ಬಹು ನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, 14ರಂದು ಮತ ಎಣಿಕೆ ಮಾಡಲಾಗುತ್ತದೆ.
ಸೋಮವಾರ (ಅ.6) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ನವೆಂಬರ್ 6ರಂದು ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಕುರಿತು ಅಕ್ಟೋಬರ್ 10ರಂದು ಅಧಿಸೂಚನೆ ಹೊರಡಿಸಲಾಗುವುದು. ಅಕ್ಟೋಬರ್ 17 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಮತ್ತು ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 20 ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 11ರಂದು ಎರಡನೇ ಹಂತದಲ್ಲಿ, 122 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಬಗ್ಗೆ ಅಕ್ಟೋಬರ್ 13ರಂದು ಅಧಿಸೂಚನೆ ಹೊರಡಿಸಲಾಗುವುದು. ಎರಡನೇ ಹಂತದ ನಾಮಪತ್ರ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ. ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 23 ಆಗಿದೆ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ನವೆಂಬರ್ 14 ರಂದು ಮತಗಳ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
22 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಸಲಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಶಸ್ವಿಯಾಗಿ ಪಟ್ಟಿಯನ್ನು ‘ಶುದ್ಧೀಕರಿಸಿದೆ’ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಉಳಿದಿರುವ ಯಾವುದೇ ದೋಷಗಳಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ನಿಖರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಎಸ್‌ಐಆರ್ ಕುರಿತ ಆಕ್ಷೇಪಣೆಗಳಿಗೆ ಬಾಗಿಲು ತೆರೆದಿರುತ್ತದೆ ಎಂದಿದ್ದಾರೆ.
ಎಸ್ಐಆರ್ ನಂತರದ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ದಿನಾಂಕದ ನಂತರ ಬಿಡುಗಡೆಯಾಗಲಿರುವ ಮತದಾರರ ಪಟ್ಟಿ ಅಂತಿಮವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಮುಕ್ತ, ನ್ಯಾಯಯುತ ಮತ್ತು ಶಾಂತಿಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಹಲವಾರು ನಿರ್ದೇಶನಗಳನ್ನು ಹೊರಡಿಸಿದೆ. ಯಾವುದೇ ರೀತಿಯ ಹಿಂಸಾಚಾರಕ್ಕೆ ಶೂನ್ಯ ಸಹಿಷ್ಣುತೆಯನ್ನು ಪಾಲಿಸುತ್ತೇವೆ. ಮತದಾರರು ಅಥವಾ ಅಭ್ಯರ್ಥಿಗಳ ವಿರುದ್ಧ ಯಾವುದೇ ಬೆದರಿಕೆಗಳಿಗೆ ಅವಕಾಶವಿಲ್ಲ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಮತದಾರರಲ್ಲಿ ವಿಶ್ವಾಸ ಮೂಡಿಸಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಮುಂಚಿತವಾಗಿಯೇ ನಿಯೋಜನೆ ಮಾಡಲಾಗುವುದು. ರಾಜಕೀಯ ಪಕ್ಷಗಳಿಂದ ಬರುವ ಯಾವುದೇ ಕುಂದುಕೊರತೆಗಳು ಅಥವಾ ದೂರುಗಳನ್ನು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಪರಿಹರಿಸಲು, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಮತ್ತು ಎಲ್ಲಾ ಪಕ್ಷಕಾರರಿಗೆ ಸುಲಭವಾಗಿ ಲಭ್ಯವಾಗಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ನಕಲಿ ಸುದ್ದಿಗಳ ಬಗ್ಗೆ ಸಮಯೋಚಿತವಾಗಿ ಪ್ರತಿಕ್ರಿಯಿಸುವಂತೆ ಜಿಲ್ಲಾ ಮಟ್ಟದ ಸಾಮಾಜಿಕ ಮಾಧ್ಯಮ ತಂಡಗಳಿಗೆ ನಿರ್ದೇಶಿಸಲಾಗಿದೆ. ಮಾದಕ ದ್ರವ್ಯಗಳು, ಮದ್ಯ ಅಥವಾ ಇತರ ನಿಷಿದ್ಧ ವಸ್ತುಗಳ ಅಕ್ರಮ ಸಾಗಣೆಯನ್ನು ತಡೆಗಟ್ಟಲು ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಸ್ಥಾನಗಳಿವೆ. ಒಟ್ಟು ಮತದಾರರ ಸಂಖ್ಯೆ 7.43 ಕೋಟಿ ಇದ್ದು, ಇದರಲ್ಲಿ ಸುಮಾರು 14 ಲಕ್ಷ ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ನಾಲ್ಕು ಲಕ್ಷ ಹಿರಿಯ ನಾಗರಿಕರು ಮತ್ತು 14,000 ಜನರು 100 ವರ್ಷಗಳನ್ನು ಪೂರ್ಣಗೊಳಿಸಿದವರು ಇದ್ದಾರೆ ಎಂದು ವಿವರಿಸಿದ್ದಾರೆ.
ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಹಿಂದಿನ ಕುಂದುಕೊರತೆಗಳನ್ನು ಪರಿಹರಿಸಲು, ಹಿಂದಿನ ಚುನಾವಣೆಗಳ ಶೇ. 50ಕ್ಕಿಂತ ಬದಲಾಗಿ ಈ ಬಾರಿ ಶೇ. 100ರಷ್ಟು ಮತಗಟ್ಟೆಗಳ ವೆಬ್‌ಕಾಸ್ಟಿಕ್ ನಡೆಸಲಾಗುವುದು. ಈ ಹಿಂದೆ ಕಪ್ಪು ಮತ್ತು ಬಿಳಿ ಬಣ್ಣದಲ್ಲಿದ್ದ ಇವಿಎಂಗಳಲ್ಲಿನ ಅಭ್ಯರ್ಥಿಗಳ ಛಾಯಾಚಿತ್ರಗಳು ಈ ಬಾರಿ ದೊಡ್ಡ ಫಾಂಟ್ ಗಾತ್ರದೊಂದಿಗೆ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ ಎಂದಿದ್ದಾರೆ.
ಇತ್ತೀಚೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡ ವ್ಯಕ್ತಿಗಳಿಗೆ ಹೊಸ ಮತದಾರರ ಚೀಟಿಗಳನ್ನು ನೀಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಎಲ್ಲಾ ಚುನಾವಣಾ ಅಪ್ಲಿಕೇಶನ್‌ಗಳ ತಾಯಿ ಎನ್ನಲಾದ ಭಾರತೀಯ ಚುನಾವಣಾ ಆಯೋಗದ ಹೊಸ “ನೆಟ್-ಒನ್” ಸಿಂಗಲ್-ವಿಂಡೋ ಅಪ್ಲಿಕೇಶ ಬಿಹಾರ ಚುನಾವಣೆಯಿಂದ ಕಾರ್ಯಾರಾಂಭ ಮಾಡಲಿದೆ ಮತ್ತು ಈ ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದೆ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರ, ರಾಜಸ್ಥಾನ, ಜಾರ್ಖಂಡ್, ತೆಲಂಗಾಣ, ಪಂಜಾಬ್, ಮಿಜೋರಾಂ ಮತ್ತು ಒಡಿಶಾ ಸೇರಿ ಏಳು ರಾಜ್ಯಗಳ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 11, 2025ರಂದು ಉಪಚುನಾವಣೆ ನಡೆಯಲಿದೆ ಎಂದು ಇದೇ ವೇಳೆ ಚುನಾವಣಾ ಆಯೋಗ ಘೋಷಿಸಿದೆ. ಇದರ ಮತ ಎಣಿಕೆಯೂ ನವೆಂಬರ್ 14 ರಂದು ನಡೆಯಲಿದೆ ಎಂದಿದೆ.
‘ಸಂವಿಧಾನದ ಮೇಲೆ ಧಾರ್ಮಿಕ ಅಂಧತ್ವದ ಸವಾರಿ’: ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿರುವುದಕ್ಕೆ ತೀವ್ರ ಖಂಡನೆ


