ದಕ್ಷಿಣ ಏಷ್ಯಾದ ಸಮುದಾಯಗಳು, ವಿಶೇಷವಾಗಿ ಖಲಿಸ್ತಾನಿಗಳನ್ನು ಗುರಿಯಾಗಿಸಲು ಭಾರತ ಸರ್ಕಾರದ ಏಜೆಂಟ್‌ರು ಕ್ರಿಮಿನಲ್‌ಗಳನ್ನು ಬಳಸುತ್ತಿದ್ದಾರೆ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಉಲ್ಲೇಖಿಸಿ ಕೆನಡಾ ಆರೋಪ ಮಾಡಿದೆ.
ಎನ್‌ಸಿಪಿ ನಾಯಕ ಬಾಬಾ ಸಿದ್ದೀಕ್ ಹತ್ಯೆಯ ಹಿಂದೆ ಬಿಷ್ಣೋಯ್ ಗ್ಯಾಂಗ್ ಇರುವ ಆರೋಪ ಕೇಳಿ ಬಂದಿರುವ ನಡುವೆ ಮತ್ತು ಕೆನಡಾ ರಾಜತಾಂತ್ರಿಕರನ್ನು ಭಾರತ ಹೊರದಬ್ಬಿದ ಬೆನ್ನಲ್ಲೇ ಕೆನಡಾ ಗಂಭೀರ ಆರೋಪ ಮಾಡಿದೆ.
ಕೆನಡಾದ ಪ್ರಜೆ ಮತ್ತು ಖಲಿಸ್ತಾನಿ ಪ್ರತ್ಯೇಕವಾದಿ ಹರ್ದೀಪ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ‘ಏಜೆಂಟರು’ ಭಾಗಿಯಾಗಿದ್ದಾರೆ ಎಂದು ಕಳೆದ ವರ್ಷ ಕೆನಡಾ ಆರೋಪಿಸಿತ್ತು. ಆ ಬಳಿಕ ಎರಡೂ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿದೆ. ಅದರ ಮುಂದುವರಿದ ಭಾಗವಾಗಿ, ಸುದ್ದಿಗೋಷ್ಠಿ ನಡೆಸಿರುವ ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (ಆರ್‌ಸಿಎಂಪಿ) ಆಯುಕ್ತ ಮೈಕ್ ಡುಹೆನೆ ಮತ್ತು ಉಪ ಆಯುಕ್ತೆ ಬ್ರಿಗಿಟ್ಟೆ ಗೌವಿನ್ ಭಾರತ ವಿರುದ್ದ ಆರೋಪಗಳನ್ನು ಮಾಡಿದ್ದಾರೆ.
“ಭಾರತ ಸರ್ಕಾರ ದಕ್ಷಿಣ ಏಷ್ಯಾದ ಸಮುದಾಯಗಳನ್ನು ಗುರಿಯಾಗಿಸಿಕೊಂಡಿದೆ. ನಿರ್ದಿಷ್ಟವಾಗಿ ಕೆನಡಾದಲ್ಲಿ ಖಲಿಸ್ತಾನಿಗಳೇ ಅವರ ಗುರಿ. ಅವರು (ಭಾರತ) ಸಂಘಟಿತರಾಗಿ ಈ ಅಪರಾಧಗಳಲ್ಲಿ ಭಾಗಿಯಾಗುತ್ತಾರೆ” ಎಂದು ಉಪ ಆಯುಕ್ತೆ ಬ್ರಿಗಿಟ್ಟೆ ಗೌವಿನ್ ಆರೋಪಿಸಿದ್ದಾರೆ.
#WATCH | Ottawa, Ontario (Canada): "It (India) is targeting South Asian community but they are specifically targeting pro-Khalistani elements in Canada…What we have seen is, from an RCMP perspective, they use organised crime elements. It has been publically attributed and… pic.twitter.com/KYKQVSx7Ju
— ANI (@ANI) October 14, 2024
“ಭಾರತದ ಏಜೆಂಟರು ಕ್ರಿಮಿನಲ್‌ಗಳೊಂದಿಗೆ, ವಿಶೇಷವಾಗಿ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿರುವುದು ಜಗಜ್ಜಾಹೀರಾಗಿದೆ” ಎಂದು ಗೌವಿನ್ ಅವರು ನೇರವಾಗಿ ಆರೋಪ ಮಾಡಿದ್ದಾರೆ.
ಭಾರತ ಸರ್ಕಾರದ ಏಜೆಂಟರ ಮೇಲೆ ‘ನರಹತ್ಯೆ, ಸುಲಿಗೆ, ಬೆದರಿಕೆ ಮತ್ತು ಬಲವಂತದ’ ಆರೋಪವಿದೆಯೇ? ಎಂದು ನಿರ್ದಿಷ್ಟವಾಗಿ ಕೇಳಿದಾಗ, ಅವರು ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಬಾಬಾ ಸಿದ್ದಿಕ್ ಹತ್ಯೆ | ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೈವಾಡ ಖಚಿತಪಡಿಸಿದ ಪೊಲೀಸರು


