ರಾಜ್ಯದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದು ವರ್ಷವಾಗುತ್ತಾ ಬರುತ್ತಿದೆ. ಆದರೂ, ಭಿನ್ನಮತೀಯರ ರಾಗ ಮಾತ್ರ ಈವರೆಗೆ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇಡೀ ರಾಜ್ಯ ಒಟ್ಟಾಗಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಸೇರಿದಂತೆ ಅನೇಕರು ಮತ್ತೆ ಸಚಿವ ಸ್ಥಾನಕ್ಕಾಗಿ ಎರಡನೇ ಸುತ್ತಿನ ಹೋರಾಟಕ್ಕೆ ಅಣಿಯಾಗಿದ್ದಾರೆ. ಅಲ್ಲದೆ, ಬಿಎಸ್‌ವೈ ತಲೆದಂಡಕ್ಕೂ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.
ಅಸಲಿಗೆ ಇಡೀ ದೇಶಕ್ಕೆ ಕೊರೋನಾ ಮತ್ತು ಲಾಕ್‌ಡೌನ್ ವಕ್ಕರಿಸಿದ್ದ ಏಕೈಕ ಕಾರಣಕ್ಕೆ ಈ ಎಲ್ಲಾ ನಾಯಕರು ಇಷ್ಟು ದಿನ ತಮ್ಮ ಸಚಿವ ಸ್ಥಾನದ ಹೋರಾಟವನ್ನು ಪಕ್ಕಕಿಟ್ಟು ತಣ್ಣಗಿದ್ದರು. ಆದರೆ, ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಬಿಜೆಪಿಯಲ್ಲಿ ಮತ್ತೆ ಸಚಿವ ಸಂಪುಟದ ವಿಸ್ತರಣೆಯ ಕೂಗು ಕೇಳಿ ಬರುತ್ತಿದೆ. ಇದರ ಬೆನ್ನಿಗೆ ಅತೃಪ್ತ ಶಾಸಕರು ಗುರುವಾರ ಔತಣ ಕೂಟದ ನೆಪದಲ್ಲಿ ಸಭೆ ಸೇರಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೇ ಸಿಎಂ ಸ್ಥಾನದಿಂದ ಇಳಿಸಲು ಯೋಜನೆ ರೂಪಿಸಿದ್ದು, ಇದಕ್ಕೆ ಉತ್ತರ ಕರ್ನಾಟಕ ಭಾಗದ ಅನೇಕ ಶಾಸಕರ ಬೆಂಬಲ ಇದೆ ಎನ್ನಲಾಗುತ್ತಿದೆ.
ಉಮೇಶ್ ಕತ್ತಿ ನಡೆಸಿದರಾ ರಹಸ್ಯ ಸಭೆ?
ಜೂನ್ ಅಂತ್ಯದ ವೇಳೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ, ಅರವಿಂದ ಲಿಂಬಾವಳಿ, ರಾಮದಾಸ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ನಾಲ್ವರಿಗೆ ಸಚಿವ ಸ್ಥಾನ ಸಿಗುವುದು ಪಕ್ಕ ಎಂದು ಸ್ವತಃ ಸಿಎಂ ಯಡಿಯೂರಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಬಿಜೆಪಿಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಅಸಮಾಧಾನ ಮತ್ತೊಮ್ಮೆ ಭುಗಿಲೆದ್ದಿದೆ. ಏಕೆಂದರೆ, ಉಮೇಶ್ ಕತ್ತಿ ಉತ್ತರ ಕರ್ನಾಟಕದ ಪ್ರಬಲ ನಾಯಕರಲ್ಲಿ ಒಬ್ಬರು, ಬಸನಗೌಡ ಪಾಟೀಲ್ ಈ ಹಿಂದೆ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಹಿರಿಯ ವ್ಯಕ್ತಿ. ಇನ್ನೂ ಪ್ರಬಲ ಪಂಚಮ ಸಾಲಿ ಲಿಂಗಾಯತ ಕೋಮಿಗೆ ಸೇರಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಹಲವಾರು ನಾಯಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಆದರೆ, ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಲುವಾಗಿ ಈ ಎಲ್ಲಾ ಮೂಲ ಬಿಜೆಪಿಗರಿಗೆ ಸಚಿವ ಸ್ಥಾನವನ್ನು ನಿರಾಕರಿಸಲಾಗಿತ್ತು. ಹೀಗಾಗಿ ಈ ತಂಡ ಕಳೆದ ಹಲವು ತಿಂಗಳಿನಿಂದ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೇ ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಾಕಷ್ಟು ಶ್ರಮಿ ವಹಿಸಿತ್ತು. ಆದರೆ, ಕೊರೋನಾ ಕಾರಣಕ್ಕೆ ಇವರ ಪ್ರಯತ್ನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ, ಈ ತಂಡ ಮತ್ತೆ ತನ್ನ ಕೆಲಸವನ್ನು ಆರಂಭಿಸಿದೆ.
ಈ ಕೆಲಸದ ಭಾಗವಾಗಿ ಔತಣ ಕೂಟದ ನೆಪದಲ್ಲಿ ಬಿಜೆಪಿ ಪಕ್ಷದ ಸುಮಾರು 10 ಕ್ಕೂ ಹೆಚ್ಚು ಜನ ಶಾಸಕರು ಗುರುವಾರ ಬೆಂಗಳೂರಿನಲ್ಲಿ ಖಾಸಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಸಭೆ ನಡೆಸಿದ್ದಾರೆ.
ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಅಭಯ್ ಪಾಟೀಲ್, ನಿರಾಣಿ ಸೇರಿದಂತೆ ಗುಲ್ಬರ್ಗ ಜಿಲ್ಲೆಯ ಕೆಲ ಶಾಸಕರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.
ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ , ರಾಜ್ಯ ರಾಜಕೀಯ ವಿಚಾರ, ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಸಂಪುಟ ವಿಸ್ತರಣೆ, ರಾಜ್ಯ ನಾಯಕತ್ವ ವಿಚಾರ ಸೇರಿದಂತೆ ಅನೇಕ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಅಲ್ಲದೆ, ರಾಜ್ಯ ಬಿಜೆಪಿ ಮತ್ತು ಸರ್ಕಾರದ ಸಂಬಂಧದ ಕುರಿತು ಕೆಲ ವಿಚಾರಗಳನ್ನು ಹೈಕಮಾಂಡ್ ನಾಯಕರ ಗಮನಕ್ಕೂ ತರಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಕತ್ತಿ ವಿರುದ್ಧ ಗರಂ ಆದ ಬಿಎಸ್‌ವೈ
ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಗುರುವಾರ ಅತೃಪ್ತ ಶಾಸಕರ ಸಭೆ ನಡೆದಿದೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಿಎಂ ಯಡಿಯೂರಪ್ಪ ವ್ಯಗ್ರರಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಸ್ವತಃ ಉಮೇಶ್ ಕತ್ತಿಗೆ ದೂರವಾಣಿ ಮೂಲಕ ಕರೆ ಮಾಡಿರುವ ಬಿಎಸ್‌ವೈ, “ಅದೇನು ಬನ್ರಿ ಮಾತಾಡೋಣ, ನಿಮ್ಮ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಲಾಗುವುದು” ಎಂದು ಮಾತುಕತೆಗೆ ಬುಲಾವ್ ನೀಡಲಾಗಿದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ : ಸಚಿವ ಮಾಧುಸ್ವಾಮಿ ವರ್ತನೆ ತಪ್ಪು, ಸಹಿಸಲು ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ


