ಚುನಾವಣೋತ್ತರ ಸಮೀಕ್ಷೆಗಳು ಮತ್ತು ಇಂದಿನ ಆರಂಭಿಕ ಮುನ್ನಡೆಗಳಿಂದ ಬಿಹಾರದ ಕಿರಿಯ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಆಸೆ ಹೊತ್ತಿದ್ದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಕನಸು ನಿಧಾನವಾಗಿ ಕ್ಷೀಣಿಸುತ್ತಿದೆ. ಸದ್ಯದ ಮತ ಎಣಿಕೆ ವರದಿಗಳ ಆಧಾರದಲ್ಲಿ ಎನ್‌ಡಿಎ 127 ಕ್ಷೇತ್ರಗಳಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡರೆ ಮಹಾಘಟಬಂಧನ್ 103 ಕ್ಕೆ ಕುಸಿದಿದೆ.
ಇಂದು ಬೆಳಿಗ್ಗೆ 9:30ರವರೆಗೂ ಮಹಾಘಟಬಂಧನ್ 125 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ತದನಂತರ ಎನ್‌ಡಿಎ ಸ್ಪಷ್ಟ ಮುನ್ನಡೆ ಸಾಧಿಸುತ್ತಿದ್ದು ಅಧಿಕಾರದತ್ತ ದಾಪುಗಾಲಿಡುತ್ತಿದೆ. ಅಲ್ಲಿಗೆ ಮತ್ತೊಮ್ಮೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗುವುದು ಖಾತರಿಯಾಗುತ್ತಿದೆ.
ಈ ಚುನಾವಣೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿಜೆಪಿಯು ಕಳೆದ ಚುನಾವಣೆಗಿಂತ 21ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಯು 20 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಆದರೂ ಎನ್‌ಡಿಎ ಕಳೆದ ಬಾರಿಗಿಂತ 07 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಸರಳ ಬಹುಮತ ಪಡೆಯುವ ನಿರೀಕ್ಷೆಯಲ್ಲಿದೆ.
ಇನ್ನೊಂದು ಕಡೆ ಮಹಾಘಟಬಂಧನ್‌ನಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಹಿನ್ನಡೆ ಅನುಭವಿಸಿದರೆ ಎಡಪಕ್ಷಗಳು ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಬಾರಿಗಿಂತ ಆರ್‌ಜೆಡಿ 21 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಅದೇ ರೀತಿಯಲ್ಲಿ ಕಾಂಗ್ರೆಸ್ 7 ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ.
ಆಶ್ಚರ್ಯಕರ ರೀತಿಯಲ್ಲಿ ಮಹಾಘಟಬಂಧನ್ ನ ಭಾಗವಾದ ಎಡಪಕ್ಷಗಳು 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಸಿಪಿಐ(ಎಂಎಲ್) 14 ಸ್ಥಾನಗಳಲ್ಲಿ, ಸಿಪಿಐ 03 ಮತ್ತು ಸಿಪಿಐ(ಎಂ) 03 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಇನ್ನು ಚಿರಾಗ್ ಪಾಸ್ವಾನ್‌ರವರ ಎಲ್‌ಜೆಪಿ 05 ಸ್ಥಾನಗಳಲ್ಲಿ ಮತ್ತು ಇತರರು 08 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸರಳ ಬಹುಮತಕ್ಕೆ 122 ಸ್ಥಾನಗಳು ಅಗತ್ಯವಿದ್ದು ಸದ್ಯದ ಮುನ್ನಡೆ ಟ್ರೆಂಡ್ ಗಮನಿಸಿದರೆ ಎನ್‌ಡಿಎ ಅದನ್ನು ಸುಲಭಕ್ಕೆ ಮುಟ್ಟುವಂತೆ ತೋರುತ್ತಿದೆ.
ಇದನ್ನೂ ಓದಿ: ಮಧ್ಯಪ್ರದೇಶ ಉಪಚುನಾವಣೆ: ಬಿಜೆಪಿ- 18, ಕಾಂಗ್ರೆಸ್- 9 ಸ್ಥಾನಗಳಲ್ಲಿ ಮುನ್ನೆಡೆ


