ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ ಮದ್ಯ ಕಳ್ಳಸಾಗಣೆದಾರರ ಗುಂಪೊಂದು ದಾಳಿ ನಡೆಸಿ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಅಬಕಾರಿ ಇಲಾಖೆಯ ಕಾನ್‌ಸ್ಟೆಬಲ್ ಗಾಯಗೊಂಡರು.
ಮೃತರನ್ನು ಗೋಪಾಲ್‌ಗಂಜ್ ಜಿಲ್ಲೆಯ ಕುಚಾಯ್‌ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಾಲ್ ಖಾರ್ ಗ್ರಾಮದ ನಿವಾಸಿ ಅಭಿಷೇಕ್ ಕುಮಾರ್ ಪಾಠಕ್ (30) ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ 4:30 ರ ಸುಮಾರಿಗೆ ಪಾಠಕ್ ಮತ್ತು ಇತರ ಅಬಕಾರಿ ಇಲಾಖೆಯ ಅಧಿಕಾರಿಗಳು ನೆರೆಯ ಉತ್ತರ ಪ್ರದೇಶದಿಂದ ಅಕ್ರಮ ಮದ್ಯ ಸಾಗಿಸುತ್ತಿದ್ದರು ಎನ್ನಲಾದ ವಾಹನವನ್ನು ಬೆನ್ನಟ್ಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಿಲ್ಲಿಸಲು ಪದೇ ಪದೇ ಮನವಿ ಮಾಡಿದ್ದರೂ, ವಾಹನದ ಚಾಲಕ ಅದನ್ನು ಅನುಸರಿಸಲು ನಿರಾಕರಿಸಿದನು.
ಅಬಕಾರಿ ತಂಡವು ಹಿಂಬಾಲಿಸುವುದನ್ನು ಮುಂದುವರಿಸುತ್ತಿದ್ದಂತೆ, ಮದ್ಯ ಕಳ್ಳಸಾಗಣೆದಾರರು ವಿಶಾಂಭರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಪಾಯಾ ಎಂಜಿನಿಯರಿಂಗ್ ಕಾಲೇಜು ಬಳಿ ದಾಳಿ ನಡೆಸಿದರು. ಈ ದಾಳಿಯಲ್ಲಿ, ಗೃಹರಕ್ಷಕ ದಳದ ಸಿಬ್ಬಂದಿ ಸಾವನ್ನಪ್ಪಿ, ಅಬಕಾರಿ ಪೊಲೀಸ್ ಕಾನ್‌ಸ್ಟೆಬಲ್ ಗಾಯಗೊಂಡರು.
ಗೋಪಾಲ್‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವಧೇಶ್ ದೀಕ್ಷಿತ್ ಮಾತನಾಡಿ, ಗಾಯಾಳು ಸಿಬ್ಬಂದಿಯನ್ನು ಗೋಪಾಲ್‌ಗಂಜ್ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅಭಿಷೇಕ್ ಕುಮಾರ್ ಪಾಠಕ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದರು. “ದಾಳಿಕೋರರನ್ನು ಬಂಧಿಸಲು ಪ್ರತ್ಯೇಕ ಪೊಲೀಸ್ ತಂಡಗಳು ಹುಡುಕಾಟ ಆರಂಭಿಸಿವೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
2016 ರಿಂದ ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಆದರೆ, ಕಳ್ಳಸಾಗಣೆ ನಿರಂತರವಾಗಿ ಮುಂದುವರೆದಿದೆ. ಶನಿವಾರದ ಘಟನೆಯು ರಾಜ್ಯದಲ್ಲಿ ಹೆಚ್ಚುತ್ತಿರುವ ಮದ್ಯ ಮಾಫಿಯಾಗಳ ಬಲ ಮತ್ತು ನಿಷೇಧ ಕಾನೂನುಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಅಧಿಕಾರಿಗಳು ಎದುರಿಸುತ್ತಿರುವ ಹೆಚ್ಚುತ್ತಿರುವ ಅಪಾಯಗಳ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇವಿಎಂ ಮತಗಳ ಮರು ಎಣಿಕೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್


