ಏಕಾಏಕಿ ಕೃಷಿ ಕಾನೂನುಗಳನ್ನು ವಾಪಸ್ ಪಡೆದ ಪ್ರಧಾನಿ ನರೇಂದ್ರ ಮೋದಿಯವರ ನಡೆಯಿಂದ ಮಾತು ಹೊರಡದಂತಾಗಿದೆ. ಇದು ಕೃಷಿ ಕಾಯ್ದೆಗಳ ಮಹತ್ವ ತಿಳಿಸುವಲ್ಲಿ ಬಿಜೆಪಿ ಕಾರ್ಯಕರ್ತರು ವಿಫಲತೆಯನ್ನು ಎತ್ತಿತೋರಿಸುತ್ತದೆ ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಉಮಾ ಭಾರತಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಭಾರತದ ರೈತರು ಸರ್ಕಾರದ ಇದುವರೆಗಿನ ಯಾವುದೇ ಕ್ರಮಗಳಿಂದಲೂ ತೃಪ್ತರಾಗಿಲ್ಲ ಎಂಬುದಕ್ಕೆ ನನ್ನ ಅಣ್ಣನೇ ಸಾಕ್ಷಿ. ಆತ ಕೃಷಿಯನ್ನು ನಾವು ನಂಬಿದ್ದೇವೆ. ಆದರೆ ಅದರಿಂದ ಶ್ರೀಮಂತರಾಗಲು ಸಾಧ್ಯವಿಲ್ಲ ಎನ್ನುತ್ತಿದ್ದರು” ಎಂದಿದ್ದಾರೆ.
ನಾನು ಕಳೆದ ಕೆಲವು ದಿನಗಳಿಂದ ವಾರಣಾಸಿಯಲ್ಲಿದ್ದೆ. ನವೆಂಬರ್ 19 ಪ್ರಧಾನಿ ನರೇಂದ್ರ ಮೋದಿಯವರ ಕೃಷಿ ಕಾನೂನುಗಳ ಹಿಂತೆಗೆತ ಘೋಷಣೆಯಿಂದ ಮಾತು ಹೊರಡಂತಾಗಿತ್ತು. ಹಾಗಾಗಿ ಮೂರು ದಿನದ ನಂತರ ಪ್ರತಿಕ್ರಿಯಿಸುತ್ತಿದ್ದೇನೆ ಎಂದು ಉಮಾ ಭಾರತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೃಷಿ ಕಾನೂನಿನ ಮಹತ್ವವನ್ನು ರೈತರಿಗೆ ವಿವರಿಸಲು ಸಾಧ್ಯವಾಗದಿದ್ದರೆ ಅದು ನಮ್ಮ ಬಿಜೆಪಿ ಕಾರ್ಯಕರ್ತರ ಅಸಮರ್ಪಕತೆಯಾಗಿದೆ. ನಾವು ರೈತರಿಗೆ ಕಾನೂನುಗಳ ಪ್ರಾಮುಖ್ಯತೆಯನ್ನು ಸರಿಯಾಗಿ ತಿಳಿಸಲು ಏಕೆ ಸಾಧ್ಯವಾಗಲಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ವಿರೋಧಪಕ್ಷಗಳ ಪ್ರೊಪಗಂಡಾಗೆ ಪ್ರಧಾನಿ ಮೋದಿಯವರು ಮಣಿದಿದ್ದು ಅತೀವ ದುಃಖ ತರಿಸಿದೆ ಎಂದ ಅವರು ಮೋದಿಯವರು ಉತ್ತಮ ನಾಯಕ ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ; ರೈತ ಹೋರಾಟ: ಲಕ್ನೋ ಕಿಸಾನ್ ಮಹಾಪಂಚಾಯತ್ ಚಿತ್ರಗಳು


