ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ ನನ್ನ ಕಾನೂನು ಹೋರಾಟವನ್ನು ಮುಂದುವರಿಸಲು ದೃಢನಿಶ್ಚಯ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಮಲಯಾಳಂ ಸುದ್ದಿವಾಹಿನಿ ಏಷ್ಯಾನೆಟ್ ನ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಂತ್ರಸ್ತೆ ತೀವ್ರವಾದ ಭಯ, ಕಳಂಕ ಮತ್ತು ಚರ್ಚ್‌ನೊಳಗಿನ ಜೀವನದ ಕಠೋರ ವಾಸ್ತವಗಳಿಂದಾಗಿ ಪದೇ ಪದೇ ನಿಂದನೆ ಅನುಭವಿಸಿದರೂ ವರ್ಷಗಳ ಕಾಲ ಮೌನವಾಗಿದ್ದೆ ಎಂದು ಹೇಳಿದ್ದಾರೆ. ತನ್ನ ಮೇಲೆ ಹದಿಮೂರು ಬಾರಿ ಅತ್ಯಾಚಾರ ನಡೆದಿದೆ. ಆದರೆ, ಕಾನ್ವೆಂಟ್ ತೊರೆದರೆ ‘ಓಡಿಹೋದ ಸನ್ಯಾಸಿನಿ’ ಎಂದು ಹಣೆಪಟ್ಟಿ ಕಟ್ಟುವ ಭಯದಿಂದ ಆರಂಭದಲ್ಲಿ ಮಾತನಾಡಿರಲಿಲ್ಲ ಎಂದಿದ್ದಾರೆ.
ಬಿಷಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಬಳಿಕ ಇದು ಮೊದಲ ಬಾರಿಯಾಗಿದೆ ಸಂತ್ರಸ್ತೆ ಮನ ತೊರೆದು ಮಾತನಾಡಿರುವುದು. ಅಸಲಿಗೆ ಸಂಸತ್ರಸ್ತೆಯ ಹೆಸರು ಬಹಿರಂಗಗೊಂಡಿರುವುದೇ ಇದು ಮೊದಲ ಬಾರಿಯಾಗಿದೆ.
ಕಳೆದ 9 ವರ್ಷಗಳಲ್ಲಿ ಸಂತ್ರಸ್ತೆಗೆ ನ್ಯಾಯ ಒದಗಿಸಲು ಅವರ ಜೊತೆಯಿದ್ದ 6 ಮಂದಿ ಸನ್ಯಾಸಿನಿಗಳು ಹೋರಾಟ ನಡೆಸಿದ್ದರು. ಅವರಲ್ಲಿ ಸಿಸ್ಟರ್ ಅನುಪಮಾ ಕೆಲಮಂಗಲತುವೆಲಿಯಿಲ್ ಪ್ರಮುಖರು. ಸಿಸ್ಟರ್ ಅನುಪಮಾ ಈ ಘಟನೆಯ ಬಳಿಕ ಸನ್ಯಾಸತ್ವ ತೊರೆದು ಕೇರಳದ ಅಲಪ್ಪುಝದಲ್ಲಿರುವ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
2018ರಲ್ಲಿ, ಕೇರಳದ ಕುರವಿಲಂಙಾಡುವಿನಲ್ಲಿರುವ ಸೇಂಟ್ ಫ್ರಾನ್ಸಿಸ್ ಮಿಷನ್ ಹೋಂನಲ್ಲಿ ವಾಸಿಸುತ್ತಿದ್ದ ಹಿರಿಯ ಸನ್ಯಾಸಿನಿ, ಆಗ ಪಂಜಾಬ್‌ನ ಜಲಂಧರ್ ಡಯಾಸಿಸ್‌ನ ಬಿಷಪ್ ಆಗಿದ್ದ ಫ್ರಾಂಕೊ ಮುಲಕ್ಕಲ್ ಅವರು ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಭಾರತದಲ್ಲಿ ಹಾಲಿ ಬಿಷಪ್ ವಿರುದ್ದ ಸನ್ಯಾನಿಸಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಪೊಲೀಸ್ ದೂರು ದಾಖಲಿಸಿರುವುದು ಇದು ಮೊದಲ ಬಾರಿಯಾಗಿತ್ತು.
ಜನವರಿ 2022ರಲ್ಲಿ, ಪ್ರಕರಣದ ವಿಚಾರಣಾ ನ್ಯಾಯಾಲಯವಾದ ಕೊಟ್ಟಾಯಂನಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಫ್ರಾಂಕೊ ಮುಲಕ್ಕಲ್ ಅವರನ್ನು ಖುಲಾಸೆಗೊಳಿಸಿತು. 2023ರಲ್ಲಿ, ಮುಲಕ್ಕಲ್ ಅವರು ದಿವಂಗತ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರು ಈಗ ಜಲಂಧರ್‌ನ ಬಿಷಪ್ ಎಮೆರಿಟಸ್ ಎಂಬ ಬಿರುದನ್ನು ಪಡೆದಿದ್ದಾರೆ. ಇದು ಹಿಂದಿನ ಸೇವೆಯನ್ನು ಗುರುತಿಸಿ ನಿವೃತ್ತ ಬಿಷಪ್‌ಗಳಿಗೆ ನೀಡಲಾಗುವ ಗೌರವ ಸ್ಥಾನಮಾನವಾಗಿದೆ.
ತಮ್ಮ ದೀರ್ಘ ಮೌನಕ್ಕೆ ಕಾರಣಗಳನ್ನು ವಿವರಿಸಿದ ಸಂತ್ರಸ್ತೆ, ಸನ್ಯಾಸಿನಿಯೊಬ್ಬಳಿಗೆ ಪರಿಶುದ್ಧತೆಯನ್ನು ಅತ್ಯುನ್ನತ ಮೌಲ್ಯವೆಂದು ಪರಿಗಣಿಸಲಾಗುತ್ತದೆ. ಅದು ‘ಕಳೆದುಹೋಗಿದೆ’ ಎಂದು ಗೊತ್ತಾದರೆ ಸನ್ಯಾಸಿನಿಯನ್ನು ತಕ್ಷಣವೇ ಚರ್ಚ್‌ನಿಂದ ಹೊರಹಾಕಬಹುದು. ಚರ್ಚ್ ತೊರೆದ ಅನೇಕ ಮಹಿಳೆಯರಿಗೆ ‘ಓಡಿಹೋದ ಸನ್ಯಾಸಿನಿಗಳು’ ಎಂಬ ಹಣೆಪಟ್ಟಿ ಕಟ್ಟಲ್ಪಟ್ಟದ್ದನ್ನು ನಾನು ನೋಡಿದ್ದೇನೆ. ಇದು ಅವರಿಗೆ ಮತ್ತು ಅವರ ಕುಟುಂಬಗಳಿಗೆ ಜೀವಮಾನದ ಅವಮಾನವನ್ನು ತರುತ್ತದೆ ಎಂದಿದ್ದಾರೆ.
ತನ್ನ ಪಾವಿತ್ರ್ಯ ಕಸಿದುಕೊಳ್ಳಲಾಗಿದೆ ಎಂದು ತಾನು ಬೆಳೆಸುತ್ತಿರುವ ಮಕ್ಕಳಿಗೆ ಹೇಳುವುದನ್ನು ಎಂದಿಗೂ ಊಹಿಸಲೂ ಸಾಧ್ಯವಿಲ್ಲ. ಒಬ್ಬ ತಾಯಿ ತನ್ನ ಮಕ್ಕಳ ಮುಂದೆ ಇದನ್ನು ಹೇಳಲು ಸಾಧ್ಯವಿಲ್ಲ. ಈ ಭಯವು ತನ್ನನ್ನು ವರ್ಷಗಳ ಕಾಲ ಮೌನವಾಗಿಡುವಂತೆ ಮಾಡಿತು ಎಂದು ಹೇಳಿದ್ದಾರೆ.
ಎಲ್ಲವೂ ಸಾಮಾನ್ಯವಾಗಿದೆ ಎಂದು ನಟಿಸುತ್ತಾ ಕಾನ್ವೆಂಟ್ ಒಳಗೆ ವಾಸಿಸುವುದನ್ನು ಮುಂದುವರಿಸುವ ನೋವನ್ನು ಸಂತ್ರಸ್ತೆ ಬಿಚ್ಚಿಟ್ಟಿದ್ದು, “ನಗುನಗುತ್ತಾ, ಚೆನ್ನಾಗಿ ವಸ್ತ್ರ ಧರಿಸಿ, ಶಾಂತವಾಗಿ ಹೊರಗೆ ಹೆಜ್ಜೆ ಹಾಕಬೇಕಾಯಿತು ಮತ್ತು ಒಳಗಿನ ಅಪಾರ ನೋವನ್ನು ಮರೆಮಾಡಬೇಕಾಯಿತು” ಎಂದು ಹೇಳಿದ್ದಾರೆ. “ಎಲ್ಲವನ್ನೂ ತನ್ನೊಳಗೆ ಇಟ್ಟುಕೊಂಡು, ಆಘಾತವನ್ನು ಒಂಟಿಯಾಗಿ ಹೊತ್ತುಕೊಂಡು ಕಾನ್ವೆಂಟ್‌ನಲ್ಲಿ ವಾಸಿಸುವುದನ್ನು ಮುಂದುವರೆಸಿದ್ದೇನೆ” ಎಂದು ತಿಳಿಸಿದ್ದಾರೆ.
ಅನೇಕ ಕಾನ್ವೆಂಟ್‌ಗಳಲ್ಲಿ ಇದೇ ರೀತಿಯ ಅನುಭವಗಳಿವೆ. ಮೌನವಾಗಿ ನೋವು ಅನುಭವಿಸುತ್ತಿರುವ ಹಲವಾರು ಜನರನ್ನು ತಾನು ವೈಯಕ್ತಿಕವಾಗಿ ತಿಳಿದಿದ್ದೇನೆ. ಎಲ್ಲಾ ಸತ್ಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಮಾತನಾಡಲು ಧೈರ್ಯ ಮಾಡುವವರಿಗೆ ಏನಾಗುತ್ತದೆ ಎಂದು ನಾನು ನೋಡಿದ್ದೇನೆ ಎಂದಿದ್ದಾರೆ.
ಚರ್ಚ್‌ನೊಳಗಿನ ದೌರ್ಜನ್ಯವನ್ನು ಹೇಳಿಕೊಂಡ ನಂತರ ನನ್ನನ್ನು ಪ್ರತ್ಯೇಕಿಸಲಾಗಿತ್ತು. ಬಿಷಪ್ ಫ್ರಾಂಕೊ ನನ್ನ ಕುಟುಂಬ ಸದಸ್ಯರು ಮತ್ತು ಸಹ ಸನ್ಯಾಸಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸಿದರು. ಕಾನ್ವೆಂಟ್‌ನೊಳಗಿನ ಕೆಲ ಸನ್ಯಾಸಿಗಳು ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಹಣಕ್ಕಾಗಿ ದೂರು ದಾಖಲಿಸಲಾಗಿದೆ ಎಂಬ ಆರೋಪಗಳನ್ನು ಸಂತ್ರಸ್ತೆ ಸುಳ್ಳು ಎಂದು ತಳ್ಳಿ ಹಾಕಿದ್ದು, “ನಾನು ಡಯಾಸಿಸ್ ಅಥವಾ ಫ್ರಾಂಕೊ ಅವರಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಬಳಿಕ ಹೋರಾಟ ನಡೆಸಿದ ಮೂವರು ಸನ್ಯಾಸಿನಿಗಳು ಒಂಟಿತನ ಮತ್ತು ಕಿರುಕುಳವನ್ನು ಎದುರಿಸಿದ ನಂತರ ಚರ್ಚ್ ತೊರೆದರು ಎಂದು ಬಹಿರಂಗಪಡಿಸಿದ ಸಂತ್ರಸ್ತೆ, ತಾನು ಸೇರಿದಂತೆ ಉಳಿದ ಮೂವರು ಈಗ ಕಾನ್ವೆಂಟ್ ಒಳಗೆ ಟೈಲರಿಂಗ್ ಕೆಲಸ ಮಾಡುವ ಮೂಲಕ ಬದುಕುಳಿದಿದ್ದೇವೆ. ಚರ್ಚ್ ನಾಯಕತ್ವದ ಮೌನವೇ ಅವರನ್ನು ಬೀದಿಗೆ ತಳ್ಳಿದ್ದು, ಅವರಿಗೆ ಬೆಂಬಲ ಅಥವಾ ರಕ್ಷಣೆ ಇಲ್ಲದಾಗಿದೆ ಎಂದು ಹೇಳಿದ್ದಾರೆ.
“ನಾವು ಇನ್ನೂ ಜೀವಂತವಾಗಿದ್ದೇವೆ, ನಾವು ಇನ್ನೂ ಇಲ್ಲಿದ್ದೇವೆ… ನಮ್ಮ ಹೋರಾಟ ಇನ್ನೂ ಮುಂದುವರೆದಿದೆ ಎಂದು ಜನರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ.
ಈ ಪ್ರಕರಣವನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೂಲಕ ಮುಂದುವರಿಸಲು ನಿರ್ಧರಿಸಿದ್ದೇನೆ. ಸುಪ್ರೀಂ ಕೋರ್ಟ್‌ನಿಂದ ತೀರ್ಪು ಬರುವವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ. ನನ್ನ ನ್ಯಾಯಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ” ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಹೊರಬಿದ್ದ 2017ರ ನಟಿ ಮೇಲಿನ ಅತ್ಯಾಚಾರ ಪ್ರಕರಣದ ತೀರ್ಪನ್ನು ಸಂತ್ರಸ್ತೆ ಉಲ್ಲೇಖಿಸಿದ್ದು, “ಆ ತೀರ್ಪು ನಿಜವಾಗಿಯೂ ನನಗೆ ನೋವುಂಟು ಮಾಡಿದೆ. ನನ್ನ ಸ್ವಂತ ಪ್ರಕರಣದ ತೀರ್ಪು ಬಂದ ದಿನಕ್ಕೆ ಅದು ನನ್ನನ್ನು ಕರೆದೊಯ್ಯಲ್ಪಟ್ಟಿತು. ಆಕೆಗೂ ನ್ಯಾಯ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.
“ಅದಕ್ಕಾಗಿಯೇ ನಾನು ಈಗ ಸಾರ್ವಜನಿಕವಾಗಿ ಹೊರಬರಲು ನಿರ್ಧರಿಸಿದ್ದೇನೆ” ಎಂದು ಸಂತ್ರಸ್ತೆ ತಿಳಿಸಿದ್ದಾರೆ.


