Homeಚಳವಳಿಸರ್ಕಾರಕ್ಕೆ 15 ದಿನ ಗಡುವು ಕೊಟ್ಟು ’ರೈಲ್ ರೋಕೋ’ ವಾಪಾಸ್ ಪಡೆದ ಪಂಜಾಬ್ ರೈತ ಸಂಘಟನೆಗಳು!

ಸರ್ಕಾರಕ್ಕೆ 15 ದಿನ ಗಡುವು ಕೊಟ್ಟು ’ರೈಲ್ ರೋಕೋ’ ವಾಪಾಸ್ ಪಡೆದ ಪಂಜಾಬ್ ರೈತ ಸಂಘಟನೆಗಳು!

ಮುಂದಿನ 15 ದಿನಗಳಲ್ಲಿ ರೈತರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ವಿಫಲವಾದರೆ ಮತ್ತೆ ಪ್ರತಿಭಟನೆ ಪುನರಾರಂಭಿಸುವ ಬಗ್ಗೆ ಕಿಸಾನ್ ಯೂನಿಯನ್ಸ್ ಎಚ್ಚರಿಸಿದೆ.

- Advertisement -
- Advertisement -

ವಿವಾದಿತ ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಆದರೆ ಪಂಜಾಬ್‌ನಲ್ಲಿ ತೀವ್ರತರಹದ ಪ್ರತಿಭಟನೆ ನಡೆಯುತ್ತಿದ್ದು, ರೈತ ಸಂಘಗಳ ನಿರಂತರ ’ರೈಲ್ ರೋಕೋ’ ಚಳುವಳಿ ಪಂಜಾಬ್ ಆರ್ಥಿಕತೆಗೆ ಪೆಟ್ಟು ನೀಡಿತ್ತು. ಇಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರೈತ ಸಂಘಟನೆಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ನವೆಂಬರ್‌ 23 ರಿಂದ ರೈಲು ಸಂಚಾರ ಆರಂಭವಾಗಲಿದೆ.

ಕಿಸಾನ್ ಯೂನಿಯನ್ಸ್ ಜೊತೆ ನಡೆದ ಸಭೆಯಲ್ಲಿ ಸರ್ಕಾರದ ಮನವಿಗೆ ಒಪ್ಪಿಗೆ ನೀಡಿದ ಸಂಘಟನೆ, ನವೆಂಬರ್ 23 ಸೋಮವಾರದಿಂದ ರೈಲ್ವೆ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆದುಹಾಕುವ ಘೋಷಣೆ ಮಾಡಿದೆ. ರಾಜ್ಯದಲ್ಲಿ ಎರಡು ತಿಂಗಳ ನಂತರ ಸರಕು ಮತ್ತು ಪ್ರಯಾಣಿಕ ರೈಲು ಸೇವೆಗಳೆರಡೂ ಆರಂಭವಾಗಲಿವೆ.

ಆದರೆ, ಕೃಷಿ ಸಂಘಟನೆ ರಾಜ್ಯ ಸರ್ಕಾರಕ್ಕೆ ನೀಡಿರುವುದು ಕೇವಲ 15 ದಿನಗಳು ಮಾತ್ರ. ಮುಂದಿನ 15 ದಿನಗಳಲ್ಲಿ ರೈತರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ವಿಫಲವಾದರೆ ಮತ್ತೆ ಪ್ರತಿಭಟನೆ ಪುನರಾರಂಭಿಸುವ ಬಗ್ಗೆ ಕಿಸಾನ್ ಯೂನಿಯನ್ಸ್ ಅಧ್ಯಕ್ಷ ರಾಜೇವಾಲ್ ಎಚ್ಚರಿಸಿದ್ದಾರೆ.

ಈ ವಿಷಯವನ್ನು ರಾಜಕೀಯಗೊಳಿಸುವ ಬದಲು ಕೇಂದ್ರ ಕೃಷಿ ಮಸೂದೆಗಳ ವಿರುದ್ಧದ ಹೋರಾಟದಲ್ಲಿ ರೈತ ಸಂಘಟನೆಗಳನ್ನು ಬೆಂಬಲಿಸಲು ಪಂಜಾಬ್‌ನ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿರಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಇದನ್ನೂ ಓದಿ: ಕೃಷಿ ಮಸೂದೆಗಳು: ಪಂಜಾಬ್‌ ’ರಾಷ್ಟ್ರ ವಿರೋಧಿ’ ಎಂದವರ ವಿರುದ್ಧ ಅಮರಿಂದರ್ ಸಿಂಗ್‌ ವಾಗ್ದಾಳಿ

ರೈಲು ಸಂಚಾರಕ್ಕೆ ಅನುಮತಿ ನೀಡಿ, ರೈಲ್ ರೋಕೋ ಪ್ರತಿಭಟನೆ ವಾಪಸ್ ಪಡೆದ ರೈತರ ನಿರ್ಧಾರವನ್ನು ಸಿಎಂ ಅಮರಿಂದರ್ ಸಿಂಗ್ ಅವರು ಟ್ವೀಟ್‌ನಲ್ಲಿ ಸ್ವಾಗತಿಸಿದ್ದಾರೆ.

ಮನವಿಯನ್ನು ಅಂಗೀಕರಿಸಿದ್ದಕ್ಕಾಗಿ ಕಿಸಾನ್ ಒಕ್ಕೂಟಗಳಿಗೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ, ರೈತ ಮುಖಂಡರಿಗೆ ಶೀಘ್ರದಲ್ಲೇ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದರು.

“ನಮ್ಮ ದೃಷ್ಟಿಕೋನ ಮತ್ತು ಕೇಂದ್ರದ ಕೃಷಿ ಕಾನೂನುಗಳು ಪಂಜಾಬ್ ಅನ್ನು ಹೇಗೆ ಹಾಳುಮಾಡುತ್ತವೆ ಎಂಬುದನ್ನು ಅರ್ಥಮಾಡಿಸಲು ನಾವು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರೋಣ” ಎಂದು ಕ್ಯಾಪ್ಟನ್ ಅಮರಿಮದರ್ ಸಿಂಗ್ ಹೇಳಿದ್ದಾರೆ. “ರೈತ ಹೋರಾಟದಲ್ಲಿ ರೈತರೊಂದಿಗೆ ನಾವಿದ್ದೇವೆ, ನಮ್ಮ ದೇಹದ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರೈತರ ರಕ್ತ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕಬ್ಬಿನ ಬೆಲೆ ಏರಿಕೆ ಮತ್ತು ಬಾಕಿ ತೆರವು, ಕೃಷಿ ತ್ಯಾಜ್ಯ ಸುಡುವ ಪ್ರಕರಣಗಳಲ್ಲಿ ರೈತರ ಮೇಲೆ ದಾಖಲಾದ ಎಫ್‌ಐಆರ್‌ಗಳನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಇತರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಕ್ಯಾಪ್ಟನ್ ಅಮರಿಂದರ್ ರೈತ ಪ್ರತಿನಿಧಿಗಳಿಗೆ ಭರವಸೆ ನೀಡಿದರು. ಮುಂದಿನ ಒಂದು ವಾರದೊಳಗೆ ಈ ವಿಷಯಗಳ ಕುರಿತು ಅವರೊಂದಿಗೆ ಮಾತುಕತೆ ನಡೆಸಲಿದ್ದು, ಈ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಮಿತಿಯನ್ನೂ ರಚಿಸುವುದಾಗಿ ಭರವಸೆ ನೀಡಿದ್ದಾರೆ.


ಇದನ್ನೂ ಓದಿ: ಕೃಷಿ ಕಾಯ್ದೆಗಳ ಕುರಿತು ಚರ್ಚೆಗೆ ನಿರಾಕರಣೆ: ರಾಷ್ಟ್ರಪತಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...