2021 ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ-ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಇ ಪಳನಿಸ್ವಾಮಿ ಹೇಳಿದ್ದು, ಕೇಂದ್ರ ಸಚಿವ ಅಮಿತ್ ಶಾ ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
“ವಿಧಾನಸಭಾ ಚುನಾವಣೆಗೆ ಲೋಕಸಭಾ ಮೈತ್ರಿ ಮುಂದುವರಿಯಲಿದೆ. ನಾವು 10 ವರ್ಷಗಳ ಉತ್ತಮ ಆಡಳಿತವನ್ನು ನೀಡಿದ್ದೇವೆ. ನಮ್ಮ ಮೈತ್ರಿ 2021 ರ ಚುನಾವಣೆಯಲ್ಲಿಯೂ ಗೆಲ್ಲುತ್ತದೆ. ತಮಿಳುನಾಡು ಯಾವಾಗಲೂ ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತದೆ” ಎಂದು ಪಳನಿಸ್ವಾಮಿ ಹೇಳಿದರು.
“ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಮಿಳುನಾಡು ಸರ್ಕಾರ ಯಶಸ್ವಿಯಾಗಿ ನಿರ್ವಹಿಸಿದೆ. ಕೇಂದ್ರದ ಶ್ರೇಯಾಂಕದ ಪಟ್ಟಿಯ ಪ್ರಕಾರ ಈ ವರ್ಷ ದೇಶದಲ್ಲಿ ರಾಜ್ಯವು ಉತ್ತಮವಾಗಿ ಆಡಳಿತ ನಡೆಸಿದೆ” ಎಂದು ಅಮಿತ್ ಶಾ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಖಾತೆ ತೆರೆಯಲು ಬಿಜೆಪಿ ಶತಪ್ರಯತ್ನ!
2011 ರ ವಿಧಾನಸಭಾ ಚುನಾವಣೆಯಲ್ಲಿ ಜೆ.ಜಯಲಲಿತಾ ಅವರು ಪಕ್ಷವನ್ನು ಮುನ್ನಡೆಸಿ ಗೆಲುವಿನತ್ತ ಕೊಂಡೊಯ್ದಾಗ ಡಿಎಂಕೆ ಸೋತಿತ್ತು. 2016 ರಲ್ಲಿಯೂ ಜಯಲಲಿತಾ ಪಕ್ಷವೇ ಗೆದ್ದಿತ್ತು. ಆದರೆ ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಪ್ರಬಲ ಪೈಪೋಟಿ ನೀಡಿತ್ತು.
ಕಾಂಗ್ರೆಸ್ ಮತ್ತು ಡಿಎಂಕೆ ನೇತೃತ್ವದ ಮೈತ್ರಿ ಕೂಟವು ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕೇವಲ ಒಂದರಲ್ಲಿ ಎಐಎಡಿಎಂಕೆ ಗೆದ್ದಿತ್ತು. ಇದು ತಮಿಳುನಾಡಿನ ರಾಜಕೀಯದ ಪ್ರಭಲ ನಾಯಕರಾದ ಕರುಣಾನಿಧಿ ಮತ್ತು ಜಯಲಲಿತಾ ಅವರ ನಿಧನದ ನಂತರ ನಡೆದ ಮೊದಲ ಪ್ರಮುಖ ಚುನಾವಣೆಯಾಗಿದೆ.
ಇದನ್ನೂ ಓದಿ: ಅಮಿತ್ ಶಾ ತಮಿಳುನಾಡು ಭೇಟಿ: ಟ್ವಿಟ್ಟರ್‌ನಲ್ಲಿ #GoBackAmitShah ಟ್ರೆಂಡ್!


