ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಕಿವುಡ ಹಾಗೂ ಮೂಗ ವ್ಯಕ್ತಿ ಬಸವರಾಜ್ ನರಸಪ್ಪ ಶೇರಿಕಾರ್ (52) ಎಂಬವರನ್ನು, ಅವರ ಪತ್ನಿ ಮತ್ತು ಮೂವರು ಮಕ್ಕಳು ಸೇರಿ ಮನೆಯಲ್ಲಿ ಕೈಕಾಲು ಕಟ್ಟಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು.
ಈ ಘಟನೆಗೆ ಕೋಮು ಬಣ್ಣ ಬಳಿದಿದ್ದ ಕೆಲ ಮಾಧ್ಯಮಗಳು, “ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒಪ್ಪದಿದ್ದಕ್ಕೆ ಮೂಗ ವ್ಯಕ್ತಿಯನ್ನು ಹೊಡೆದು ಕೊಂದ ಹೆಂಡತಿ-ಮಕ್ಕಳು” ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತ್ತು.
ನವೆಂಬರ್ 8ರಂದು ಬೆಳಿಗ್ಗೆ ಬಸವರಾಜ್ ನರಸಪ್ಪ ಮನೆಗೆ ಹೋಗಿದ್ದಾಗ ಮನೆಯವರ ಮಾತು ಕೇಳದ್ದಕ್ಕೆ ಪತ್ನಿ ಅಡೇಮಾ (45), ಪುತ್ರರಾದ ಪ್ರಭಾಕರ್ (25), ಹಣಮಂತ್ (22) ಹಾಗೂ ಪುತ್ರಿ ರತ್ನಮ್ಮಾ (28) ಮನೆಯ ಕೋಣೆಯಲ್ಲಿ ಆತನ ಕೈಕಾಲು ಕಟ್ಟಿಹಾಕಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ವ್ಯಕ್ತಿಯ ಸಹೋದರ ಮಲ್ಲಿಕಾರ್ಜುನ ನರಸಪ್ಪ ಅವರು ಮನ್ನಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
“ಬಸವರಾಜ್ ನರಸಪ್ಪ ಅವರನ್ನು ಆಸ್ತಿ ವಿಚಾರಕ್ಕೆ ಹೆಂಡತಿ ಮಕ್ಕಳು ಕೊಲೆ ಮಾಡಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಯಾವುದೇ ಮತಾಂತರದ ವಿಚಾರ ಇಲ್ಲ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ” ಎಂದು ಘಟನೆ ನಡೆದ ಸಾತೋಳಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಈದಿನ.ಕಾಂ ವರದಿ ಮಾಡಿದೆ.
ಈದಿನ.ಕಾಂ ವಿಡಿಯೋ ವರದಿಯಲ್ಲಿ ಕೊಲೆಯಾದ ಬಸವರಾಜ್ ಅವರ ಸಹೋದರ ಮಲ್ಲಿಕಾರ್ಜುನ್ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ‘ಪ್ರಕರಣದ ಹಿಂದೆ ಯಾವುದೇ ಮತಾಂತರದ ವಿಷಯ ಇಲ್ಲ’ ಎಂದು ಸ್ಪಷ್ಟವಾಗಿ ಹೇಳುವುದನ್ನು ನೋಡಬಹುದು.
ಇದನ್ನೂ ಓದಿ : ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ್ ವಿಚಾರ ಪ್ರಸ್ತಾಪಕ್ಕೆ ಜನರ ವಿರೋಧ; ವೇದಿಕೆ ತೊರೆದ ಯತ್ನಾಳ್


