ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ನನಗೆ ವಿವರಗಳನ್ನು ನೀಡಲು ಸಾಧ್ಯವಾಗದಿದ್ದರೆ, ನನ್ನನ್ನೂ ಬಂಧನ ಕೇಂದ್ರದಲ್ಲಿ ವಾಸಿಸಲು ಕೇಳಲಾಗುತ್ತದೆ. ನಾನು ನಿಮಗೆ ಗ್ಯಾರಂಟಿ ಕೊಡುತ್ತೇನೆ, ಅಂತಹ ಪರಿಸ್ಥಿತಿ ಬಂದರೆ ನಾನು ಮೊದಲು ಅಲ್ಲಿಗೆ ಹೋಗುತ್ತೇನೆ” ಎಂದು ಹೇಳಿದ್ದಾರೆ.
ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಕೇಂದ್ರವು ಪೌರತ್ವ ತಿದ್ದುಪಡಿ ಕಾನೂನನ್ನು ಹಿಂತೆಗೆದುಕೊಳ್ಳಬೇಕೆಂದು ಅಶೋಕ್ ಗೆಹ್ಲೋಟ್ ಶುಕ್ರವಾರ ಒತ್ತಾಯಿಸಿದ್ದಾರೆ.
ಜೈಪುರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ರಾಜಸ್ಥಾನದ “ಶಾಹೀನ್ ಬಾಗ್” ಎಂದು ಕರೆಯಲಾಗುತ್ತಿರುವ ಸ್ಥಳದಲ್ಲಿ ಮಾತನಾಡಿದ ಅವರು “ಸಂವಿಧಾನದ ಮನೋಭಾವಕ್ಕೆ ವಿರುದ್ಧವಾದ ಸಿಎಎ, ಎನ್‌ಆರ್‌ಸಿ ಅನ್ನು ಎನ್‌ಡಿಎ ಸರ್ಕಾರ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್) ಪೋಷಕರ ಜನ್ಮಸ್ಥಳದ ಮಾಹಿತಿ ಪಡೆಯಲಾಗುತ್ತಿದೆ. “ನನಗೆ ವಿವರಗಳನ್ನು ನೀಡಲು ಸಾಧ್ಯವಾಗದಿದ್ದರೆ, ನನ್ನನ್ನೂ ಬಂಧನ ಕೇಂದ್ರದಲ್ಲಿ ವಾಸಿಸಲು ಕೇಳಲಾಗುತ್ತದೆ. ನನ್ನ ಹೆತ್ತವರ ಜನ್ಮಸ್ಥಳದ ಬಗ್ಗೆ ನನಗೆ ತಿಳಿದಿಲ್ಲ. ನೀವು ಖಚಿತವಾಗಿರಿ, ಅಂತಹ ಪರಿಸ್ಥಿತಿ ಬಂದರೆ ನಾನು ಮೊದಲು ಅಲ್ಲಗೆ ಹೋಗುತ್ತೇನೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಈಗ ಅಸ್ಸಾಂನ ಬಿಜೆಪಿ ಸರ್ಕಾರ ಸಹ ಎನ್‌ಆರ್‌ಸಿ ಜಾರಿಗೆ ತರಲು ನಿರಾಕರಿಸಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಹೇಳಿದರು.
“ಕಾನೂನು ರೂಪಿಸುವುದು ಸರ್ಕಾರದ ಹಕ್ಕು. ಆದರೆ ಜನರ ಭಾವನೆಗಳಿಗೆ ಅನುಗುಣವಾಗಿ ಸರ್ಕಾರ ಅದನ್ನು ಮಾಡಬೇಕು. ದೆಹಲಿಯ ಶಾಹೀನ್ ಬಾಗ್‌ನಂತೆ ರಾಜಸ್ಥಾನವೂ ಸೇರಿದಂತೆ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಾರ್ವಜನಿಕ ಭಾವನೆಗಳನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು” ಎಂದು ಅವರು ಹೇಳಿದರು.


