ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಗಾಗಿ ಬಿಜೆಪಿ ಮತ್ತು ಶಿವಸೇನೆಯ ನಡುವಿನ ಹಗ್ಗ ಜಗ್ಗಾಟ ಮುಂದುವರೆದಿದೆ. ಈ ನಡುವೆ ಮೊಘಲರು ಮಾಡಿದಂತೆ ಬಿಜೆಪಿ ನಮ್ಮ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಆರೋಪಿಸಿದೆ. ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಯ ಕುರಿತು ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಿಜೆಪಿಯು ರಾಷ್ಟ್ರಪತಿ ಆಡಳಿತಕ್ಕೆ ಒಲವು ವ್ಯಕ್ತಪಡಿಸಿದ್ದಕ್ಕೆ ಶಿವಸೇನೆ ಈ ರೀತಿಯಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರುವುದು ಉತ್ತಮ ಎಂದು ರಾಜ್ಯ ಹಣಕಾಸು ಸಚಿವ ಮತ್ತು ಬಿಜೆಪಿ ನಾಯಕ ಸುಧೀರ್ ಮುಂಗಾಟಿವಾರ್ ಹೇಳುತ್ತಿದ್ದಂತೆಯೇ ಶಿವಸೇನೆಯು ಬಿಜೆಪಿಯ ಮೇಲೆ ಹರಿಹಾಯ್ದಿದೆ. ಮೊಘಲರ ರೀತಿಯಲ್ಲಿ ಬಿಜೆಪಿ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಪತ್ರಿಕೆಯಾದ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿದೆ.
ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಬಂದು ಎಂಟು ದಿನಗಳು ಕಳೆದರೂ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗದ ಹಿನ್ನೆಲೆಯಲ್ಲಿ ನವೆಂಬರ್ 7 ರೊಳಗೆ ರಾಜ್ಯದಲ್ಲಿ ಹೊಸ ಸರ್ಕಾರ ಜಾರಿಗೆ ಬರದಿದ್ದರೆ ಮಹಾರಾಷ್ಟ್ರ ರಾಷ್ಟ್ರಪತಿ ಆಡಳಿತಕ್ಕೆ ಹೋಗಬಹುದು ಎಂದು ಬಿಜೆಪಿಯ ಸುಧೀರ್ ಮುಂಗಾಟಿವಾರ್ ಶುಕ್ರವಾರ ಘೋಷಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆಯು, ಸುಧೀರ್ ಮುಂಗಂತಿವಾರ್ ಅವರ “ಬೆದರಿಕೆಯ ಹೇಳಿಕೆ” ಅಸಂವಿಧಾನಿಕ ಮತ್ತು “ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ” ಎಂದಿದೆ.
“ಇದು ಮೊಘಲ್ ಅವರ ಆಜ್ಞೆಯಂತಿದೆ. ಕಾನೂನು ಮತ್ತು ಸಂವಿಧಾನವು ಯಾರ ಗುಲಾಮರಲ್ಲ. ಮಹಾರಾಷ್ಟ್ರ ರಾಜಕಾರಣದ ಪ್ರಸ್ತುತ ಸ್ಥಿತಿಗೆ ನಾವು ಜವಾಬ್ದಾರರಲ್ಲ ಎಂಬುದು ಮಹಾರಾಷ್ಟ್ರದ ಜನರಿಗೆ ಇದು ತಿಳಿದಿದೆ. ಕಾನೂನು ಮತ್ತು ಸಂವಿಧಾನ ಎಂದರೇನು ಎಂದು ನಮಗೆ ತಿಳಿದಿದೆ” ಎಂದು ಶಿವಸೇನೆ ಹೇಳಿದೆ.
ಪ್ರಸ್ತುತ ಮಹಾರಾಷ್ಟ್ರ ಸರ್ಕಾರದ ಅವಧಿ ನವೆಂಬರ್ 8 ಕ್ಕೆ ಕೊನೆಗೊಳ್ಳುತ್ತಿದ್ದಂತೆ, ಬಿಜೆಪಿ ಮತ್ತು ಶಿವಸೇನೆ ನಡುವಿನ ಅಧಿಕಾರ ಹಂಚಿಕೆಯಲ್ಲಿ ಗೊಂದಲ ಮುಂದುವರೆದಿದೆ. ಮಹಾರಾಷ್ಟ್ರದ ಜನರು ಶಿವಸೇನೆಯವರನ್ನು ಸಿಎಂ ಆಗಿ ಬಯಸುತ್ತಾರೆ ಎಂದು ಶಿವಸೇನೆ ಹೇಳಿದರೆ, ಮಹಾರಾಷ್ಟ್ರದ ಮುಖ್ಯಮಂತ್ರಿ ತಮ್ಮ ಪಕ್ಷದವರಾಗಿರುತ್ತಾರೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.


