ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರವು ಇತ್ತೀಚೆಗಷ್ಟೆ ಸಚಿವ ಸಂಪುಟ ವಿಸ್ತರಣೆ ನಡೆಸಿದ್ದು ಸರ್ಕಾರವು ಒಟ್ಟು 31 ಮಂತ್ರಿಗಳನ್ನು ಹೊಂದಿದೆ. ಇವರಲ್ಲಿ 18 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಎಲೆಕ್ಷನ್ ವಾಚ್ ವರದಿಯಲ್ಲಿ 28 ಸಚಿವರು ನೀಡಿರುವ ಅಫಿಡವಿಟ್‌ಗಳ ಆಧಾರದ ಮೇಲೆ ತಿಳಿಸಲಾಗಿದೆ. ಈ ಸಚಿವರಲ್ಲಿ 14 ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅದು ತಿಳಿಸಿದೆ.
ಉಳಿದ ಮೂವರು ಸಚಿವರಲ್ಲಿ ಅಶೋಕ್ ಚೌಧರಿ ಮತ್ತು ಜನಕ್ ರಾಮ್ ಎಂಬ ಇಬ್ಬರು ಸಚಿವರು ಈವರೆಗೆ ರಾಜ್ಯ ವಿಧಾನಸಭೆಯ ಸದಸ್ಯರಾಗಿಲ್ಲದ್ದರಿಂದ, ಅವರ ವಿವರಗಳು ಲಭ್ಯವಿಲ್ಲ. ಮತ್ತೊಬ್ಬ ಬಿಜೆಪಿಯ ಸಚಿವ ರಾಮ್ ಸೂರತ್ ಕುಮಾರ್ ಅವರು ನೀಡಿರುವ ಅಫಿಡವಿಟ್ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪೂರ್ಣವಾಗಿದ್ದರಿಂದ ಅದನ್ನು ವಿಶ್ಲೇಷಿಸಲಾಗಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಬಿಹಾರ ಸಂಪುಟ ವಿಸ್ತರಣೆ ಮೂಲಕ ಬಿಜೆಪಿಗೆ ಸಂದೇಶ ರವಾನಿಸಿದ ನಿತೀಶ್ ಕುಮಾರ್
ಸರ್ಕಾರದ ಮೈತ್ರಿಕೂಟವಾದ ಬಿಜೆಪಿಯ 16 ಮಂತ್ರಿಗಳಲ್ಲಿ 11 ಮಂದಿ, ಜೆಡಿಯು ಪಕ್ಷದ 4 ಮಂತ್ರಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇತರ ಮೂವರು ಹಿಂದೂಸ್ತಾನಿ ಅವಮ್ ಮೋರ್ಚಾ (ಜಾತ್ಯತೀತ), ವಿಕಾಸ್ಶೀಲ್ ಇನ್ಸಾನ್ ಪಾರ್ಟಿ ಮತ್ತು ಪಕ್ಷೇತರ ಸಚಿವರ ವಿರುದ್ಧ ಕೂಡಾ ಗಂಭೀರ ಅಪರಾಧ ಪ್ರಕರಣಗಳು ಬಾಕಿ ಉಳಿದಿವೆ.
ಎಡಿಆರ್ ಮತ್ತು ಎಲೆಕ್ಷನ್ ವಾಚ್‌ನ ಹಿಂದಿನ ವಿಶ್ಲೇಷಣೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾದ 241 ವಿಧಾನಸಭಾ ಸದಸ್ಯರಲ್ಲಿ 163 (68%) ಕೊಲೆ ಯತ್ನದಂತಹ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂಂದು ಹೇಳಿದೆ. 2015 ರಲ್ಲಿ ಆಯ್ಕೆಯಾದ 243 ಸದಸ್ಯರಲ್ಲಿ 142 (58%) ಮಂದಿ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎಂದು ವರದಿ ಹೇಳಿತ್ತು.
28 ಮಂತ್ರಿಗಳಲ್ಲಿ ಇಪ್ಪತ್ತಾರು ಜನರು (93%) ಸರಾಸರಿ ಆಸ್ತಿ 4.46 ಕೋಟಿ ರೂ. ಎಂದು ಅದು ಹೇಳಿದೆ. ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಝಾ ಅವರು ರೂ .22.37 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಜೆಡಿಯುನ ಜಮಾ ಖಾನ್ 30.04 ಲಕ್ಷ ಆಸ್ತಿಯನ್ನು ಹೊಂದಿರುವ ಅತಿ ಕಡಿಮೆ ಆಸ್ತಿಯಿರುವ ಸಚಿವರಾಗಿದ್ದಾರೆ. 16 ಮಂದಿ ಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಉಳ್ಳವರಾಗಿದ್ದು, ಅರ್ಧದಲ್ಲೇ ಶಾಲೆಯನ್ನು ಮೊಟಕುಗೊಳಿಸಿರುವ ಹನ್ನೊಂದು ಮಂತ್ರಿಗಳು ಸಚಿವ ಸಂಪುಟದಲ್ಲಿದ್ದಾರೆ.
ಇದನ್ನೂ ಓದಿ: ಬಿಹಾರ: 19 ಲಕ್ಷ ಉದ್ಯೋಗ ನೀಡದಿದ್ದರೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ – ತೇಜಸ್ವಿ ಯಾದವ್ ಎಚ್ಚರಿಕೆ


