ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ಪಕ್ಷದ ಉದ್ದೇಶಿತ ‘ಮಹಿಳಾ ಸಂವಾದ ಯಾತ್ರೆ’ ಡಿಸೆಂಬರ್ 15 ರಿಂದ ಆರಂಭವಾಗಲಿದೆ. ಈ ನಡುವೆ ಈ ಯಾತ್ರೆಯ ವಿರುದ್ಧ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದಾರೆ. ಬಿಹಾರ ಸಿಎಂ ನಿತೀಶ್
ನಿತೀಶ್ ಅವರ ಉದ್ದೇಶಿತ ಯಾತ್ರೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಾಲು, ಅವರು ಮಹಿಳೆಯರನ್ನು ನೋಡಲಿದ್ದಾರೆ (ನಯನ್ ಸೆಕ್ನೆ ಜಾ ರಹೇನ್ ಹೈ) ಎಂಬ ಅರ್ಥದಲ್ಲಿ ವ್ಯಂಗ್ಯವಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿನಗರದಿಂದ ಆರಂಭಿಸಲಿರುವ ಯಾತ್ರೆಯಲ್ಲಿ ನಿತೀಶ್ ಅವರು ಮಹಿಳೆಯರನ್ನು ಭೇಟಿಯಾಗಲಿದ್ದಾರೆ. ಈ ಯಾತ್ರೆಯಲ್ಲಿ ಅವರು ಮಹಿಳೆಯರು, ಜೀವಿಕಾ ದೀದಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ರಾಜ್ಯ ಸರ್ಕಾರದ ‘ಸಾತ್ ನಿಶ್ಚಯ’ (ಏಳು ಸಂಕಲ್ಪ) ಕಾರ್ಯಕ್ರಮದಡಿಯಲ್ಲಿ ಪ್ರಾರಂಭಿಸಲಾದ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ.
ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 225 ಸ್ಥಾನಗಳನ್ನು ಗೆಲ್ಲುವ ಬಗ್ಗೆ ನಿತೀಶ್ ಪ್ರತಿಪಾದನೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಲಾಲು, “ಪಹ್ಲೆ ಉಂಕೊ ಆಖ್ ಸೆಕ್ನೆ ದೋ (ಅವರು ಮೊದಲು ಮಹಿಳೆಯರನ್ನು ನೋಡಲಿ)” ಎಂದು ಹೇಳಿದ್ದಾರೆ. ಬಿಹಾರ ಸಿಎಂ ನಿತೀಶ್
ನಿತೀಶ್ ವಿರುದ್ಧ ಲಾಲು ಅವರ ಅಸಭ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, “ಇದು ದುರದೃಷ್ಟಕರ” ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ವಿರುದ್ಧ ಲಾಲು ಪ್ರಸಾದ್ ಹೇಳಿಕೆ ನಿಜಕ್ಕೂ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
ಸಿಎಂ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಆರ್‌ಜೆಡಿ ಮುಖ್ಯಸ್ಥ ಅವರಿಗೆ (ಸಿಎಂ) ಬಳಸಿರುವ ಭಾಷೆ ತುಂಬಾ ದುರದೃಷ್ಟಕರ. ಮೊದಲು ಅವರು ದೈಹಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ನಾವು ಭಾವಿಸಿದ್ದೆವು, ಆದರೆ ಈಗ ಅವರು ಮಾನಸಿಕವಾಗಿಯೂ ಅಸ್ವಸ್ಥರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಮುನ್ನಡೆಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಅವಕಾಶ ನೀಡಬೇಕು ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಬಿಜೆಪಿ-ವಿರೋಧಿ ಒಕ್ಕೂಟದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಇಂಗಿತವನ್ನು ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ಅವರ ಪರ ಬ್ಯಾಟ್ ಬೀಸಿದ್ದಾರೆ. ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್ ಮಮತಾ ಬ್ಯಾರ್ಜಿಯವರನ್ನು ಒಕ್ಕೂಟದ ನಾಯಕಿ ಎಂದು ಒಪ್ಪಿಕೊಂಡರೆ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಲಾಲು ಪ್ರಸಾದ್ ಹೇಳಿದ್ದಾರೆ.
“ಮಮತಾ ಬ್ಯಾನರ್ಜಿ ಸೇರಿದಂತೆ ಯಾವುದೇ ಹಿರಿಯ ನಾಯಕರು ಇಂಡಿಯಾ ಒಕ್ಕೂಟದ ನಾಯಕತ್ವ ವಹಿಸುವುದಾದರೆ ನಮ್ಮದೇನು ಅಭ್ಯಂತರ ಇಲ್ಲ. ಆದರೆ, ಒಮ್ಮತದ ಮೂಲಕ ನಿರ್ಧಾರಕ್ಕೆ ಬರಬೇಕು ಎಂದು ಈ ಹಿಂದೆ ಲಾಲು ಪ್ರಸಾದ್ ಯಾದವ್ ಅವರ ಮಗ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದರು.
ಡಿಸೆಂಬರ್ 6ರಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟದ ಕಾರ್ಯಾಚರಣೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಅವಕಾಶ ನೀಡಿದರೆ ಒಕ್ಕೂಟದ ಜವಾಬ್ದಾರಿ ವಹಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಹೈಟಿ | ಗ್ಯಾಂಗ್‌ಸ್ಟರ್ ಮಗುವಿನ ಮೇಲೆ ವಾಮಾಚಾರ ಆರೋಪ : ಸುಮಾರು 200 ಜನರ ಹತ್ಯೆ!
ಹೈಟಿ | ಗ್ಯಾಂಗ್‌ಸ್ಟರ್ ಮಗುವಿನ ಮೇಲೆ ವಾಮಾಚಾರ ಆರೋಪ : ಸುಮಾರು 200 ಜನರ ಹತ್ಯೆ!


