ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ-2024 ಇಂದು (ಏಪ್ರಿಲ್ 2) ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಗಳು ಮಸೂದೆಯ ಪರ-ವಿರೋಧ ಚರ್ಚೆಗೆ ಸಜ್ಜಾಗಿದೆ. ಇಡೀ ದೇಶದ ಚಿತ್ತ ಸಂಸತ್ತಿನತ್ತ ನೆಟ್ಟಿದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿರುವ ತೆಲುಗು ದೇಶಂ ಪಕ್ಷ (ಟಿಡಿಪಿ), ವಕ್ಫ್ ಮಸೂದೆಯಲ್ಲಿ ಒಂದು ಪ್ರಮುಖ ತಿದ್ದುಪಡಿ ಕೋರುವ ಸಾಧ್ಯತೆ ಇದೆ.
ಮಂಗಳವಾರ (ಏಪ್ರಿಲ್ 1) ತನ್ನ 16 ಸಂಸದರಿಗೆ ಲೋಕಸಭೆಯಲ್ಲಿ ಹಾಜರಿರಬೇಕು ಮತ್ತು ಸರ್ಕಾರವನ್ನು ಬೆಂಬಲಿಸಬೇಕೆಂದು ವಿಪ್ ಜಾರಿ ಮಾಡಿರುವ ಟಿಡಿಪಿ, ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವ ಮಸೂದೆಯ ವಿವಾದಾತ್ಮಕ ಅಂಶದ ಕುರಿತು ಬದಲಾವಣೆ ಕೋರುವ ನಿರೀಕ್ಷೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ಪ್ರಾತಿನಿಧ್ಯದ ವಿಷಯವನ್ನು ಆಯಾ ರಾಜ್ಯಗಳ ವಿವೇಚನೆಗೆ ಬಿಡಬೇಕೆಂದು ಟಿಡಿಪಿ ಕೇಂದ್ರ ಸರ್ಕಾರತವನ್ನು ಸರ್ವಾನುಮತದಿಂದ ಒತ್ತಾಯಿಸಲಿದೆ ಎಂದು ಅದರ ಮೂಲವೊಂದನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
ವಕ್ಫ್ ಮಂಡಳಿಗಳಲ್ಲಿ ಮಹಿಳೆಯರ ಸೇರ್ಪಡೆ ಸೇರಿದಂತೆ ಮಸೂದೆಯ ಇತರ ಎಲ್ಲಾ ತಿದ್ದುಪಡಿಗಳನ್ನು ಟಿಡಿಪಿ ಬೆಂಬಲಿಸಲಿದೆ. ಮಹಿಳೆಯರ ಪ್ರಾತಿನಿಧ್ಯ ಪ್ರಗತಿಪರ ಬದಲಾವಣೆ ಎಂಬುವುದು ಪಕ್ಷದ ಅಭಿಪ್ರಾಯ ಎಂದು ವರದಿ ವಿವರಿಸಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ ಟಿಡಿಪಿ ನಾಯಕರು ಮಂಗಳವಾರ ಮಧ್ಯರಾತ್ರಿಯವರೆಗೂ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಚರ್ಚೆ ನಡೆಸಿದ್ದಾರೆ. ಮಸೂದೆಯ ನಿಬಂಧನೆಗಳು ಮತ್ತು ಅದರ ಪರಿಣಾಮಗಳ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ್ದಾರೆ. ನಾಯ್ಡು ಅವರು ಮುಸ್ಲಿಂ ಗುಂಪುಗಳೊಂದಿಗೆ ತಮಗೆ ಯಾವುದು ಸ್ವೀಕಾರಾರ್ಹ ಮತ್ತು ಯಾವುದು ಸ್ವೀಕಾರಾರ್ಹವಲ್ಲ ಎಂಬುದನ್ನು ನೋಡಲು ಮಾತುಕತೆ ನಡೆಸಿದ್ದಾರೆ.
ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸುವುದಕ್ಕೆ ಟಿಡಿಪಿಯ ವಿರೋಧವು, ‘ವಕ್ಫ್ ಕಾಯ್ದೆಯಲ್ಲಿನ ಬದಲಾವಣೆಗಳು ಆಂಧ್ರ ಪ್ರದೇಶದ ಮುಸ್ಲಿಂ ಸಮುದಾಯದ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಪಕ್ಷವು ನೀಡಿದ ಭರವಸೆ ಎಂದು ಪರಿಗಣಿಸಬೇಕು. ನಾವು ಬೆಂಬಲಿಸುತ್ತಿರುವುದು ಮುಸ್ಲಿಂ ಸಮುದಾಯಕ್ಕೆ ಪ್ರಯೋಜನಕಾರಿಯಾದ ಪ್ರಗತಿಪರ ಬದಲಾವಣೆಗಳು ಮಾತ್ರ ಟಿಡಿಪಿ ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಕಳೆದ ಮಾರ್ಚ್‌ನಲ್ಲಿ ನಡೆದ ಇಫ್ತಾರ್ ಸಂಗಮದಲ್ಲಿ ಟಿಡಿಪಿ ಮುಸ್ಲಿಂ ಸಮುದಾಯದ ಹಿತದೃಷ್ಟಿಯಿಂದ ಕೆಲಸ ಮಾಡುತ್ತದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದರು. ತಮ್ಮ ಸರ್ಕಾರ ವಕ್ಫ್ ಆಸ್ತಿಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ನಾಯ್ಡು ಹೇಳಿದ್ದರು. ಟಿಡಿಪಿ ಆಡಳಿತದಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ದೊರಕಿದೆ. ಎನ್‌ಡಿಎ ಅಧಿಕಾರದಲ್ಲಿದ್ದರೆ ಮುಸ್ಲಿಮರು ಅಭಿವೃದ್ದಿಯಾಗುತ್ತಾರೆ ಎಂದಿದ್ದರು.
ಆಂಧ್ರದಲ್ಲಿ ಟಿಡಿಪಿಗೆ ಮುಸ್ಲಿಮರು ನಿರ್ಣಾಯಕ ಮತಬ್ಯಾಂಕ್ ಆಗಿದ್ದಾರೆ.
ವಕ್ಫ್ (ತಿದ್ದುಪಡಿ) ಮಸೂದೆಯ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ವಿವಿಧ ವಕ್ಫ್ ಮಂಡಳಿಗಳಿಗೆ ಸಲಹೆ ನೀಡುವ ಕೇಂದ್ರ ವಕ್ಫ್ ಕೌನ್ಸಿಲ್ ಮುಸ್ಲಿಮೇತರ ಸದಸ್ಯರನ್ನು ಹೊಂದಬಹುದು.
ವಕ್ಫ್ ಇಲಾಖೆಯ ಉಸ್ತುವಾರಿ ವಹಿಸುವ ಕೇಂದ್ರ ಸಚಿವರು ಕೌನ್ಸಿಲ್‌ನ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.
ಪ್ರಸ್ತುತ ವಕ್ಫ್ ಕಾಯ್ದೆಯ ಪ್ರಕಾರ ಎಲ್ಲಾ ಕೌನ್ಸಿಲ್ ಸದಸ್ಯರು ಮುಸ್ಲಿಮರಾಗಿರಬೇಕು ಮತ್ತು ಕನಿಷ್ಠ ಇಬ್ಬರು ಮಹಿಳಾ ಸದಸ್ಯರು ಇರಬೇಕು. ಆದರೆ, ತಿದ್ದುಪಡಿ ಮಸೂದೆಯು ಸಂಸದರು, ಮಾಜಿ ನ್ಯಾಯಾಧೀಶರು ಮತ್ತು ಕಾಯ್ದೆಯ ಪ್ರಕಾರ ಪರಿಷತ್ತಿಗೆ ನೇಮಕಗೊಂಡ ಗಣ್ಯ ವ್ಯಕ್ತಿಗಳು ಮುಸ್ಲಿಮರಾಗಿರಬೇಕಾಗಿಲ್ಲ ಎಂದು ಹೇಳುತ್ತದೆ.
ತಿದ್ದುಪಡಿ ಮಸೂದೆಯಲ್ಲಿ ಸೂಚಿಸಲಾದ ಇತರ ಬದಲಾವಣೆಗಳಲ್ಲಿ ವಕ್ಫ್ ಕಾಯ್ದೆಯ ಹೆಸರನ್ನು “ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ-1995″ ಎಂದು ಮರುನಾಮಕರಣ ಮಾಡುವುದು ಸೇರಿದೆ.
ವಕ್ಫ್ ಮಂಡಳಿಗಳು, ಆಸ್ತಿಗಳ ನಿರ್ವಹಣೆ ಮತ್ತು ದಕ್ಷತೆಯನ್ನು ಸುಧಾರಿಸುವ, ಪರಿಣಾಮಕಾರಿ ಆಡಳಿತದ ಜೊತೆಗೆ ಸಬಲೀಕರಣ ಮತ್ತು ಅಭಿವೃದ್ಧಿಯನ್ನು ಒತ್ತಿಹೇಳುವ ವಿಶಾಲ ಉದ್ದೇಶ ಇದರ ಹಿಂದೆ ಇದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಇದಲ್ಲದೆ, ಯಾವುದಾದರು ಆಸ್ತಿಯನ್ನು ‘ವಕ್ಫ್’ ಆಸ್ತಿ ಎಂದು ಪ್ರತಿಪಾದಿಸಿದರೆ, ಜಿಲ್ಲಾಧಿಕಾರಿ ಅದರ ಮಾಲೀಕತ್ವವನ್ನು ನಿರ್ಧರಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಜಿಲ್ಲಾಧಿಕಾರಿ ಒಂದು ವೇಳೆ ವಕ್ಫ್ ಎಂದು ಹೇಳಲಾದ ಆಸ್ತಿಯನ್ನು ಸರ್ಕಾರಿ ಆಸ್ತಿ ಎಂದು ಹೇಳಿದರೆ, ಅದನ್ನು ಸರ್ಕಾರ ಕಂದಾಯ ಇಲಾಖೆಯ ಅಡಿಯಲ್ಲಿ ನೋಂದಾಯಿಸುತ್ತದೆ” ಎಂದು ತಿದ್ದುಪಡಿ ಮಸೂದೆ ಹೇಳುತ್ತದೆ. ಮಾಲೀಕತ್ವ ನಿರ್ಣಯದ ಪ್ರಕ್ರಿಯೆ ಪ್ರಸ್ತುತ ವಕ್ಫ್ ಟ್ರಿಬ್ಯೂನಲ್‌ನಲ್ಲಿ ನಡೆಯುತ್ತಿದೆ.
ಲೋಕಸಭೆಯಲ್ಲಿ ವಕ್ಫ್ ಮಸೂದೆ ಇಂದು ಮಂಡನೆ | ತೀವ್ರ ವಿರೋಧಕ್ಕೆ ಇಂಡಿಯಾ ಮೈತ್ರಿಕೂಟ ಸಿದ್ದತೆ


