ಬಿಹಾರದಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 17 ವರ್ಷದ ಅಪ್ರಾಪ್ತೆ ಮೇಲೆ ಮಂಗಳವಾರ (ಜೂನ್ 7) ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
“ಬಾಲಕಿಯು ಪಶ್ಚಿಮ ಚಂಪಾರಣ್‌ನಲ್ಲಿರುವ ಬೆಟ್ಟಿಯಾಗೆ ಹೋಗಲು ಬಸ್‌ಗಾಗಿ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಬಸ್ ಚಾಲಕನು ಬೆಟ್ಟಿಯಾಗೆ ಹೋಗುವುದಾಗಿ ಹೇಳಿ, ಆಕೆಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾರೆ” ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಬೆಟ್ಟಿಯಾ-ಸದರ್ ) ಮುಕುಲ್ ಪಾಂಡೆ ಹೇಳಿದರು.
“ಬಸ್ಸಿನಲ್ಲಿ ಬಾಲಕಿಗೆ ಮತ್ತು ಬರಿಸುವ ಪಾನೀಯವನ್ನು ನೀಡಿ, ಪ್ರಜ್ಞೆ ತಪ್ಪಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು ಎಂದು ಪೊಲೀಸರಿಗೆ ಅಪ್ರಾಪ್ತೆ ತಿಳಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಹತ್ಯೆ: ನಾಲೆಯಲ್ಲಿ ತೇಲಿ ಬಂದ ಅರ್ಧ ಕತ್ತರಿಸಿದ ಮಹಿಳೆಯರ ಮೃತದೇಹಗಳು
“ಆರೋಪಿಗಳು ಆಕೆಯನ್ನು ಬಸ್ಸಿನೊಳಗೆ ಕೂಡಿಹಾಕಿ ಪರಾರಿಯಾಗಿದ್ದರು. ದಾರಿಯಲ್ಲಿ ಹೋಗುತ್ತಿದ್ದ ಜನರು ಬಸ್ಸಿನ ಬಾಗಿಲು ತೆರೆದು ಪೊಲೀಸರಿಗೆ ಮಾಹಿತಿ ನೀಡಿದರು” ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೆಟ್ಟಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ, ಘಟನೆಗೆ ಸಂಬಂಧಿಸಿದಂತೆ ಬಸ್ಸಿನ ಚಾಲಕ, ಕಂಡಕ್ಟರ್ ಮತ್ತು ಸಹಾಯಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಈಗ, ಸಂಗ್ರಹಿಸಿದ ಸಾಕ್ಷ್ಯಗಳ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ತಜ್ಞರನ್ನು ಕರೆಯಲಾಗಿದೆ. ಈಗಾಗಲೇ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಜೊತೆಗೆ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಡೆದ ಹೈದರಾಬಾದ್‌ನ ಜುಬ್ಲಿ ಹಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಐಎಂಐಎಂ ಶಾಸಕರನ ಪುತ್ರ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್: AIMIM ಶಾಸಕನ ಪುತ್ರ ಸೇರಿದಂತೆ ಎಲ್ಲ ಆರೋಪಿಗಳ ಬಂಧನ


