ದೆಹಲಿ ಬರುತ್ತಿರುವ ನಮ್ಮವರ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಈ ಬಿಜೆಪಿಯವರಿಗೆ ಯಾಕಿಷ್ಟು ಆತಂಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಆಯೋಜಿಸಿರುವ ‘ಮತಗಳ್ಳತನದ ವಿರುದ್ದದ’ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಿದ ವೇಳೆ ಅವರು ಮಾತನಾಡಿದರು.
ಬಿಜೆಪಿಯವರು ದೆಹಲಿಗೆ ಬರುವ ನಮ್ಮ ವಾಹನಗಳನ್ನು ತಡೆಯುತ್ತಿದ್ದಾರೆ. ದೆಹಲಿ ಪ್ರವೇಶಿಸಲು ಬಿಡುತ್ತಿಲ್ಲ ಎಂಬ ಮಾಹಿತಿ ಬಂದಿದೆ. ಅವರಿಗೆ ನಮ್ಮ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ. ನಾವು ದೇಶದ ಪರವಾಗಿ, ಜನರ ಪರವಾಗಿ, 140 ಕೋಟಿ ಜನರ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದರು.
ನಾವು ಒಂದೂವರೆ ಸಾವಿರ ಜನರಿಗೆ ವಾಸ್ತವ್ಯ ವ್ಯವಸ್ಥೆ ಮಾಡಿದ್ದೇವೆ. ಸುಮಾರೂ ಎರಡೂವರೆ ಸಾವಿರ ಜನರು ಅವರಾಗಿಯೇ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ರೈಲು, ವಿಮಾನಗಳ ಮೂಲಕ ದೆಹಲಿಗೆ ಆಗಮಿಸಿದ್ದಾರೆ. ಒಟ್ಟು 3 ರಿಂದ 4 ಸಾವಿರ ಜನರು ಕರ್ನಾಟಕದಿಂದ ಭಾಗಿಯಾಗುತ್ತಿದ್ದಾರೆ. ಮತಗಳ್ಳತನದ ವಿರುದ್ದ 1 ಕೋಟಿ 42 ಲಕ್ಷ ಜನರು ಸಹಿ ಹಾಕಿದ್ದಾರೆ. ನಮ್ಮ ಉತ್ಸಾಹಕ್ಕೆ ಇಲ್ಲಿ ಸೇರಿರುವ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೇ ಸಾಕ್ಷಿ ಎಂದು ಡಿಕೆಶಿ ಹೇಳಿದರು.
ಕಾಂಗ್ರೆಸ್ ಸೋಲಿನ ಹತಾಶೆಯಲ್ಲಿ ಮತಗಳ್ಳತನ ಆರೋಪ ಮಾಡುತ್ತಿದ್ದ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರ ಖುಷಿಗೆ ಏನು ಬೇಕಾದರೂ ಮಾತನಾಡಲಿ, ಕಾಂಗ್ರೆಸ್ ಸೋಲಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ತಂದು ಕೊಡುವಾಗ ನಮ್ಮ ಅನೇಕ ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕೋಸ್ಕರ ಪ್ರಾಣ ಕೊಟ್ಟಿದ್ದಾರೆ. ನೆಹರು, ಗಾಂಧಿ ಜೈಲಲ್ಲಿದ್ದರು ಎಂದರು.
ಸಿಎಂ ಸಿದ್ದರಾಮಯ್ಯ ಕೂಡ ಬರುತ್ತಿದ್ದಾರೆ. ನಾನು ಮತ್ತು ಅವರು ಒಟ್ಟಿಗೆ ಸಮಾವೇಶಕ್ಕೆ ಹೋಗುತ್ತೇವೆ ಎಂದು ಇದೇ ವೇಳೆ ತಿಳಿಸಿದರು.


