ಕೊರೊನಾ ಎರಡನೆ ಅಲೆಯ ಲಾಕ್‌ಡೌನ್ ಅವಧಿಯಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಿಸಲು ಕಾರ್ಮಿಕ ಇಲಾಖೆಯಿಂದ ಹಂಚಿಕೆಯಾಗಲ್ಪಟ್ಟ ಸುಮಾರು 15-20 ಸಾವಿರವರೆಗಿನ ರೇಷನ್ ಕಿಟ್ಟುಗಳನ್ನು ಬೆಳಗಾವಿಯಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾರ್ಮಿಕರಿಗೆ ಸೇರಬೇಕಾಗಿದ್ದ ರೇಷನ್ ಕಿಟ್‌ಗಳನ್ನು ಬಿಜೆಪಿ ನಾಯಕರುಗಳು ಮತ್ತು ಅವರ ಸಂಬಂಧಿಕರ ಮನೆಗೆ ಸಾಗಾಟ ಮಾಡಿದ್ದಲ್ಲದೆ, ಅವಧಿ ಮುಗಿದಿರುವ ರೇಷನ್ ಕಿಟ್ಟುಗಳನ್ನು ಬಿಜೆಪಿ ಕಾರ್ಯಕರ್ತರು ಹಂಚುತ್ತಿದ್ದಾರೆ ಎಂದು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತರು ಕಿಡಿಕಾರಿದ್ದಾರೆ. ಅಲ್ಲದೇ ರೇಷನ್ ಕಿಟ್ ಸಂಗ್ರಹ ಮಾಡಿಟ್ಟ ಗೋದಾಮಿಗೆ ಕಳೆದ ವಾರ ದಾಳಿ ನಡೆಸಿ ಅಕ್ರಮವನ್ನು ಬಹಿರಂಗಪಡಿಸಿದ್ದಾರೆ.
ಕೊರೊನಾ ಎರಡನೇ ಅಲೆಯ ಲಾಕ್‌ಡೌನ್ ಘೋಷಣೆಯಾದ ನಂತರ, ಕಟ್ಟಡ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕ ಇಲಾಖೆಯು ರಾಜ್ಯದಾದ್ಯಂತ ರೇಷನ್ ಕಿಟ್ ಹಂಚಿಕೆ ಮಾಡಿತ್ತು. ಅದರಂತೆ ಬೆಳಗಾವಿಗೂ ರೇಷನ್ ಕಿಟ್ ತಲುಪಿತ್ತಾದರೂ ಮೂರು ತಿಂಗಳು ಕಳೆದರೂ ವಿತರಣೆ ಆಗದೆ ಸುಮಾರು 15-20 ಸಾವಿರದಷ್ಟು ಕಿಟ್‌ಗಳು ಬೆಳಗಾವಿಯ ಪಿಬಿ ನಗರದ ಸಾಯಿ ಭವನದಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸರಳಾ ಸಾತ್ಪುತೆ ಅವರು ನಾನುಗೌರಿ.ಕಾಂ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದ ಬಿಜೆಪಿ ಶಾಸಕಿ
ಈ ನಡುವೆ, ಪಾಲಿಕೆ ಚುನಾವಣೆ ಘೋಷಣೆಯಾದಾಗ ಮತದಾರರಿಗೆ ರೇಷನ್ ಕಿಟ್ ಆಮಿಷವನ್ನು ತೋರಿಸಲಾಗಿತ್ತು. ಅದಾಗಿ ಚುನಾವಣೆ ಮುಗಿಯುತ್ತಿದ್ದಂತೆ ಈ ರೇಷನ್ ಕಿಟ್ಟುಗಳನ್ನು ಬಿಜೆಪಿಯ ಶಾಸಕರ ಆಪ್ತರ ಮನೆಗಳು, ಕೌನ್ಸಿಲರ್‌ಗಳ ಆಪ್ತರು ಮತ್ತು ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ದಾಸ್ತಾನು ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಆದರೆ ಈ ಮಧ್ಯೆ, ಅಕ್ರಮವಾಗಿ ದಾಸ್ತಾನು ಮಾಡಿಟ್ಟ ರೇಷನ್ ಕಿಟ್‌ಗಳ ಅವಧಿ ಮುಗಿದಿದ್ದು ಕೂಡಾ ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದೆಯೆ ವಿತರಣೆ ಆಗಬೇಕಿದ್ದ ರೇಷನ್ ಕಿಟ್ ಅನ್ನು, ಸ್ಥಳೀಯ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ವಿತರಿಸದೆ ಹಾಗೆ ಇಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ್ ಮತ್ತು ಕಾರ್ಮಿಕ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ಅಕ್ರಮವನ್ನು ತಡೆಗಟ್ಟುವಂತೆ ಆಗ್ರಹಿಸಿದ್ದಾರೆ. ಆದರೆ ಮನವಿ ನೀಡಿ ಇಷ್ಟು ದಿನ ಕಳೆದರೂ ಇರುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಸರಳಾ ಸಾತ್ಪುತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಾರ್ಮಿಕ ಇಲಾಖೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿಚಾರಿಸಲು ನಾನುಗೌರಿ.ಕಾಂ ಬೆಳಗಾವಿ ಕಾರ್ಮಿಕ ಇಲಾಖೆಯ ಉಪ ಆಯುಕ್ತರಾಗಿರುವ ವೆಂಕಟೇಶ್ ಎ. ಶಿಂಧಿಹಟಿ ಅವರಿಗೆ ಕರೆ ಮಾಡಿದ್ದು ಅವರು ಯಾವುದೆ ಪ್ರತಿಕ್ರಿಯೆ ನೀಡಿಲ್ಲ.
ಇಷ್ಟೇ ಅಲ್ಲದೆ ಇದನ್ನು ಪ್ರಶ್ನಿಸಿದ್ದ ಸಾಮಾಜಿಕ ಕಾರ್ಯಕರ್ತರಿಗೆ ಬಿಜೆಪಿ ಕಾರ್ಯಕರ್ತರು ಜೀವ ಬೆದರಿಕೆ ಕೂಡಾ ಒಡ್ಡಿದ್ದಾರೆ ಎಂದು ದೂರಲಾಗಿದೆ. ಅಕ್ರಮಗಳನ್ನು ಮೊಬೈಲಿನಲ್ಲಿ ಸೆರೆಹಿಡಿಯಲು ತೆರಳಿದ್ದ, ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಾಮಾಜಿಕ ಕಾರ್ಯಕರ್ತೆ ಸರಳಾ ಸಾತ್ಪುತೆ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ದುಂಡಾವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಐದಾರು ಬಿಜೆಪಿ ಕಾರ್ಯಕರ್ತರ ವಿರುದ್ದ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಸರಳಾ ಸಾತ್ಪುತೆ ನಾನುಗೌರಿ.ಕಾಂ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: ಪಕ್ಷದ ಕಚೇರಿಯಲ್ಲೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಕಾರ್ಯಕರ್ತ; FIR ದಾಖಲು


