Homeಮುಖಪುಟಪೆರಿಯಾರ್ ನೆಲದಲ್ಲಿ ನಡೆಯದ ಬಿಜೆಪಿ ಪ್ರಯೋಗ; ಮಾಜಿ ಐಎಎಸ್ ಸಸಿಕಾಂತ್ ಸೆಂಥಿಲ್ ಸಂದರ್ಶನ

ಪೆರಿಯಾರ್ ನೆಲದಲ್ಲಿ ನಡೆಯದ ಬಿಜೆಪಿ ಪ್ರಯೋಗ; ಮಾಜಿ ಐಎಎಸ್ ಸಸಿಕಾಂತ್ ಸೆಂಥಿಲ್ ಸಂದರ್ಶನ

ಈ ಚುನಾವಣೆಯಲ್ಲಿ ಎಐಎಡಿಎಂಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಆಡಳಿತದ ಮೂಲಕ ಒಳ್ಳೆಯ ಕೆಲಸ ಮಾಡಿದೆ ಎಂಬ ವರ್ಚಸ್ಸು ಪಡೆದುಕೊಂಡಿದ್ದರೂ ಬಿಜೆಪಿಯ ಸಖ್ಯದಿಂದ ವರ್ಚಸ್ಸಿಗೆ ಪೆಟ್ಟು ಬೀಳಬಹುದು.

- Advertisement -
- Advertisement -

ಸಸಿಕಾಂತ್ ಸೆಂಥಿಲ್ ತಮಿಳುನಾಡು ಮೂಲದವರಾದರೂ ಕರ್ನಾಟಕದ ನಂಟೇ ಹೆಚ್ಚು. ರಾಯಚೂರು ಮತ್ತು ಮಂಗಳೂರಿನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ದೇಶದಲ್ಲಿ ಒಡಕಿನ ಮತ್ತು ಮತೀಯ ಶಕ್ತಿಗಳ ವಿರುದ್ಧ ಸೆಟೆದುನಿಂತು ತಮ್ಮ ನೌಕರಿಗೆ ರಾಜೀನಾಮೆ ನೀಡಿ ದೇಶದ ಗಮನ ಸೆಳೆದರು. ಈಗ ತಮಿಳುನಾಡಿನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಸೆಂಥಿಲ್, ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ. ತಮಿಳುನಾಡಿನ ರಾಜಕೀಯದ ಆಗುಹೋಗುಗಳನ್ನು ನಾನುಗೌರಿ.ಕಾಂ ಜೊತೆಗೆ ಹಂಚಿಕೊಂಡಿದ್ದಾರೆ.

ಪ್ರ:ತಮಿಳು ಐಡೆಂಟಿಟಿ ಪ್ರಶ್ನೆಯಾಗಲೀ, ಹಿಂದಿ ಅಥವಾ ಹಿಂದುತ್ವ ಹೇರಿಕೆಯಾಗಲೀ, ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಕಾಯುವ ಪ್ರಶ್ನೆಯಾಗಲೀ ತಮಿಳುನಾಡು ಎಂದಿಗೂ ಉಳಿದ ರಾಜ್ಯಗಳಿಗೆ ಮಾದರಿಯಾಗಿತ್ತು. ಮೊದಲಿನಿಂದಲೂ, ವೈದಿಕ ವಿರೋಧಿ ರಾಜಕಾರಣಕ್ಕೆ ಹೆಸರಾಗಿದ್ದ ತಮಿಳುನಾಡಿನಲ್ಲಿ ಇಂದು ಹಿಂದುತ್ವದ ಪ್ರತಿಪಾದಕರು ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನದಲ್ಲಿ ಅವರು ಎಷ್ಟು ಸಫಲರಾಗಲಿದ್ದಾರೆ? ಸಫಲರಾಗಲು ಸಾಧ್ಯವಾಗುವುದಾದರೆ ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ಕಾರಣವಾದದ್ದು ಏನು? ತಮಿಳುನಾಡು ಜನತೆ ಮತ್ತು ನೀವು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಇದಕ್ಕೆ ಯಾವ ರೀತಿಯಲ್ಲಿ ಪ್ರತಿರೋಧ ತೋರಿಸುತ್ತಿದ್ದಾರೆ?

ಉ: ತಮಿಳುನಾಡಿನಲ್ಲಿ ವೈಚಾರಿಕತೆಗಾಗಿ ಒಂದು ಪ್ರಬಲವಾದ ಸಾಮಾಜಿಕ ಚಳವಳಿ ನಡೆದಿತ್ತು. ಪೆರಿಯಾರ್ ಅದನ್ನು ಆರಂಭಿಸಿದ್ದರು. ಅದು ಬ್ರಾಹ್ಮಣ್ಯ ವಿರೋಧಿಯಾಗಿದ್ದು ಹೌದು, ಆದರೆ ಅದು ವೈಚಾರಿಕತೆಯ ಚಳವಳಿಯಾಗಿತ್ತು. ಪೆರಿಯಾರ್ ಈ ಚಳಿವಳಿಯ ಮೂಲಕ ಮೂರ್ತಿ ಪೂಜೆ, ವಿದ್ಯಾಭ್ಯಾಸದಲ್ಲಿ ತಾರತಮ್ಯ, ಮಹಿಳೆಯರನ್ನು ಮನೆಗೆ ಸೀಮಿತಗೊಳಿಸುವ ಧೋರಣೆ… ಇವೆಲ್ಲವನ್ನೂ ಪ್ರಶ್ನಿಸಿದರು. ಕಂದಾಚಾರಗಳು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂಬ ಕೋಪ ಅವರಲ್ಲಿತ್ತು. ಹಾಗಾಗಿ ಪೆರಿಯಾರ್ ವೈಚಾರಿಕತೆಯ ಚಳವಳಿಯಾಗಿ ಆರಂಭಿಸಿದರು. ತಮಿಳಿನಲ್ಲಿ ಇದನ್ನು ಪಗತ್‌ಅರಿವು ಚಳವಳಿ ಎನ್ನುತ್ತಾರೆ. ಎಲ್ಲವನ್ನೂ ಪರೀಕ್ಷಿಸಿ ನೋಡುವ ಸಾಮರ್ಥ್ಯವನ್ನು ಹೊಂದುವುದಕ್ಕೆ ಇದು ಪ್ರೇರೇಪಿಸಿತು.

ಈ ಹಿನ್ನೆಲೆಯಲ್ಲಿ ನೋಡುವಾಗ ತಮಿಳುನಾಡಿನಲ್ಲಿ ನಡೆದ ಎಲ್ಲ ದ್ರಾವಿಡ ಚಳವಳಿಗಳು ಅಂತಹ ವೈಚಾರಿಕ ಚಿಂತನೆಯನ್ನು ಬೆಳೆಸಿವೆ ಎನ್ನಬಹುದು. ಹಾಗೆಂದ ಮಾತ್ರಕ್ಕೆ ನಾಸ್ತಿಕತೆ ಇದೆ ಎಂದಲ್ಲ. ದೇವಸ್ಥಾನಕ್ಕೆ ಹೋಗುವ ಹಾಗೂ ಪೆರಿಯಾರ್ ಚಿಂತನೆಗಳನ್ನು ಒಪ್ಪಿಕೊಳ್ಳುವ ಜನರೂ ಇದ್ದಾರೆ. ಪೆರಿಯಾರ್ ನಾಸ್ತಿಕರಾಗಿದ್ದರು. ಹಾಗೆಂದು ಅವರ ಚಿಂತನೆಗಳನ್ನು ಯಾರು ತಿರಸ್ಕರಿಸುತ್ತಿರಲಿಲ್ಲ. ಸ್ವತಃ ಪೆರಿಯಾರ್ ಹೇಳುತ್ತಿದ್ದುದೇ, ’ನಾನು ಹೇಳಬೇಕೆಂದು ಅನ್ನಿಸಿದ್ದನ್ನು ಹೇಳುತ್ತೇನೆ. ನಿಮಗೆ ಒಪ್ಪಿತವಾಗಿದ್ದನ್ನು ಸ್ವೀಕರಿಸಿ, ಬೇಡದ್ದನ್ನು ಬಿಟ್ಟುಬಿಡಿ’ ಎಂದು.

ಪೆರಿಯಾರ್ ಅವರು, ಆರೋಗ್ಯ, ಶಿಕ್ಷಣ, ಸಾಮಾಜಿಕ ಸಮಾನತೆಗಾಗಿ ಮತ್ತು ಜಾತೀಯತೆ ವಿರುದ್ಧದ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಆದರೆ ಜನರು ತಮ್ಮ ನಂಬಿಕೆಗಳನ್ನು ಉಳಿಸಿಕೊಂಡು, ಈ ವೈಚಾರಿಕತೆಯನ್ನು ಬೆಳೆಸಿಕೊಂಡರು. ಹಾಗಾಗಿಯೇ ಇಲ್ಲಿ ಮಠಗಳನ್ನು ಕಟ್ಟಿಕೊಳ್ಳುವುದನ್ನು ಜನ ಒಪ್ಪಿಕೊಳ್ಳುವುದಿಲ್ಲ. ಕರ್ನಾಟಕದಲ್ಲಿರುವಷ್ಟು ಮಠಗಳು ಇಲ್ಲಿಲ್ಲ. ಏಕೆಂದರೆ ಇಲ್ಲಿನ ಜನರಿಗೆ ಇಂತಹ ಸಾಮ್ರಾಜ್ಯ ನಿರ್ಮಾಣದ ಧೋರಣೆ ಇಷ್ಟವಾಗುವುದಿಲ್ಲ. ಭಕ್ತಿಗಾಗಿ ದೇವಸ್ಥಾನಗಳಿಗೆ ಹೋಗುತ್ತಾರೆ, ಬರುತ್ತಾರೆ. ಅವರ ಮುಖ್ಯವಾದ ಗಮನ ಶಿಕ್ಷಣದ ಕಡೆಗೆ.

ಇಲ್ಲಿ ಧಾರ್ಮಿಕತೆಯಲ್ಲಿ ಭಿನ್ನತೆ ಇಲ್ಲ. ಬಹುತ್ವವಿದ್ದರೂ ಪರಸ್ಪರ ಗೌರವ-ಸೌಹಾರ್ದ ಹೆಚ್ಚಿರುವ ನಾಡು ಇದು. ತಮಿಳುನಾಡಿನಲ್ಲಿ ಮುಸ್ಲಿಮರೂ ಸುಲಲಿತವಾಗಿ ತಮಿಳು ಮಾತನಾಡುತ್ತಾರೆ. ಹಾಗಾಗಿ ಅವರು ಅನ್ಯಧರ್ಮೀಯ ಎಂದು ತಮಿಳಿರಿಗೆ ಅನ್ನಿಸುವುದಿಲ್ಲ. ಜೊತೆಗೆ ಅವರನ್ನು ಒಳಗೊಂಡಿದ್ದಾರೆ ಕೂಡ. ಆದರೆ ಇಲ್ಲಿ ಜಾತಿ ಸಮಸ್ಯೆ ಇದೆ. ಮೊದಲಿನ ಬ್ರಾಹ್ಮಣರ ಪ್ರಾಬಲ್ಯದ ಜೊತೆಗೆ ಈಗ ಹಿಂದುಳಿದ ವರ್ಗಗಳ ಪ್ರಾಬಲ್ಯ ಹೆಚ್ಚಿದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನಲ್ಲಿ ಬಿಜೆಪಿಯ ಪ್ರಯತ್ನಗಳನ್ನು ನೋಡಿದರೆ ನನಗೆ ಅನ್ನಿಸುವುದಿಷ್ಟು; ಮೋದಿ, ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಬೇಕೆಂದು ಎಣಿಸಿದ್ದಾರೆ. ಇಡೀ ಸಮಾಜವನ್ನು ಹಳೆಯ ಪದ್ಧತಿಗೆ ರೂಪಾಂತರಿಸಬೇಕೆಂದಿದ್ದಾರೆ. ಮನುವಾದವನ್ನು ತರಬೇಕೆಂದಿದ್ದಾರೆ. ಇದೆಲ್ಲವೂ ಜಾರಿಗೆ ತರಲು ಅವರಿಗೆ ಅಧಿಕಾರ ಬೇಕು. ತಮಿಳುನಾಡು ಈ ಎಲ್ಲಕ್ಕೂ ಕಡೆಯ ಗಡಿಯಾಗಿ ಅಡ್ಡಲಾಗಿದೆ. ನೋಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಮೋದಿಗೆ ಒಂದೇ ಒಂದು ಸ್ಥಾನ ಗೆಲ್ಲಲೂ ಆಗಿಲ್ಲ. ಏಕೆ? ರಾಜ್ಯದಲ್ಲಿ ಮೋದಿ ವಿರೋಧಿ ಧೋರಣೆ ಇದೆ. ಆತ ದ್ವೇಷವನ್ನು ಹರಡುತ್ತಿದ್ದಾನೆ ಎಂಬುದು ತಮಿಳುನಾಡಿನ ಜನರಿಗೆ ಗೊತ್ತು. ಅಂತಹ ದ್ವೇಷದ ಕಾಲಘಟ್ಟವನ್ನು ದಾಟಿ ಬಂದಿರುವವರು ತಮಿಳಿಗರು. ಅವರಿಗೆ ಮೋದಿ ನಾಟಕ ಮಾಡುತ್ತಿದ್ದಾರೆಂದು ಗೊತ್ತು. ಜನರ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಆತನನ್ನು ನಾಯಕ ಎಂದು ಸ್ವೀಕರಿಸುವುದೇ ಇಲ್ಲ. ರಾಹುಲ್ ಗಾಂಧಿಯನ್ನು ನಾಯಕನೆಂದು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಅವರಲ್ಲಿ ಒಂದು ಪ್ರಾಮಾಣಿಕತೆಯನ್ನು ಗುರುತಿಸುತ್ತಾರೆ. ಅವರು ಇಲ್ಲಿ ಯಾವುದೇ ದೊಡ್ಡ ಸಾಧನೆ ಮಾಡಿಲ್ಲವಾದರೂ ಜನರಲ್ಲಿ ಪ್ರೀತಿ ಇದೆ. ಇಂತಹ ವರ್ಚಸ್ಸು ಮೋದಿಯಲ್ಲಿ ಕಾಣುವುದಿಲ್ಲ.

ಮೋದಿಯ ಬಗ್ಗೆ ಇಂತಹ ಪ್ರಬಲ ನಿಲುವು ಇರುವ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯದಲ್ಲಿ ಕಾಲೂರುವುದಕ್ಕೆ ಏನು ಮಾಡಬೇಕೆಂದು ಹವಣಿಸುತ್ತಿದೆ. ಕೋಮು ಸಾಮರಸ್ಯ ಕದಡುವ ಪ್ರಯತ್ನ ಇಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗೊತ್ತು. ಇಲ್ಲಿ ರಾಮನ ಹೆಸರು ಕೆಲಸ ಮಾಡುವುದಿಲ್ಲ. ಎಲ್ಲ ಧರ್ಮೀಯರು ತಮಿಳು ಮಾತನಾಡುವುದರಿಂದ ಧರ್ಮಗಳ ನಡುವೆ ತಕರಾರು ಇಲ್ಲ. ತಮಿಳುನಾಡಿನ ದೇವರ ಕಲ್ಪನೆಯೇ ಭಿನ್ನ. ತಮಿಳುನಾಡಿನಲ್ಲಿ ವಿಷ್ಣುವಿಗಿಂತ ಮೊದಲೇ ದೇವರುಗಳಿದ್ದರು. ಮುರುಗ ಇಲ್ಲಿನ ಬುಡಕಟ್ಟು ದೇವರು. ತಮಿಳರು ಪೂಜಿಸುವ ಮೊದಲ ದೇವರು ಮುರುಗ.

ಪ್ರ: ಎಷ್ಟೇ ಅಡೆತಡೆಗಳು ಇದ್ದರೂ ಸಂಘಪರಿವಾರದವರು ಮತ್ತು ಬಿಜೆಪಿ ಪಕ್ಷ ಒಂದೊಂದು ರಾಜ್ಯದಲ್ಲಿ ಒಂದೊಂದು ವಿವಾದಾತ್ಮಕ ಜಾಗಗಳನ್ನು ಹುಡುಕಿ, ಅಲ್ಲಿ ಕೋಮು ಪ್ರಚೋದನೆಯನ್ನು ಮಾಡಿ, ಜನರ ನಡುವೆ ಒಡಕು ಮೂಡಿಸಿ ತಮ್ಮ ನೆಲೆ ಕಂಡುಕೊಳ್ಳುವುದು ಅವರ ಯಶಸ್ವಿ ತಂತ್ರಗಳಲ್ಲಿ ಒಂದು. ಇದಕ್ಕೆ ತಮಿಳುನಾಡಿನ ಯಾವ ಪ್ರದೇಶವೂ ಆಸ್ಪದ ಕೊಟ್ಟಿಲ್ಲವೇ?

ಉ: ಬಿಜೆಪಿಯ ರಾಮನ ಪ್ರಭಾವ ಇಲ್ಲಿ ನಡೆಯುವುದಿಲ್ಲ. ಬಿಜೆಪಿ ಯಾವುದೇ ಒಂದು ರಾಜ್ಯವನ್ನು ಪ್ರವೇಶಿಸಿದಾಗ, ಅಲ್ಲೊಂದು ದೀರ್ಘಕಾಲದ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುತ್ತದೆ. ಉದಾಹರಣೆಗೆ ಪಶ್ಚಿಮ ಬಂಗಾಲವನ್ನೇ ನೋಡಿ. 2014ರಲ್ಲೇ ಮಿಷನ್ 2022 ಹೆಸರಿನ ಅಭಿಯಾನ ಆರಂಭಿಸಿದರು. ಬಂಗಾಳದಲ್ಲಿ ಇವರ ತಂತ್ರಗಳು ಸುಲಭವಾಗಿದ್ದವು, ಯಾಕೆಂದರೆ ಅಲ್ಲಿ ಹಿಂದು-ಮುಸ್ಲಿಮ್ ವಿವಾದ ಇದೆ.

ತಮಿಳುನಾಡಿನಲ್ಲಿ ರಾಮನ ಜಪ ಕೆಲಸ ಮಾಡುವುದಿಲ್ಲ ಎಂದು ಬಗೆದು, ಸ್ಥಳೀಯ ದೇವರಾದ ಮುರುಗನ ಮೊರೆಹೋಗಿದ್ದಾರೆ. ತ್ರಿಶೂಲ ಹಿಂದುಗಳ ಸಂಕೇತ. ಆದರೆ ಇಲ್ಲಿ ಮುರುಗನ ಆಯುಧವಾದ ವೇಲ್‌ಅನ್ನು ಸಂಕೇತವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ವಿಚಾರವಾದಿಗಳು ಶಾಸ್ತ್ರೀಯ ಪಠ್ಯವನ್ನು ವ್ಯಾಖ್ಯಾನಿಸುತ್ತಾರೆ. ಮುರುಗನಿಗೆ ಸಂಬಂಧಿಸಿದ ’ಕಂದಶಕ್ತಿ ಕವಚಂ’ ಎಂಬ ಪಠ್ಯವಿದೆ. ಇದೊಂದು ಕಾವ್ಯ. ಇದರಲ್ಲಿ ಅಶ್ಲೀಲ ಎಂದು ವ್ಯಾಖ್ಯಾನಿಸುವ ಅಂಶಗಳಿವೆ ಎಂಬ ಅಭಿಪ್ರಾಯವಿದೆ. ’ಕರುಪ್ಪರ್ ಕೂಟಂ’ ಎಂಬ ತಮಿಳಿನ ಒಂದು ಜನಪ್ರಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಈ ಅವಕಾಶವನ್ನು ಬಳಸಿಕೊಂಡ ಬಿಜೆಪಿ ಮುರುಗನ ವಿರುದ್ಧ ವಿಚಾರವಾದಿಗಳು ಎಂದು ದೊಡ್ಡ ಪ್ರತಿಭಟನೆಯನ್ನೇ ಹುಟ್ಟುಹಾಕಿದರು. ಸರ್ಕಾರ ಕೂಡ ಅವರ ಹಿಡಿತದಲ್ಲಿ ಇದ್ದಿದ್ದರಿಂದ ಈ ಚಾನೆಲ್‌ನವರನ್ನು ಬಂಧಿಸಿದರು. ಇದರ ಬೆನ್ನಲ್ಲೇ ಪೆರಿಯಾರ್ ವಿಚಾರವಾದಿಗಳು ಮುರುಗನ ಮೇಲೆ ದಾಳಿ ನಡೆಸಿದ್ದಾರೆ ಎಂಬ ಮಾಧ್ಯಮಗಳಲ್ಲಿ ಸುದ್ದಿಯನ್ನು ಬಿತ್ತಿದರು.

ಮೇಲಿನ ಬೆಳವಣಿಗೆಯಲ್ಲಿ ಒಂದು ಅಂಶವನ್ನು ಗಮನಿಸಬೇಕು. ಅದೇನೆಂದರೆ ತಮಿಳುನಾಡಿನಲ್ಲಿ ಮುಸ್ಲಿಮ್ ವಿರೋಧಿ ನಿಲುವನ್ನು ರೂಪಿಸಲು ಸಾಧ್ಯವಾಗದೇ ಹೋಗಿದ್ದರಿಂದ ಬಿಜೆಪಿ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂಬ ತಂತ್ರವನ್ನು ಬಳಸಲಾರಂಭಿಸಿದರು. ಹಿಂದು-ಮುಸ್ಲಿಮ್ ವಿಷಯದಲ್ಲಿ ತಮಿಳುನಾಡು ಕರ್ನಾಟಕಕ್ಕೆ ಹೋಲಿಸಿದರೆ ಅಷ್ಟು ಸೂಕ್ಷ್ಮ ರಾಜ್ಯವಲ್ಲ. ಗಲಭೆಗಳನ್ನು ಉಂಟುಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹಾಗಾಗಿ ’ವೇಲ್ ಯಾತ್ರೆ’ಗೆ ಪ್ರಚೋದಿಸಿದರು. ’ವೇಲ್ ಯಾತ್ರೆ’ ಸಾಗುವ ಮಾರ್ಗದಲ್ಲಿ ಗಲಭೆ ಹುಟ್ಟುಹಾಕಬಹುದು ಎಂಬ ಯೋಚನೆ ಅವರದ್ದು. ಬಿಜೆಪಿಯ ಈ ತಂತ್ರ ಕೂಡ ಯಶ ಕಾಣಲಿಲ್ಲ. ಆದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಹೆಚ್ಚು ಸುದ್ದಿಯಾಗುವಂತೆ ನೋಡಿಕೊಂಡರು ಅಷ್ಟೆ.

ಪ್ರ: ಕೋಮು ವಿಚಾರದಲ್ಲಿ ಈ ತಂತ್ರಗಳು ಕಷ್ಟವಾದರೂ, ಮತಗಳನ್ನು ಸೆಳೆಯುವ ಬೇರೆಯ ಎಂಜಿನಿಯರಿಂಗ್‌ನಲ್ಲಿ ಅವರು ನಿಷ್ಣಾತರು. ಈ ವಿಚಾರದ ಬಗ್ಗೆ..

ಉ: ಬಿಜೆಪಿ ಪಕ್ಷಕ್ಕೆ ನೆಲೆಯಿಲ್ಲದ ರಾಜ್ಯಗಳಲ್ಲಿ ಅವರ ದೀರ್ಘಕಾಲದ ಯೋಜನೆಯ ಉದ್ದೇಶವೆಂದರೆ, ರಾಜ್ಯ ರಾಜಕಾರಣದಲ್ಲಿ ಎರಡನೆಯ ಬಹುಮುಖ್ಯ ಪಕ್ಷವಾಗಿ ನಿಲ್ಲಬೇಕೆಂಬುದು. ಅದೇ ರೀತಿಯ ಪ್ರಯತ್ನವನ್ನು ತಮಿಳುನಾಡಿನಲ್ಲಿ ಮಾಡುತ್ತಿದ್ದಾರೆ. ಇಲ್ಲಿ ಎರಡು ದ್ರಾವಿಡ ಪಕ್ಷಗಳು ಪ್ರಬಲವಾಗಿವೆ. ಅದರಲ್ಲಿ ಒಂದು ಪಕ್ಷವನ್ನು ನಾಶ ಮಾಡಬೇಕೆಂದಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ನಿಯಂತ್ರಣವಿರುತ್ತದೆ. ಎಐಎಡಿಎಂಕೆಯನ್ನು, ದಾಳಿ ಮತ್ತು ಬೆದರಿಕೆಗಳ ಮೂಲಕ, ಕುದುರೆ ವ್ಯಾಪಾರದ ಮೂಲಕ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸಿತು.

14 ಶಾಸಕರನ್ನು ಹಣ ಕೊಟ್ಟು ಖರೀದಿಸಲಾಯಿತು. ಅವರು ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದರು. ಆದರೆ ಇತ್ತೀಚೆಗೆ ಅವರು ಪಕ್ಷಕ್ಕೆ ವಾಪಸಾಗಿದ್ದಾರೆ. ಆದರೆ ಆ ಹದಿನಾಲ್ಕು ಶಾಸಕರು ಪಕ್ಷ ತೊರೆದು ಹೋಗಿದ್ದು ಪಕ್ಷಾಂತರ ಪ್ರಕರಣವಾಯಿತು. ಆದರೆ ಬಿಜೆಪಿ ಹಸ್ತಕ್ಷೇಪದಿಂದಾಗಿ ಆ ಶಾಸಕರ ವಿರುದ್ಧ ಯಾವುದೇ ವಿಚಾರಣೆ ನಡೆಯಲಿಲ್ಲ.

ಕಾಂಗ್ರೆಸ್ ಸೇರ್ಪಡೆಯಾಗಲಿರುವ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್
PC: The News Minute

ಒಂದು ಸರ್ಕಾರ ನಿಯಂತ್ರಣದಲ್ಲಿದ್ದರೆ, ಒಂದು ರಾಜಕೀಯ ಕಥನವನ್ನು ನಿರೂಪಿಸಲು ಸಾಧ್ಯವಾಗುತ್ತದೆ. ಜಯಲಲಿತಾ ಅಧಿಕಾರದಲ್ಲಿದ್ದಾಗ, ಆಕೆ ಬ್ರಾಹ್ಮಣ ಸಮುದಾಯದವರಾಗಿದ್ದರೂ ಬಹುಸಂಖ್ಯಾತರ-ಬಲಿಷ್ಠರ ಧಾರ್ಮಿಕತೆಗೆ ಅಥವಾ ಆರ್‌ಎಸ್‌ಎಸ್‌ನವರಿಗೆ ಮಣೆ ಹಾಕಿರಲಿಲ್ಲ. ಕೊಲೆ ಕೇಸಿನಲ್ಲಿ ಶಂಕರಾಚಾರ್ಯರನ್ನೇ ಜೈಲಿಗೆ ಕಳಿಸಿದ್ದರು. ಈಗ ಎಐಎಡಿಎಂಕೆ ಬದಲಾಗಿಹೋಗಿದೆ ಮತ್ತು ಬಿಜೆಪಿ ನಿಯಂತ್ರಣಕ್ಕೆ ಸಿಕ್ಕಿದೆ. ಕೊನೆಗೆ ಅದೇ ನಶಿಸಿ ಬಿಜೆಪಿಗೆ ದಾರಿಮಾಡಿಕೊಡಲಿದೆ ಎಂಬುದು ಅವರಿಗೆ ಅರ್ಥ ಆಗಬೇಕಷ್ಟೇ.

ಪ್ರ: ತಮಿಳುನಾಡಿನ ಮಾಧ್ಯಮಗಳು ಈ ಎಲ್ಲಾ ವಿದ್ಯಮಾನಗಳಿಗೆ ಹೇಗೆ ಸ್ಪಂದಿಸುತ್ತಿವೆ? ಹಾಗೆಯೇ ಈಗ ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಅಧಿಕಾರಿ ಅಣ್ಣಾಮಲೈ ಮತ್ತು ಹೊಸ ಪಕ್ಷ ಸ್ಥಾಪಿಸಿರುವ ನಟ ರಜನಿಕಾಂತ ಬಹಳ ಸುದ್ದಿಯಲ್ಲಿ ಇದ್ದಾರೆ. ರಜನಿಕಾಂತ್ ಅವರ ಪಾತ್ರ ಏನಾಗಬಲ್ಲದು?

ಉ: ಹೌದು ಈಗ ಅಣ್ಣಾಮಲೈ ಸುದ್ದಿಯಲ್ಲಿದ್ದಾರೆ. ಆದರೆ ಈ ಪ್ರಕ್ರಿಯೆ ಮೊದಲೇ ಆರಂಭವಾಗಿದೆ. ಉದಾಹರಣೆಗೆ, ಚಕ್ರವರ್ತಿ ಸೂಲಿಬೆಲೆ ತರಹದಲ್ಲೇ ಮಾರಿದಾಸ್ ಎಂಬ ವ್ಯಕ್ತಿಯನ್ನು ಇಲ್ಲಿ ಬೆಳೆಸಲಾಯಿತು. ಅವನ ಕೆಲಸ ರಾಜಕೀಯ ಎದುರಾಳಿಗಳು ಭ್ರಷ್ಟಾಚಾರವನ್ನು ಬೆಂಬಲಿಸುತ್ತಾರೆ ಎಂದು ಪ್ರಚಾರ ಮಾಡುವುದು. ಬಿಜೆಪಿಯವರು ರಾಜ್ಯ ರಾಜಕಾರಣದಲ್ಲಿ ಪ್ರವೇಶ ಪಡೆಯುವುದು ಭ್ರಷ್ಟಾಚಾರದ ವಿಷಯವನ್ನು ಹಿಡಿದುಕೊಂಡು. ಮಾರಿದಾಸ್ ದ್ರಾವಿಡ ಪಕ್ಷಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲು ಶುರುಮಾಡಿದರು. ಇದಕ್ಕೆ ಅವರು ಗುರಿಯಾಗಿಸಿದ್ದು ಟಿವಿ ಚಾನೆಲ್‌ಗಳನ್ನು.

ತಮಿಳುನಾಡಿನ ಟಿವಿ ಮಾಧ್ಯಮಗಳಲ್ಲಿ ಒಂದು ಅಂಶವನ್ನು ಗಮನಿಸಬೇಕು. ಅಲ್ಲಿ ಕಾಣುವ ಟಿವಿ ಆಂಕರ್‌ಗಳು ಸಾಮಾಜಿಕ ಸಮಾನತೆ ಆಶಯಗಳನ್ನು ನಂಬಿದವರು. ಪೆರಿಯಾರ್ ರಾಜಕೀಯ ವಿಚಾರಗಳನ್ನು, ಎಡಪಂಥೀಯ ವಿಚಾರಧಾರೆಯಲ್ಲಿ ಒಲವಿರುವವರು. ಅದೇ ಉತ್ಸಾಹದಲ್ಲಿ ಹಿಂದುಳಿದ ವರ್ಗಗಳಿಂದ ಮಾಧ್ಯಮ ಕ್ಷೇತ್ರಕ್ಕೆ ಬಂದವರು. ಇಂತಹ ಜನಪರ ಹಾಗೂ ವೃತ್ತಿಬದ್ಧತೆ ಇರುವ ಅಂಕರ್‌ಗಳಿದ್ದ ಕಾರಣದಿಂದಲೇ ಬಿಜೆಪಿ ಪರವಾದ ಸುದ್ದಿಗಳಿಗೆ ಮಾಧ್ಯಮದಲ್ಲಿ ಅವಕಾಶವಿರಲಿಲ್ಲ. ಮಾರಿದಾಸ್ ಈ ಆಂಕರ್‌ಗಳ ವಿರುದ್ಧ ದಾಳಿ ಅರಂಭಿಸಿದರು. ಆಂಕರ್‌ಗಳ ವಿಶ್ವಾಸಾರ್ಹತೆ ಪ್ರಶ್ನಿಸಲ್ಪಟ್ಟಾಗ, ಅನೇಕರು ರಾಜೀನಾಮೆ ನೀಡಿ ಹೊರನಡೆದರು. ಈ ಬೆಳವಣಿಗೆಯಿಂದಾಗಿ ನ್ಯೂಸ್ 18 ಚಾನೆಲ್ ಸಂಪೂರ್ಣ ಬಿಜೆಪಿ ಹಿಡಿತಕ್ಕೆ ಸಿಕ್ಕಿತು. ಅದೀಗ ಸಂಘಿ ಚಾನೆಲ್ ಆಗಿ ಬಿಟ್ಟಿದೆ. ಪಾಲಿಮರ್ ಕೂಡ ಅವರ ಚಾನೆಲ್ ಆಗಿ ಬಿಟ್ಟಿದೆ. ಕಡೆಯದಾಗಿ ಪುದಿಯ ತಲೈಮುರೈ ಚಾನೆಲ್‌ಗೆ ಈಗ ಬೆದರಿಕೆ ಒಡ್ಡುತ್ತಿದ್ದಾರೆ. ದೃಶ್ಯ ಮಾಧ್ಯಮ ಈಗ ಅವರ ಕೈಯಲ್ಲಿದೆ. ಮುದ್ರಣ ಮಾಧ್ಯಮದ ಮೂರು ನಾಲ್ಕು ಪತ್ರಿಕೆಗಳನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಸರ್ಕಾರಿ ಜಾಹೀರಾತು ಬಿಡುಗಡೆ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮೂಲಕ ನರೆಟಿವ್ ಸೆಟ್ ಮಾಡಲು ಮತ್ತು ಮಾಧ್ಯಮವನ್ನು ನಿಯಂತ್ರಿಸಲು ಸಾಧ್ಯವಾಗಿದೆ.

ಹೀಗೆ ಸಿದ್ಧವಾದ ವೇದಿಕೆಗೆ ಅಣ್ಣಾಮಲೈ ಅವರನ್ನು ಕಳಿಸಿ, ಯುವಕರನ್ನು ಸೆಳೆಯುವ ನಾಯಕರನ್ನಾಗಿ ಬೆಳೆಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ.

ತಮಿಳುನಾಡಿನ ವಿಷಯದಲ್ಲಿ ಬಿಜೆಪಿ ಮುಂದಿರುವ ಸಮಸ್ಯೆ ಏನೆಂದರೆ, ಚುನಾವಣೆ ಸಮೀಪಿಸಿದೆ. ಈಗ ಚುನಾವಣೆಯೇ ಆದ್ಯತೆ. ಅಮಿತ್ ಶಾ ಮಾದರಿಯ ಚುನಾವಣಾ ತಂತ್ರವೆಂದರೆ ಬೂತ್ ಮಟ್ಟದಲ್ಲಿ ನಿರ್ವಹಣೆ ಮಾಡುವುದು. ಈಗ ಹೆಚ್ಚು ಸಮಯವಿಲ್ಲದೇ ಇರುವುದರಿಂದ ತರಾತುರಿ ಎದ್ದು ಕಾಣುತ್ತಿದೆ.

ಇದೇ ಚುನಾವಣಾ ತಂತ್ರದ ಭಾಗವಾಗಿ ರಜನೀಕಾಂತ್ ಅವರನ್ನು ರಾಜಕೀಯಕ್ಕೆ ತರುತ್ತಿದ್ದಾರೆ. ರಜನೀಕಾಂತ್ ಅವರ ಹೊಸ ಪಕ್ಷ ಬಿಜೆಪಿಯ ಬಿ ತಂಡವಾಗಲಿದೆ ಅಷ್ಟೇ. ರಜನೀಕಾಂತ್ ಬಿಜೆಪಿ ಸೇರುವ ವದಂತಿ ಇತ್ತು. ಆದರೆ ಸೇರುತ್ತಿಲ್ಲ. ಅದಕ್ಕೆ ಅವರ ಅನಾರೋಗ್ಯ ಕಾರಣ. ತೀವ್ರ ಹಿಂದುತ್ವವಾದಿ ಪ್ರತಿಪಾದನೆಯ ವ್ಯಕ್ತಿತ್ವಗಳು ತಮಿಳುನಾಡಿನಲ್ಲಿ ಫಲಕೊಡುತ್ತಿಲ್ಲ. ಹಾಗಾಗಿ ರಜನೀಕಾಂತ್ ಮಾದರಿಯ ಮೃದು ಹಿಂದುತ್ವದ ವ್ಯಕ್ತಿತ್ವಗಳು ಬೇಕು. ಒತ್ತಾಯಪೂರ್ವಕವಾಗಿ ರಜನೀಕಾಂತ್ ಅವರನ್ನು ರಾಜಕೀಯಕ್ಕೆ ಎಳೆತರಲಾಗಿದೆ. ಅವರನ್ನು ಮತ ಒಡೆಯುವುದಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆಯಷ್ಟೇ.

ಈ ಚುನಾವಣೆಯಲ್ಲಿ ಎಐಎಡಿಎಂಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಆಡಳಿತದ ಮೂಲಕ ಒಳ್ಳೆಯ ಕೆಲಸ ಮಾಡಿದೆ ಎಂಬ ವರ್ಚಸ್ಸು ಪಡೆದುಕೊಂಡಿದ್ದರೂ ಬಿಜೆಪಿಯ ಸಖ್ಯದಿಂದ ವರ್ಚಸ್ಸಿಗೆ ಪೆಟ್ಟು ಬೀಳಬಹುದು. ಎರಡನೆಯ ಪಕ್ಷವಾಗಿ ಉಳಿಯಬಹುದು.

ಪ್ರ: ಶಶಿಕಲಾ ಜೈಲಿನಿಂದ ಬಿಡುಗಡೆಯಾದರೆ ಅವರ ಪ್ರಭಾವ..

ಉ: ಶಶಿಕಲಾ ಚುನಾವಣೆಯ ಮೇಲೆ ಪ್ರಭಾವ ಬೀರಬಹುದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಹಗರಣಗಳಿಂದ ಆಕೆಯ ವರ್ಚಸ್ಸಿಗೆ ಆಗಿರುವ ಧಕ್ಕೆಯಿಂದಾಗಿ ಹೆಚ್ಚೇನು ಪ್ರಭಾವವಾಗದು ಎಂದೆನಿಸುತ್ತದೆ. ಒಂದು ವೇಳೆ ಬಂದರೂ ಮತಗಳನ್ನು ಒಡೆಯಬಹುದು. ಎಐಎಂಐಎಂ ಮತ್ತು ಎಸ್‌ಡಿಪಿಐಗಳು ಚುನಾವಣೆಗೆ ಇಳಿದು ಮುಸ್ಲಿಮ್ ಮತವನ್ನು ಒಡೆಯುವ ಸಂಭವ ಇದೆ.

ಈ ಕಾರ್ಯತಂತ್ರಗಳನ್ನು ಎದುರಿಸುವುದಕ್ಕೆ ಡಿಎಂಕೆ ಮತ್ತು ಕಾಂಗ್ರೆಸ್ ಒಟ್ಟಿಗೆ ಕೆಲಸ ಮಾಡುತ್ತಿವೆ. ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡಿದ ಮೇಲೆ ತೀವ್ರವಾಗಿ ಕೆಲಸ ಆರಂಭವಾಗಿದೆ. ಚುನಾವಣಾ ತಂತ್ರಗಾರಿಕೆಯಲ್ಲಿ ಹೆಸರು ಮಾಡಿದ ಪ್ರಶಾಂತ್ ಕಿಶೋರ್ ಡಿಎಂಕೆಗೆ ಕೆಲಸ ಮಾಡುತ್ತಿದ್ದಾರೆ.

ಪ್ರ: ಕಾಂಗ್ರೆಸ್ ಮತ್ತು ಡಿಎಂಕೆ ಸಂಬಂಧ ಏನು? ಮಾತುಕತೆ ಮುಗಿದಿದೆಯೇ? ಎಡ ಪಕ್ಷಗಳು ಮತ್ತು ಕಮಲ ಹಾಸನ್ ಪ್ರಭಾವ ಏನು?

ಉ: ಕಾಂಗ್ರೆಸ್, ಎಐಡಿಎಂಕೆ ಜಾಗಕ್ಕೆ ಬಿಜೆಪಿ ಬರಲು ಹವಣಿಸುತ್ತಿದೆ. ಅವರಿಗೆ ತೀವ್ರ ಪೈಪೋಟಿ ಕೊಡಲು ಸಾಧ್ಯವಿರುವ ಪಕ್ಷ ಕಾಂಗ್ರೆಸ್. ತಾತ್ವಿಕತೆಯ ವಿಷಯದಲ್ಲೂ ಸರಿಯಾದ ಎದುರಾಳಿ. ದ್ರಾವಿಡ ಪಕ್ಷಗಳು ರಾಜಿಯಾಗುವ ಸ್ಥಿತಿ ತಲುಪಿವೆ. ಆದರೆ ಕಾಂಗ್ರೆಸ್ ಎಂದಿಗೂ ರಾಜಿಯಾಗುವುದಿಲ್ಲ. ಕಾಂಗ್ರೆಸ್‌ಗೆ ತಮಿಳುನಾಡಿನಲ್ಲಿ ಇತಿಹಾಸವೂ ಇದೆ. ಕಾಮರಾಜ್‌ನಂತವರು ಮುನ್ನಡೆಸಿದ ಪಕ್ಷ ಕಾಂಗ್ರೆಸ್. ಅಲ್ಲದೆ ತಮಿಳುನಾಡಿನ ಎಲ್ಲ ದ್ರಾವಿಡ ಪಕ್ಷಗಳು ಕಾಂಗ್ರೆಸ್‌ನಿಂದ ಹೊರಬಂದ ನಾಯಕರು ಕಟ್ಟಿದ್ದೇ. ಪೆರಿಯಾರ್ ಕೂಡ ಕಾಂಗ್ರೆಸ್‌ನವರು.

ಎಡಪಕ್ಷಗಳು ಇಲ್ಲಿ ಪ್ರಗತಿ ವಿರೋಧಿ ಶಕ್ತಿಗಳಿಗೆ ಪ್ರತಿರೋಧವಾಗಿ ಕೆಲಸ ಮಾಡಲಿದ್ದಾರೆ. ಚುನಾವಣೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಬಿಜೆಪಿಯ ಶಕ್ತಿಯನ್ನು ಕುಂದಿಸಲು ನೆರವಾಗಲಿದೆ. ಹಾಗಾಗಿ ಅವರ ಪಾತ್ರ ಇಲ್ಲಿ ಬಹಳ ಮುಖ್ಯ.

ಕಮಲ್ ಹಾಸನ್ ಪಕ್ಷ, ಕಾರ್ಪೋರೇಟ್ ಪಕ್ಷ ಎಂಬ ಇಮೇಜ್ ಇದೆ. ಅದು ಸಾಮಾನ್ಯ ಜನರನ್ನು ತಲುಪುವಲ್ಲಿ ಸೋತಿದೆ ಎಂದೆನಿಸುತ್ತದೆ. ಒಂದುವೇಳೆ ಕಮಲ್‌ಹಾಸನ್ ಮತ್ತು ರಜನೀಕಾಂತ್ ಸೇರಿದರೆ ಡಿಎಂಕೆಗೆ ಅನುಕೂಲವಾಗಲಿದೆ. ಅಲ್ಪಸಂಖ್ಯಾತ ಮತಗಳು ಎಐಎಂಐಎಂ ಮತ್ತು ಎಸ್‌ಡಿಪಿಐ ಕಡೆಗೆ ಹೋಗದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು. ಏಕೆಂದರೆ ಈ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ.

ದ್ರಾವಿಡ ಪಕ್ಷಗಳ ನೆರವಿನೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು ಮತ್ತು ಹೀಗಾಗುವುದು ಬಹಳ ಮುಖ್ಯ ಕೂಡ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಡಿಎಂಕೆ ನಾಯಕ ಸ್ಟಾಲಿನ್ ನಡುವೆ ಒಂದು ಉತ್ತಮ ಹೊಂದಾಣಿಕೆ ಇದೆ. ಅದು ಚುನಾವಣೆಯ ಕಾರ್ಯತಂತ್ರಗಳಲ್ಲಿ ಕಾಣಿಸಲಿದೆ. ಇನ್ನು ಸೀಟು ಹಂಚಿಕೆಯ ಬಗ್ಗೆ ಸಭೆ ನಡೆಯಬೇಕಿದೆ. ಅದಿನ್ನೂ ತೀರ್ಮಾನವಾಗಿಲ್ಲ.

ಪ್ರ: ಕೊನೆಯ ಮಾತು..

ಉ: ದಕ್ಷಿಣದಲ್ಲಿ ತಮಿಳುನಾಡು ಮತ್ತು ಕೇರಳ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುತ್ತಿರುವ ಎರಡು ರಾಜ್ಯಗಳು. ತಮಿಳುನಾಡು ತೀವ್ರ ಪ್ರತಿರೋಧ ಒಡ್ಡುತ್ತಲೇ ಬಂದಿದೆ. ಅದು ಮುಂದೆಯೂ ಇರುತ್ತದೆ. ಎಲ್ಲರನ್ನು ಒಳಗೊಂಡು ಮುನ್ನಡೆಯುವ ಮೂಲ ಆಶಯವನ್ನು ನಾವು ಕಳೆದುಕೊಂಡರೆ, ಬಿಜೆಪಿಯಂತಹ ತೀವ್ರಗಾಮಿಗಳು ಅಕ್ರಮಿಸಿಕೊಳ್ಳುತ್ತಾರೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು.

ಸಂದರ್ಶನ: ಗುರುಪ್ರಸಾದ್ ಡಿ. ಎನ್


ಇದನ್ನೂ ಓದಿ: ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...