ಮಹಾ ಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಬಜರಂಗದಳದ ದುಷ್ಕರ್ಮಿಗಳು “ಲವ್ ಜಿಹಾದ್” ಎಂಬ ವಿಷಯದಲ್ಲಿ ಬುಧವಾರ ಉದ್ರೇಕಕಾರಿ ಟ್ಯಾಬ್ಲೋವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಬಿಹಾರದ ಮುಂಗೇರ್ ಪಟ್ಟಣದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ ಎಂದು ವರದಿಯಾಗಿದೆ. ಈ ವಿವಾದದ ತನಿಖೆಗೆ ಇಬ್ಬರು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ವರದಿ ಹೇಳಿದೆ. ಬಿಹಾರ
ಕನಿಷ್ಠ 50 ಟ್ಯಾಬ್ಲೋಗಳನ್ನು ಒಳಗೊಂಡಿದ್ದ ಶಿವರಾತ್ರಿ ಮೆರವಣಿಗೆಯಲ್ಲಿ “ಲವ್ ಜಿಹಾದ್” ಅನ್ನು ಎತ್ತಿ ತೋರಿಸುವ ಟ್ಯಾಬ್ಲೋ ಇತ್ತು ಎಂದು ವರದಿಯಾಗಿದೆ. ವಿವಾದಿತ ಲವ್ ಜಿಹಾದ್ ಟ್ಯಾಬ್ಲೋದಲ್ಲಿ “ಘೋರ ಚಿತ್ರಗಳು” ಮತ್ತು “ಕೋಮುವಾದಿ” ಸಂದೇಶಗಳನ್ನು ಹೊಂದಿರುವ ವೃತ್ತಪತ್ರಿಕೆ ತುಣುಕುಗಳನ್ನು ಪ್ರದರ್ಶಿಲಾಗಿತ್ತು.
ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಹಾದುಹೋದ ನಂತರ, ಮೆರವಣಿಗೆಯು ಮಂಕೇಶ್ವರ ನಾಥ್ ಮಹಾದೇವ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು, ಅಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ತಮ್ಮ ಸಂಘಟನೆಯ ಕೃತ್ಯವನ್ನು ಮುಂಗೇರ್‌ನಲ್ಲಿ ಬಜರಂಗದಳ ಸಂಚಾಲಕ ಸೌರಭ್ ಎಸ್ ಸಂಪಣ್ಣ ಸಮರ್ಥಿಸಿಕೊಂಡಿದ್ದು, ಇದು “ಸಾಮಾಜಿಕ ಸಂದೇಶ”ವನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
“ಯಾವುದೇ ಧರ್ಮವನ್ನು ಟ್ಯಾಬ್ಲೋದಲ್ಲಿ ಹೆಸರಿಸಲಾಗಿಲ್ಲ ಅಥವಾ ದಾಳಿ ಮಾಡಲಾಗಿಲ್ಲ. ಮದುವೆಯ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯದ ಕಡೆಗೆ ಜನರ ಗಮನ ಸೆಳೆಯುವುದು ನಮ್ಮ ಉದ್ದೇಶವಾಗಿತ್ತು.” ಎಂದು ಅವರು ಹೇಳಿದ್ದಾರೆ
ಆದಾಗ್ಯೂ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಅದರ ಮಿತ್ರ ಪಕ್ಷ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು, ಸಂಘಟಕರು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಎರಡು ಧಾರ್ಮಿಕ ನಂಬಿಕೆಗಳ ಸದಸ್ಯರ ನಡುವೆ ಗಲಭೆಗಳನ್ನು ಸೃಷ್ಟಿಸಲು ಪಿತೂರಿ ನಡೆಸಲಾಗುತ್ತಿದೆ” ಎಂದು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
ಉದ್ರೇಕಕಾರಿ ಟ್ಯಾಬ್ಲೋ ಪ್ರದರ್ಶನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ನಿತೀಶ್ ಕುಮಾರ್ ಸರ್ಕಾರವನ್ನು ವಿಪಕ್ಷಗಳು ಒತ್ತಾಯಿಸಿವೆ. “ಇಂತಹ ಘಟನೆಗಳನ್ನು ಸಹಿಸಬಾರದು. ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಮೃತ್ಯುಂಜಯ್ ತಿವಾರಿ ಅವರು ಹೇಳಿದ್ದಾರೆ. ಬಿಹಾರ
ಬಿಹಾರ ಕಾಂಗ್ರೆಸ್ ವಕ್ತಾರ ಜ್ಞಾನ್ ರಂಜನ್ ಗುಪ್ತಾ ಇದೇ ರೀತಿಯ ಆತಂಕಗಳನ್ನು ವ್ಯಕ್ತಪಡಿಸಿದ್ದು, “ಭಾರತದ ಸಂವಿಧಾನವು ಯಾವುದೇ ಧರ್ಮವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಕ್ರಮಣ ಮಾಡಲು ಯಾರಿಗೂ ಅನುಮತಿ ನೀಡುವುದಿಲ್ಲ. ಮೆರವಣಿಗೆಯಲ್ಲಿನ ಬಜರಂಗದಳದ ಪೋಸ್ಟರ್ ಕೆಟ್ಟ ಅಭಿರುಚಿಯಿಂದ ಕೂಡಿತ್ತು” ಎಂದು ಹೇಳಿದ್ದಾರೆ.
ಈ ನಡುವೆ, ಬಿಜೆಪಿ ಈ ವಿಷಯದ ಸೂಕ್ಷ್ಮತೆಯನ್ನು ಒಪ್ಪಿಕೊಂಡಿದ್ದು, ಆದರೆ ಟ್ಯಾಬ್ಲೋದಲ್ಲಿ ತೆಗೆದುಕೊಳ್ಳಲಾದ ವಿಧಾನವನ್ನು ಟೀಕಿಸಿದೆ. “ಲವ್ ಜಿಹಾದ್ ಬಹಳ ಕಳವಳಕಾರಿ ವಿಷಯವಾಗಿದೆ. ಆದರೆ ಅದರ ಸಾಮಾಜಿಕ ಸಂದೇಶವನ್ನು ಉತ್ತಮ ರೀತಿಯಲ್ಲಿ ತಿಳಿಸಬಹುದಿತ್ತು. ಕೆಲವು ರಕ್ತಸಿಕ್ತ ಚಿತ್ರಗಳ ಬಳಕೆಯನ್ನು ತಪ್ಪಿಸಬಹುದಿತ್ತು” ಎಂದು ಪಕ್ಷದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.
ಈ ನಡುವೆ, ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಅಪರಿಚಿತ ವ್ಯಕ್ತಿಗಳು ಹಿಂದೂ ದೇವತೆಗಳ ವಿಗ್ರಹಗಳನ್ನು ದೇವಸ್ಥಾನದಿಂದ ಹೊರಗೆ ಎಸೆದು ಅರ್ಚಕರ ಗುಡಿಸಲಿಗೆ ಬೆಂಕಿ ಹಚ್ಚಿದ ನಂತರ ಉದ್ವಿಗ್ನತೆ ಹೆಚ್ಚಾಗಿದೆ. ಗಣೇಶ ಮತ್ತು ಕಾರ್ತಿಕೇಯನ ವಿಗ್ರಹಗಳನ್ನು ಅಪವಿತ್ರಗೊಳಿಸಲಾಗಿದ್ದು, ಪರಮಾನಂದಪುರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದ ಘಟನೆ ಬಗ್ಗೆ ತಿಳಿದು ಬಂದಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಸದರ್) ರಾಮಕೃಷ್ಣ ಅವರು ಹೇಳಿದ್ದಾರೆ. ಬಿಹಾರ
ಯಾವುದೇ ಹೆಚ್ಚಿನ ಗಲಭೆಗಳನ್ನು ತಡೆಗಟ್ಟಲು, ಪ್ರದೇಶದಲ್ಲಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಲಾಗಿದೆ ಮತ್ತು ಪೊಲೀಸ್ ಠಾಣೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ನವಾಡ ಮತ್ತು ನಳಂದ ಜಿಲ್ಲೆಗಳಿಂದಲೂ ಕೋಮು ಉದ್ವಿಗ್ನತೆ ಘಟನೆಗಳು ವರದಿಯಾಗಿದ್ದು, ನಳಂದದಲ್ಲಿ, ಅಶಾಂತಿಗೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.


