ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಸುಮಾರು ಎರಡು ವರ್ಷಗಳ ನಂತರ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಭಾನುವಾರ ರಾಜೀನಾಮೆ ನೀಡಿದ್ದಾರೆ. ಸಂಜೆ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸಿದ್ದಾರೆ. Biren Singh resigns
ತಮ್ಮ ನಾಯಕತ್ವದ ವಿರುದ್ಧ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತವನ್ನು ಶಮನಗೊಳಿಸಲು ಅವರು ರಾಜೀನಾಮೆ ನೀಡಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಈ ನಡುವೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿ ಸರ್ಕಾರದ ಬಹುಮತವನ್ನು ಪರೀಕ್ಷೆಗೆ ಒಡ್ಡುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಿತ್ರಪಕ್ಷ ಕಾನ್ರಾಡ್ ಸಂಗ್ಮಾ ಅವರ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ ಈ ಹಿಂದೆಯೆ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಅದಾಗ್ಯೂ, ಬಿಜೆಪಿಗೆ ಸಂಖ್ಯಾಬಲವಿದ್ದರೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯನ್ನು ಬಯಸುತ್ತಿರುವ ಶಾಸಕರು ಬಹುಮತ ಪರೀಕ್ಷೆಯ ಸಂದರ್ಭದಲ್ಲಿ ಪಕ್ಷದ ವಿಪ್ ಅನ್ನು ನಿರ್ಲಕ್ಷಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಈ ಸಾಧ್ಯತೆಯನ್ನು ತಪ್ಪಿಸಲು, ಕೇಂದ್ರ ನಾಯಕತ್ವದೊಂದಿಗೆ ಸಮಾಲೋಚಿಸಿದ ನಂತರ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದಾಗಿ ಎನ್‌ಡಿಟಿವಿ ಹೇಳಿದೆ. ಬೆಳಿಗ್ಗೆ ದೆಹಲಿಗೆ ತೆರಳಿದ್ದ ಬಿರೇನ್ ಸಿಂಗ್, ಅಲ್ಲಿ ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.
ಸುಮಾರು 12 ಶಾಸಕರು ನಾಯಕತ್ವ ಬದಲಾವಣೆಗೆ ತೀವ್ರವಾಗಿ ಒತ್ತಾಯಿಸುತ್ತಿದ್ದು, ಸುಮಾರು ಆರು ಶಾಸಕರು ಬೇರೆ ಪಕ್ಷಗಳಿಗೆ ಪಕ್ಷಾಂತರವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಷ್ಟೆ ಅಲ್ಲದೆ, ಸ್ಪೀಕರ್ ಮತ್ತು ಮುಖ್ಯಮಂತ್ರಿ ಕೂಡಾ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿನ ಹಿನ್ನಲೆ, ಬೆಳೆಯುತ್ತಿರುವ ಸಕಾರಾತ್ಮಕ ರಾಜಕೀಯ ನಿರೂಪಣೆಯನ್ನು ಮಣಿಪುರದ ಪರಿಸ್ಥಿತಿ ಮರೆಮಾಡಬಾರದು ಎಂದು ಪಕ್ಷದ ಹೈಕಮಾಂಡ್ ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ.
2023ರ ಮೇ ತಿಂಗಳಿನಲ್ಲಿ ರಾಜ್ಯ ಮೈತೇಯಿ ಮತ್ತು ಕುಕಿ ಬುಡಕಟ್ಟುಗಳ ನಡುವೆ ಪ್ರಾರಂಭವಾದ ಕೊಮುಗಲಭೆಯಲ್ಲಿ ಈ ವರೆಗೆ 250 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, 60,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಕಳೆದ 2 ವರ್ಷಗಳಿಂದ ಜನರು ನಿರಾಶ್ರಿತ ಶಿಬಿರಗಳಲ್ಲಿ ಭಯದಿಂದ ವಾಸಿಸುತ್ತಿದ್ದಾರೆ. ವಿಪಕ್ಷಗಳು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಹೇಳುತ್ತಲೆ ಬಂದಿವೆ.


