Homeಮುಖಪುಟಪೆಟ್ರೋಲ್, ಡೀಸೆಲ್ ಮೇಲಿನ ಸಂಪೂರ್ಣ ಸೆಸ್ ತೆಗೆದುಹಾಕಿ: ತೆಲಂಗಾಣ ಸಿಎಂ ಒತ್ತಾಯ

ಪೆಟ್ರೋಲ್, ಡೀಸೆಲ್ ಮೇಲಿನ ಸಂಪೂರ್ಣ ಸೆಸ್ ತೆಗೆದುಹಾಕಿ: ತೆಲಂಗಾಣ ಸಿಎಂ ಒತ್ತಾಯ

- Advertisement -
- Advertisement -

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಸುಂಕವನ್ನು ಕಡಿಮೆ ಮಾಡುವಂತೆ ರಾಜ್ಯಗಳನ್ನು ಕೇಳಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್‌ ಅನ್ನು ತೆಗೆದುಹಾಕುವಂತೆ ಕೇಂದ್ರದ ಎನ್‌ಡಿಎ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಟಿಆರ್‌ಎಸ್ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ ಹೆಚ್ಚಿಸಿಲ್ಲ, ಆದ್ದರಿಂದ ಇಳಿಕೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.

’ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ಹಿಂಪಡೆಯುವವರೆಗೆ ನಾವು ನಿಮಗೆ ವಿಶ್ರಾಂತಿ ತೆಗೆದುಕೊಳ್ಳಲು ಬಿಡುವುದಿಲ್ಲ. ತೆಲಂಗಾಣದಲ್ಲಿ ಬೆಳೆದ ಭತ್ತವನ್ನು ಕೇಂದ್ರವೇ ಸಂಪೂರ್ಣವಾಗಿ ಖರೀದಿಸಬೇಕು. ರಾಜ್ಯ ಬಿಜೆಪಿ ನಾಯಕರು ಪೊಳ್ಳು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ, ಈ ಬೇಡಿಕೆಗಳನ್ನು ಕೇಂದ್ರವು ಒಪ್ಪುವಂತೆ ಮಾಡಬೇಕು’ ಎಂದು ಕೆಸಿಆರ್ ಹೇಳಿದರು.

‘ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಕಡಿಮೆ ಇದ್ದರೂ, ಕೇಂದ್ರವು ಸೆಸ್ ಹೆಸರಿನಲ್ಲಿ ಇಂಧನ ಬೆಲೆಗಳನ್ನು ಹೆಚ್ಚಿಸಿ ಸಾಮಾನ್ಯ ಜನರಿಗೆ ಹೊರೆಯಾಗಿದೆ. 2014 ರ ನಂತರ ಅಂತರರಾಷ್ಟ್ರೀಯ ಬೆಲೆಗಳು ಪ್ರತಿ ಬ್ಯಾರೆಲ್‌ಗೆ $ 105 ಅನ್ನು ಮುಟ್ಟಲಿಲ್ಲ, ಆದರೆ ಕೇಂದ್ರವು ಬೆಲೆಗಳನ್ನು ಹೆಚ್ಚಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

’ನಾವು ಸುಂಕವನ್ನು ಒಂದು ಪೈಸೆ ಕೂಡ ಹೆಚ್ಚಿಸಿಲ್ಲ. ಹಾಗಾಗಿ ಕಡಿತದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಟಿಆರ್‌ಎಸ್ ಸರ್ಕಾರ ಬಂದಾಗಿನಿಂದಲೂ ಸುಂಕ ಹೆಚ್ಚಿಸಿಲ್ಲ. ಯಾವ ಮೂರ್ಖ ನಮ್ಮನ್ನು ಸುಂಕ  ಕಡಿಮೆ ಮಾಡಲು ಕೇಳುತ್ತಾನೆ? ಯಾರು ಬೆಲೆ ಹೆಚ್ಚಿಸಿದರೋ ಅವರೇ ಅದನ್ನು ಕಡಿಮೆ ಮಾಡಬೇಕಾಗುತ್ತದೆ’ ಎಂದು ಕೆಸಿಆರ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

‘ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ಒಟ್ಟು ಸೆಸ್ ಅನ್ನು ತೆಗೆದುಹಾಕುವಂತೆ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. ಏಕೆಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಸರ್ಕಾರವು ಅನಗತ್ಯವಾಗಿ ಸೆಸ್ ವಿಧಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾಗುತ್ತಿದೆ. ದೇಶದ ಬಡ ಜನರ ಬಗ್ಗೆ ಸರ್ಕಾರವು ಪ್ರಾಮಾಣಿಕವಾಗಿದ್ದರೆ, ಅದು ಒಟ್ಟು ಸೆಸ್ ಅನ್ನು ಹಿಂಪಡೆಯಬೇಕು… ’ ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

2014 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲ ಬ್ಯಾರೆಲ್‌ಗೆ 100 ಡಾಲರ್ ಮೇಲಿತ್ತು. ಆಗ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 9.48 ರೂ ಮತ್ತು ಡೀಸೆಲ್ ಮೇಲೆ 3.56 ರೂ ಅಬಕಾರಿ ಶುಂಕ ವಿಧಿಸುತ್ತಿತ್ತು. ಈಗ 2021 ಕಚ್ಚಾ ತೈಲದ ಬ್ಯಾರೆಲ್‌ಗೆ 80 ಡಾಲರ್ ಆಸುಪಾಸಿನಲ್ಲಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 32.90 ರೂ ಮತ್ತ ಡೀಸೆಲ್ ಮೇಲೆ 31.80 ರೂ ತೆರಿಗೆ ವಿಧಿಸುತ್ತಿದೆ. ದೀಪಾವಳಿ ದಿನ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ಮತ್ತು ಡೀಸೆಲ್ ಮೇಲೆ 10 ರೂ ಕಡಿತಗೊಳಿಸಿದೆ.

ತೆಲಂಗಾಣದಲ್ಲಿ ಭತ್ತದ ವಿವಾದ

ಕೇಂದ್ರವು ಭತ್ತವನ್ನು ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ತೆಲಂಗಾಣ ಸರ್ಕಾರವು ಕಳೆದ ಕೆಲವು ದಿನಗಳಿಂದ ಈ ಋತುವಿನಲ್ಲಿ ಭತ್ತದ ಕೃಷಿಗೆ ಮಾಡದಂತೆ ರೈತರನ್ನು ವಿನಂತಿಸುತ್ತಿದೆ.

ಹಿಂಗಾರು ಋತುವಿನಲ್ಲಿ ಭತ್ತದ ಕೃಷಿ ಮಾಡದಂತೆ ರಾಜ್ಯ ರೈತರನ್ನು ನಿರುತ್ಸಾಹಗೊಳಿಸುತ್ತಿರುವ ಟಿಆರ್‌ಎಸ್‌ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಆಂದೋಲನ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದ್ದರಿಂದ ರಾಜ್ಯದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಕೆಸಿಆರ್‌, ‘ಕೇಂದ್ರವು ಭತ್ತವನ್ನು ಖರೀದಿಸಲು ಸಿದ್ದವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂಸತ್ತಿನಲ್ಲಿ ಭತ್ತ ಸಂಗ್ರಹಣೆ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸುತ್ತೇವೆ. ಜಿಲ್ಲೆಗಳಲ್ಲಿ ಧರಣಿ ನಡೆಸುತ್ತೇವೆ. ಮತ್ತು ಅಗತ್ಯವಿದ್ದರೆ ಮುಖ್ಯಮಂತ್ರಿ ಸೇರಿದಂತೆ ತೆಲಂಗಾಣದ ಸಂಸದರು, ಶಾಸಕರು, ಎಂಎಲ್‌ಸಿಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಕೆಸಿಆರ್ ಹೇಳಿದರು.

‘ಕೇಂದ್ರದ ಮೂರು ಕೃಷಿ ಕಾನೂನುಗಳ ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ಕೆಆರ್‌ಎಸ್‌ ಪಕ್ಷವು ಬೆಂಬಲಿಸುತ್ತದೆ. ರೈತವಿರೋಧಿ ಕಾನೂನುಗಳನ್ನು ಹಿಂಪಡೆಯುವವರೆಗೂ ಕೇಂದ್ರವನ್ನು ವಿಶ್ರಾಂತಿ ಪಡೆಯಲು ಬಿಡುವುದಿಲ್ಲ’ ಎಂದರು.


ಇದನ್ನೂ ಓದಿ: ಪೆಟ್ರೋಲ್ ಬೆಲೆಯಲ್ಲಿ 10 ರೂ ಕಡಿತಗೊಳಿಸಿದ ಪಂಜಾಬ್ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ನೊಟೀಸ್‌ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...