2017ಕ್ಕೆ ಮೊದಲು ‘ಅಬ್ಬ ಜಾನ್’ ಎನ್ನುವವರಿಗೆ ಮಾತ್ರ ರೇಷನ್ ಸಿಗುತ್ತಿತ್ತು ಎಂಬ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ರವರ ಕೋಮು ಪ್ರಚೋದನಾ ಹೇಳಿಕೆಗೆ ಬಿಜೆಪಿ ಮಿತ್ರ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ರಾಜಕೀಯ ಪಕ್ಷಗಳು ತಮ್ಮ ಪ್ರತಿಕ್ರಿಯೆಯಲ್ಲಿ ಸಂಯಮ ಕಾಪಾಡಿಕೊಳ್ಳಬೇಕು ಎಂದಿರುವ ಜೆಡಿಯು ಅಧ್ಯಕ್ಷ ಲಲನ್ ಸಿಂಗ್, ದೇಶವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಇತರ ಎಲ್ಲಾ ಸಮುದಾಯಕ್ಕೆ ಸೇರಿದ್ದು ಎಂದು ಪ್ರತಿಪಾದಿಸಿದ್ದಾರೆ.
“ವೈವಿಧ್ಯತೆಯಲ್ಲಿ ಏಕತೆ ಎಂಬ ಪದಗಳನ್ನು ನಮ್ಮ ದೇಶದಲ್ಲಿ ಬಳಸಲಾಗುತ್ತಿದೆ. ದೇಶ ಎಲ್ಲರಿಗೂ ಸೇರಿದ್ದು. ದೇಶಕ್ಕೆ ಹಾನಿಯುಂಟುಮಾಡುವ ಯಾವುದೇ ಟೀಕೆಗಳನ್ನು ಮಾಡಬಾರದು” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾದ ಲಲನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಪ್ರದೇಶದ ಖುಷಿ ನಗರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ “2017ಕ್ಕೆ ಮುಂಚೆ ನಿಮಗೆ ರೇಷನ್ ಸಿಗುತ್ತಿತ್ತೆ? ಆಗ ಕೇವಲ ಅಬ್ಬ ಜಾನ್ (ಸಾಮಾನ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಉರ್ದು ಭಾಷೆಯಲ್ಲಿ ತಂದೆಯನ್ನು ಕರೆಯುವ ಪರಿ) ಎಂದು ಕರೆಯುವವರು ಎಲ್ಲಾ ರೇಷನ್ ತಿಂದುಹಾಕುತ್ತಿದ್ದರು. ಆಗ ಶ್ರೀನಗರಕ್ಕೆ ನೀಡಲಾಗುವ ಪಡಿತರವು ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಹೋಗಿತ್ತು” ಎಂದಿದ್ದರು.
ಯೋಗಿ ಆದಿತ್ಯನಾಥ್‌ರವರ ಈ ಹೇಳಿಕೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಅಬ್ಬ ಜಾನ್ ಹೇಳಿಕೆಯ ಮೂಲಕ ಯೋಗಿ ಆದಿತ್ಯನಾಥ್ ಮುಸ್ಲಿಂ ಸಮುದಾಯವನ್ನು ಹೀಯಾಳಿದ್ದಾರೆ ಎಂದು ಆರೋಪಿಸಿ ಬಿಹಾರದ ಮುಜಾಫರ್‌ಪುರ ಜಿಲ್ಲಾ ನ್ಯಾಯಾಲಯದಲ್ಲಿ ತಮನ್ನಾ ಹಶ್ಮಿ ಎಂಬ ಸಾಮಾಜಿಕ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.
ಟ್ವಿಟರ್‌ನಲ್ಲಿಯೂ ಯೋಗಿ ಆದಿತ್ಯನಾಥ್ ಹೇಳಿಕೆ ಖಂಡಿಸಿ “ನಾನು ನನ್ನ ತಂದೆಯನ್ನು ಅಬ್ಬ ಜಾನ್ ಎಂದೇ ಕರೆಯುತ್ತೇನೆ” ಎಂಬ ಅಭಿಯಾನ ಆರಂಭವಾಗಿದೆ. ಎಲ್ಲಾ ಸಮುದಾಯದ ಬಹಳಷ್ಟು ಜನರು ತಮ್ಮ ತಂದೆಯ ಫೋಟೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿ ನಮ್ಮ ತಂದೆಯನ್ನು ಅಬ್ಬ ಜಾನ್ ಎಂದೇ ಕರೆಯುತ್ತೇವೆ ಎಂದು ಬರೆಯುವ ಮೂಲಕ ಯೋಗಿಗೆ ಸೆಡ್ಡು ಹೊಡೆದಿದ್ದಾರೆ. ಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ನಾನು ನನ್ನ ಅಬ್ಬ ಜಾನ್ ರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಲಲನ್ ಸಿಂಗ್ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಭೋಜ್‌ಪುರಿ ಮತ್ತು ಮಾಗಾಹಿ ಮಾತನಾಡುವ ಜನರನ್ನು ಗುರಿಯಾಗಿಸಿಕೊಂಡು ಮಾಡಿದ ಹೇಳಿಕೆಯನ್ನು ಟೀಕಿಸಿದರು. ಪ್ರತಿಯೊಬ್ಬರೂ ದೇಶದ ಯಾವ ಭಾಗದಲ್ಲಿ ಬೇಕಾದರೂ ನೆಲೆಸುವ ಹಕ್ಕನ್ನು ಹೊಂದಿದ್ದಾರೆ ಎಂದರು.
ಇದನ್ನೂ ಓದಿ: ಮುಂಚೆ ‘ಅಬ್ಬ ಜಾನ್’ ಎನ್ನುವವರಿಗೆ ಮಾತ್ರ ರೇಷನ್ ಸಿಗುತ್ತಿತ್ತು: ಯುಪಿ ಸಿಎಂ ಆದಿತ್ಯನಾಥ್ ಹೇಳಿಕೆಗೆ ಭಾರೀ ವಿರೋಧ –…


