ನವದೆಹಲಿ: ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದರ ಕುರಿತು ವಿವರಗಳನ್ನು ಬಹಿರಂಗಪಡಿಸಲು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ವಲ್ ಭೂಯಾನ್ ಮತ್ತು ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಲ್ಲಿಸಿದ್ದ ಅರ್ಜಿಯನ್ನು ವಕೀಲ ಪ್ರಶಾಂತ್ ಭೂಷಣ್ ಉಲ್ಲೇಖಿಸಿದ ನಂತರ ಈ ಆದೇಶ ನೀಡಿತು.
ಕೈಬಿಟ್ಟ ಮತದಾರರ ಹೆಸರುಗಳು, ಮತಗಟ್ಟೆ ಹಾಗೂ ವಿಧಾನಸಭಾ ಕ್ಷೇತ್ರವಾರು ವಿವರಗಳನ್ನು, ಹಾಗೆಯೇ ಹೆಸರುಗಳನ್ನು ಕೈಬಿಡಲು ಕಾರಣಗಳನ್ನೂ (ಉದಾಹರಣೆಗೆ, ಮರಣ, ಸ್ಥಳಾಂತರ, ನಕಲಿ, ಪತ್ತೆಯಾಗದಿರುವುದು, ಇತ್ಯಾದಿ) ಬಹಿರಂಗಪಡಿಸಬೇಕು ಎಂದು ADR ತನ್ನ ಅರ್ಜಿಯಲ್ಲಿ ಒತ್ತಾಯಿಸಿದೆ.
ಈ ಮಾಹಿತಿಯನ್ನು ರಾಜಕೀಯ ಪಕ್ಷಗಳು, ಸಾರ್ವಜನಿಕರು ಮತ್ತು ಅರ್ಜಿದಾರರು ಪರಿಶೀಲಿಸಲು ಅನುಕೂಲವಾಗುವಂತೆ, ಮತಗಟ್ಟೆ ಮಟ್ಟದ ಅಧಿಕಾರಿ (BLO) ಯಿಂದ “ಶಿಫಾರಸು ಮಾಡದ” ಮತದಾರರ ಪಟ್ಟಿಯನ್ನೂ ಸಹ ಪ್ರಕಟಿಸಬೇಕು ಎಂದು ಅರ್ಜಿ ಕೋರಿದೆ.
ಕೈಬಿಟ್ಟ ಮತದಾರರ ಮಾಹಿತಿಯನ್ನು ಈಗಾಗಲೇ ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕಾಂತ್ ನೇತೃತ್ವದ ಪೀಠ, ಯಾವ ರಾಜಕೀಯ ಪಕ್ಷಗಳಿಗೆ ಈ ಮಾಹಿತಿ ನೀಡಲಾಗಿದೆ ಎಂಬುದರ ಪಟ್ಟಿಯನ್ನು ಆಗಸ್ಟ್ 9ರೊಳಗೆ ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು. ಈ ಪ್ರಕರಣವನ್ನು ಆಗಸ್ಟ್ 12 ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
“ಪರಿಣಾಮ ಎದುರಿಸುವ ಸಾಧ್ಯತೆಯಿರುವ ಪ್ರತಿಯೊಬ್ಬ ಮತದಾರರಿಗೂ ಮಾಹಿತಿ ನೀಡಿ, ನಿಯಮಗಳನ್ನು ಪಾಲಿಸಲು ಅವಕಾಶ ನೀಡಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ರಾಜಕೀಯ ಪಕ್ಷಗಳು ಮತ್ತು ಸ್ಥಳೀಯ ಆಡಳಿತವು ಅಗತ್ಯ ಮಾಹಿತಿಯನ್ನು ಹೊಂದಿರಬೇಕು,” ಎಂದು ಪೀಠ ಹೇಳಿದೆ.
ಜೂನ್ 26ರಂದು ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಚುನಾವಣಾ ಆಯೋಗ ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ADR ಮಂಗಳವಾರ ಒಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದೆ.
ಜುಲೈ 25ರಂದು ಚುನಾವಣಾ ಆಯೋಗ ನೀಡಿದ ಪತ್ರಿಕಾ ಹೇಳಿಕೆಯ ಪ್ರಕಾರ, SIR ಪ್ರಕ್ರಿಯೆಯಿಂದ ಸುಮಾರು 65 ಲಕ್ಷ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. “ಇದರಿಂದ ಆಯೋಗದ ಬಳಿ ಮೃತಪಟ್ಟ ಸುಮಾರು 22 ಲಕ್ಷ ಮತದಾರರು, ಶಾಶ್ವತವಾಗಿ ಸ್ಥಳಾಂತರಗೊಂಡ ಅಥವಾ ಪತ್ತೆಯಾಗದ ಸುಮಾರು 35 ಲಕ್ಷ ಮತದಾರರು, ಹಲವು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿರುವ ಸುಮಾರು 7 ಲಕ್ಷ ಮತದಾರರು ಮತ್ತು ಇನ್ನೂ ಫಾರ್ಮ್‌ಗಳು ಸ್ವೀಕೃತವಾಗದಿರುವ ಸುಮಾರು 1.2 ಲಕ್ಷ ಮತದಾರರ ವಿವರಗಳಿವೆ ಎಂದು ಸ್ಪಷ್ಟವಾಗುತ್ತದೆ,” ಎಂದು ADR ಅರ್ಜಿಯಲ್ಲಿ ತಿಳಿಸಿದೆ.
65 ಲಕ್ಷ ಹೆಸರುಗಳ ಪಟ್ಟಿಯಿಂದ ತೆಗೆದುಹಾಕಲು ನಿರ್ದಿಷ್ಟ ಕಾರಣವನ್ನು ಬಹಿರಂಗಪಡಿಸಲು ಇಸಿಐ ವಿಫಲವಾಗಿರುವುದು, “ಈ ವ್ಯಕ್ತಿಗಳು ನಿಜವಾಗಿಯೂ ಮೃತಪಟ್ಟಿದ್ದಾರೆಯೇ ಅಥವಾ ಶಾಶ್ವತವಾಗಿ ವಲಸೆ ಹೋಗಿದ್ದಾರೆಯೇ ಎಂದು ಪರಿಶೀಲಿಸುವುದನ್ನು ತಡೆಯುವ ಪ್ರಯತ್ನವಾಗಿದೆ,” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದೇ ವೇಳೆ, ಬಿಹಾರ ಚುನಾವಣಾ ಕಚೇರಿಯ ಮೂಲಗಳು ತಿಳಿಸಿರುವಂತೆ, SIR ಪ್ರಕ್ರಿಯೆಯು ಹೆಚ್ಚಿನ ಮತದಾರರನ್ನು ಮತದಾನದಿಂದ ಹೊರಗಿಡಲಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳಿಲ್ಲ. ಆಗಸ್ಟ್ 1ರಿಂದ ಯಾವುದೇ ರಾಜಕೀಯ ಪಕ್ಷದಿಂದ ಯಾವುದೇ ದೂರು ಅಥವಾ ಆಕ್ಷೇಪಣೆ ದಾಖಲಾಗಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.


