Homeಕರ್ನಾಟಕಮೋದಿ ಮತ್ತು ಬಿಜೆಪಿ ಅಜೇಯರೆ?

ಮೋದಿ ಮತ್ತು ಬಿಜೆಪಿ ಅಜೇಯರೆ?

- Advertisement -
- Advertisement -

ಬಿಜೆಪಿ ಕೂಟದ ಪ್ರಚಾರ ತಂತ್ರದಲ್ಲಿ ಕಣ್ಣಿಗೆ ರಾಚುವ ಒಂದು ಅಂಶ ಇದೆ. ಈ ತಂತ್ರ ಎಲ್ಲರಿಗೂ ತಿಳಿದದ್ದೇ. ತಮ್ಮ ಸಂಕುಚಿತ ’ಧಾರ್ಮಿಕ’ ವಿಚಾರಗಳನ್ನು ಸಮಸ್ತ ಹಿಂದೂಗಳ ಅಭಿಪ್ರಾಯವೆಂಬಂತೆ ಕ್ಲೈಮ್ ಮಾಡುವುದು ಹಾಗೂ ಒಡೆದು ಆಳುವ ತಮ್ಮ ನೀತಿಗಳನ್ನು ವಿರೋಧಿಸುವವರನ್ನು ’ಹಿಂದೂವಿರೋಧಿ’ಗಳು ಎಂದು ಚಿತ್ರಿಸುವುದು ಮಾಮೂಲಿಯಾಗಿಬಿಟ್ಟಿದೆ.

ಹಾಗಾಗಿಯೇ, ’ಮೋದಿ ಬಿಟ್ಟರೆ ಈ ದೇಶಕ್ಕೆ ಯಾರೂ ಗತಿಯಿಲ್ಲ’ ಎಂಬ ಪ್ರಜಾತಂತ್ರವನ್ನೇ ಅಪಮಾನಗೊಳಿಸುವ ಅಸಹ್ಯಕರ ಪ್ರಚಾರ ಎಗ್ಗಿಲ್ಲದೆ ಸಾಗಿದೆ. ಜೊತೆಜೊತೆಗೇ ’ಬಿಜೆಪಿಯೆದುರು ನಿಲ್ಲುವ ರಾಜಕೀಯ ಶಕ್ತಿ ಯಾವುದೂ ಇಲ್ಲ’, ’ಅಮಿತ್ ಶಾನ ಚಾಣಕ್ಯ ತಂತ್ರ ಹಾಗೂ ಮೋದಿ ಅಲೆಯಲ್ಲಿ ಎಲ್ಲರೂ ಕೊಚ್ಚಿ ಹೋಗುತ್ತಿದ್ದಾರೆ’… ಇತ್ಯಾದಿ ವಾದಗಳನ್ನು ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರ ಹರಿಯಬಿಡುತ್ತಿದ್ದಾರೆ. ಒಟ್ಟಾರೆಯಾಗಿ ಮೋದಿ ಮತ್ತು ಬಿಜೆಪಿ ಪಕ್ಷಗಳು ಸೋಲನ್ನೇ ಕಾಣದ ಅಜೇಯ ಶಕ್ತಿ ಎಂಬಂತೆ ಚಿತ್ರಿಸುವುದು ಇದರ ಮುಖ್ಯ ಗುರಿ. ಈ ಪ್ರಚಾರದ ಅಬ್ಬರ ಎಷ್ಟು ಜೋರಾಗಿದೆ ಮತ್ತು ಪರಿಣಾಮಕಾರಿಯಾಗಿದೆಯೆಂದರೆ ಸಾಮಾನ್ಯ ಮತದಾರರು ಮಾತ್ರವಲ್ಲ, ವಿರೋಧ ಪಕ್ಷಗಳೂ ಕೂಡ ಇದನ್ನೇ ವಾಸ್ತವವೆಂದು ನಂಬಿಕೊಳ್ಳುವಂತಾಗಿದೆ.

ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇಂಥಾ ಪ್ರಚಾರದ ಅಗತ್ಯ ಯಾಕಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಆದರೆ ಸೋಜಿಗದ ಸಂಗತಿಯೆಂದರೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಪ್ರಜ್ಞಾವಂತರು ಈ ಮೋದಿ ಮಾಯಾಜಾಲ ಕಂಡು ಹತಾಶೆ ವ್ಯಕ್ತಪಡಿಸುವುದು. ಹೌದು, ಅವರ ಪ್ರಚಾರ ತಂತ್ರ ನಿಜಕ್ಕೂ ಯಶಸ್ವಿಯಾಗಿದೆ!

2019ರಲ್ಲಿ ಮೋದಿ ಸರ್ಕಾರ ’ಪ್ರಚಂಡ ಬಹುಮತ’ ಗಳಿಸಿರುವುದನ್ನು ಯಾರೂ ಅಲ್ಲಗಳೆಯಲಾಗದು ನಿಜ. ಕಾರ್ಪೊರೇಟ್ ಕ್ರೋನಿಗಳಿಂದ ಹರಿದುಬರುತ್ತಿರುವ ಭಾರೀ ಹಣದ ಬಲ, ಸಂಘ ಪರಿವಾರದ ಕೇಡರ್ ಬಲ, ಧರ್ಮದ ಆಧಾರದಲ್ಲಿ ಓಟುಗಳ ಧ್ರುವೀಕರಣ ತಂತ್ರ, ಜಾತಿ ಸಮೀಕರಣದ ನೈಪುಣ್ಯತೆ, ಮಾಧ್ಯಮಗಳನ್ನು ತಮ್ಮ ತುತ್ತೂರಿಗಳನ್ನಾಗಿಸಿಕೊಂಡಿರುವುದು, ಸೋಷಿಯಲ್ ಮೀಡಿಯಾದ ಪ್ರಚಾರ ಯಂತ್ರಾಂಗ, ಜೊತೆಗೆ ಚುನಾವಣಾ ಆಯೋಗ ಮತ್ತು ಇತರೆ ಸಾಂವಿಧಾನಿಕ ಸಂಸ್ಥೆಗಳ ಅಪಬಳಕೆ – ಹೀಗೆ ಹತ್ತು ಹಲವು ಅಂಶಗಳು ಮೋದಿ ಕೂಟದ ದೈತ್ಯ ಶಕ್ತಿಯನ್ನು ಸಾರಿ ಹೇಳುತ್ತಿವೆ.

ಆದರೆ ಇದಿಷ್ಟೇ ವಾಸ್ತವವೇ? ಮೋದಿ ಕೂಟಕ್ಕೆ ತಡೆಯೊಡ್ಡಿ ಮಣಿಸಬಲ್ಲ ಅಂತಸ್ಸತ್ವ ಈ ದೇಶದ ಜನರಿಗೆ ಹಾಗೂ ರಾಜಕಾರಣಕ್ಕೆ ಇಲ್ಲವೆ? ಹಾಗಾದರೆ ಭಾರತಕ್ಕೆ ಫ್ಯಾಸಿಸ್ಟ್ ಧೋರಣೆಯ ಆಡಳಿತ ಕಟ್ಟಿಟ್ಟಬುತ್ತಿಯೆ? ಈ ಪ್ರಶ್ನೆಗಳನ್ನು ಹಾಕಿಕೊಂಡು ವಾಸ್ತವ ವಿದ್ಯಮಾನಗಳನ್ನು ಒಂದಿಷ್ಟು ಆಳವಾದ ವಿಶ್ಲೇಷಣೆಗೆ ಒಡ್ಡಿದಾಗ ಈ ದೇಶದ ಅಪಾರ ಅಂತಸ್ಸತ್ವದ ಅರಿವಾಗುತ್ತದೆ. ಭರವಸೆಯ ಬೆಳಕು ಮೂಡುತ್ತದೆ.

2019ರ ಅಭೂತಪೂರ್ವ ಗೆಲುವಿನ ದಿನವೇ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ನಿಂತು ಮೋದಿ ಭಾಷಣ ಮಾಡಿದ್ದು ನೆನಪಿಸಿಕೊಳ್ಳಿ. ಈ ಗೆಲುವು ’ಏಕ್ ಸೌ ತೀಸ್ ಕರೋಡ್ ದೇಶ್ ವಾಸಿಯೋಂ ಕಾ ಜೀತ್ ಹೈ’ (ನೂರಾ ಮೂವತ್ತು ಕೋಟಿ ದೇಶವಾಸಿಗಳ ಗೆಲುವು) ಎಂದು ಅಭಿನಯಪೂರ್ವಕವಾಗಿ ಮಾತಾಡಿದ್ದರು. ಮಾತಿನ ಭರದಲ್ಲಿ 130 ಕೋಟಿ ಜನ ಎಂದು ಸಂಬೋಧಿಸುವುದು ಸಹಜ. ಆದರೆ ಅದನ್ನೇ ಸತ್ಯವೆಂಬಂತೆ ಹಗಲು ರಾತ್ರಿ ಪ್ರಚಾರ ಮಾಡುವವರನ್ನ ಏನನ್ನಬೇಕು? ವಾಸ್ತವಾಂಶಗಳನ್ನು ನೋಡೋಣ.

’ಪ್ರಚಂಡ ಬಹುಮತ’ – ಹಾಗೆಂದರೆ?

2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ 303 ಸ್ಥಾನಗಳನ್ನು ಗಳಿಸಿದೆ, ನಿಜ. ಅಂದರೆ ಲೋಕಸಭೆಯ 543 ಸ್ಥಾನಗಳಲ್ಲಿ 55.5% ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ 37.36% ಮಾತ್ರ. ಅಂದರೆ ದೇಶಾದ್ಯಂತ ಚಲಾವಣೆಯಾದ ಮತಗಳಲ್ಲಿ 62.64% ಮತಗಳು ಒಂದೋ ಬಿಜೆಪಿಯ ವಿರುದ್ಧವಾಗಿ ಚಲಾವಣೆಯಾಗಿವೆ ಅಥವಾ ಇತರೆ ಸ್ಥಳೀಯ ಪಕ್ಷಗಳ/ಅಭ್ಯರ್ಥಿಗಳ ಪರವಾಗಿ ಚಲಾವಣೆಯಾಗಿವೆ ಎಂಬುದು ಹಗಲಿನಷ್ಟೇ ಸತ್ಯ. ಒಟ್ಟು ನೋಂದಾಯಿತ ಮತದಾರರ (ಮತ ಚಲಾಯಿಸದವರನ್ನೂ ಸೇರಿಸಿದಂತೆ) ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿ ಗಳಿಸಿದ ಮತಗಳು 25.12% ಮಾತ್ರ. ಅಬ್ಬರದ ಪ್ರಚಾರಗಳ ಮೂಲಕ ಮರೆಮಾಚಲಾಗದ ಸತ್ಯವಿದು.

ಹೆಚ್ಚು ಸೀಟುಗಳನ್ನು ಗೆದ್ದ ಆಧಾರದಲ್ಲಿ ಸರ್ಕಾರ ರಚಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿರುವುದರಿಂದ ಈ ಸರ್ಕಾರವನ್ನು ’ಪ್ರಚಂಡ ಬಹುಮತ’ದ ಸರ್ಕಾರ ಎಂದು ಪರಾಕು ಹಾಕಲಾಗುತ್ತಿದೆ. ಒಪ್ಪೋಣ. ಆದರೆ ’ಚಾಣಕ್ಯ’
ತಂತ್ರಗಳನ್ನು, ಮೋದಿಯ ’ಮ್ಯಾಜಿಕ್’ಅನ್ನು ತಿರಸ್ಕರಿಸಿ ಮತ ಚಲಾಯಿಸಿದ ಆ 62.64% ಮತದಾರರನ್ನು ಪರಿಗಣಿಸುವುದೇ ಬೇಡವೇ? ಇವರ ಅಬ್ಬರದ ಪ್ರಚಾರಕ್ಕೆ ಮರುಳಾಗಿಯೋ ಅಥವಾ ನಮ್ಮೊಳಗಿನ ಸಿನಿಕತನದ ಕಾರಣಕ್ಕೋ ಹಾಗೆ ಆಲಕ್ಷಿಸುವ ಮೂಲಕ ಅಷ್ಟೊಂದು ಬಹುಸಂಖ್ಯಾತ ಮತದಾರರನ್ನು ನಾವು ಅಗೌರವಿಸಿದಂತಾಗುವುದಿಲ್ಲವೆ? ಪ್ರಜಾತಂತ್ರದ ದೃಷ್ಟಿಯಿಂದ ಇದೊಂದು ಮೌಲಿಕ ಪ್ರಶ್ನೆ. ಇದು ಒಣ ಆದರ್ಶದ ಮಾತಷ್ಟೇ ಅಲ್ಲ, ಇಲ್ಲೊಂದು ಭರವಸೆಯ ಬೆಳಕೂ ಇದೆ ಎಂಬುದನ್ನು ನಾವು ಮನಗಾಣಬೇಕು.

ಶೂನ್ಯ ಸಂಪಾದನೆ – ಯಾಕಾಗಿ?

ಇಷ್ಟೆಲ್ಲಾ ಅಬ್ಬರದ ಪ್ರಚಾರ ನಡೆಸಿದ್ದಲ್ಲದೆ ಪುಲ್ವಾಮ ದುರಂತವನ್ನು ರಾಜಕೀಯಕ್ಕಾಗಿ ಬಳಸಿ ಭಾವನಾತ್ಮಕ ಸನ್ನಿವೇಶ ಸೃಷ್ಟಿಸಿದರೂ ಕೂಡ ಕೆಲವು ರಾಜ್ಯಗಳಲ್ಲಿ ಬಿಜೆಪಿ ಖಾತೆಯನ್ನೇ ತೆರೆಯಲಾಗಿಲ್ಲವಲ್ಲ. ಯಾಕೆ? ಆಂಧ್ರ ಪ್ರದೇಶದಲ್ಲಿ 2014ರಲ್ಲಿ ಗಳಿಸಿದ್ದ ಎರಡು ಸ್ಥಾನಗಳನ್ನು ಕಳೆದುಕೊಂಡು ಶೂನ್ಯಕ್ಕೆ ತಲುಪಿದ್ದೇಕೆ?
ಎಐಡಿಎಂಕೆ ಮತ್ತಿತರ ಪಕ್ಷಗಳ ಜೊತೆಗೂಡಿ ಏನೆಲ್ಲಾ ಕಸರತ್ತು ನಡೆಸಿಯೂ ತಮಿಳುನಾಡಿನಲ್ಲಿ ಇದ್ದ ಒಂದು ಸ್ಥಾನವನ್ನು ಕಳೆದುಕೊಂಡು ಸೊನ್ನೆ ಸುತ್ತಿದ್ದೇಕೆ? ಕೇರಳದಲ್ಲಿ ಸ್ವಾಮಿ ಅಯ್ಯಪ್ಪನನ್ನು ಹಿಡಿದುಕೊಂಡರೂ, ಏನೆಲ್ಲ ನೆಪಗಳಲ್ಲಿ ಕೋಮು ಧ್ರುವೀಕರಣಗೊಳಿಸುವ ಎಡೆಬಿಡದ ಪ್ರಯತ್ನದ ಹೊರತಾಗಿಯೂ ಖಾತೆಯನ್ನೇ ತೆರೆಯಲಿಲ್ಲವಲ್ಲ, ಯಾಕೆ?

ಮೋದಿ ಮಾದರಿ ರಾಜಕಾರಣಕ್ಕೆ ದಿಡ್ಡಿಬಾಗಿಲು ತೆರೆಯದೆ ತಡೆಗಟ್ಟಿರುವ ಈ ರಾಜ್ಯಗಳ ರಾಜಕಾರಣವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಭಾರತ ಎಂಬುದು ಬಹು ಭಾಷಿಕ, ಬಹು ಸಾಂಸ್ಕೃತಿಕ, ಬಹು ರಾಷ್ಟ್ರೀಯತೆಗಳ ಒಕ್ಕೂಟ ಎಂಬ ವಾಸ್ತವ ನಮ್ಮೆದುರಿಗಿದೆ. ಹೀಗಿರುವಾಗ ರಾಜ್ಯಗಳ ಅಸ್ಮಿತೆ, ಅಭಿವೃದ್ಧಿ, ಪ್ರಾದೇಶಿಕ ಹಿತಾಸಕ್ತಿಗಳನ್ನು ಆಧರಿಸಿದ ರಾಜಕಾರಣದಿಂದ ಇತರ ರಾಜ್ಯಗಳು ಸಕಾರಾತ್ಮಕ ಪಾಠ ಕಲಿಯಬೇಕಲ್ಲವೆ?

ವಿಧಾನಸಭೆಗಳ ವಿಧಾನವೇನು?

2019ರ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯ ಬೆನ್ನಿಗೇ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸತತ ಹಿನ್ನಡೆ ಅನುಭವಿಸುತ್ತಿರುವುದು ಮಾತ್ರ ಕಟು ವಾಸ್ತವ. ಹರಿಯಾಣದ ಲೋಕಸಭಾ ಸ್ಥಾನಗಳಲ್ಲಿ ಹತ್ತಕ್ಕೆ ಹತ್ತೂ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ನಂತರ ಕೇವಲ ಆರು ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 47 ರಿಂದ 40ಕ್ಕೆ ಇಳಿದು 7 ಸ್ಥಾನಗಳನ್ನು ಕಳೆದುಕೊಂಡಿತು. 90 ಸ್ಥಾನಗಳ ಅಸೆಂಬ್ಲಿಯಲ್ಲಿ ಅಧಿಕಾರ ಹಿಡಿಯಲು ಅನಿವಾರ್ಯವಾಗಿ ಪ್ರತಿಸ್ಪರ್ಧಿ ಬಣದಲ್ಲಿದ್ದ ದುಶ್ಯಂತ್ ಚೌಟಾಲನ ಜೆಜೆಪಿ ಪಕ್ಷದೊಂದಿಗೆ ಕೈಜೋಡಿಸುವ ಸ್ಥಿತಿಗೆ ಯಾಕೆ ಇಳಿಯಿತು?

ಮಹಾರಾಷ್ಟ್ರದಲ್ಲಿನ ತನ್ನ 122 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ, ತನ್ನ ಬಹುಕಾಲದ ಮೈತ್ರಿಪಕ್ಷ ಶಿವಸೇನೆಯನ್ನೂ ಕಳೆದುಕೊಂಡಿತು. ಇಲ್ಲಿ ಚಾಣಕ್ಯನ ನೀತಿಯೇ ತಿರುಗುಬಾಣವಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ತಳ್ಳಿದ್ದು ಮಾತ್ರವಲ್ಲ, ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರ ಹಲವು ವಿಷಯಗಳಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯುತ್ತಿರುವ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗಿದ್ದೇವೆ.

81 ಸ್ಥಾನಗಳುಳ್ಳ ಜಾರ್ಖಂಡದಲ್ಲಿ 37 ಸ್ಥಾನ ಗಳಿಸಿ ಹೇಗೋ ಅಧಿಕಾರದಲ್ಲಿದ್ದ ಬಿಜೆಪಿ 2019ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ 12 ಸ್ಥಾನಗಳನ್ನು ಕಳೆದುಕೊಂಡಿತು. ಪರಿಣಾಮವಾಗಿ ಸ್ಥಳೀಯ ಜೆಎಂಎಂನ ಹೇಮಂತ್ ಸೋರೆನ್ ನೇತೃತ್ವದ ಯುಪಿಎ ಮೈತ್ರಿ ಸರ್ಕಾರ ರಚನೆಯಾಗಿದೆ. 2019ರ ಲೋಕಸಭೆಯಲ್ಲಿ ದೇಶದ ರಾಜಧಾನಿ ದೆಹಲಿಯ ಏಳಕ್ಕೆ ಏಳೂ ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿದ್ದ ಮೋದಿ ಕೂಟ ಇದಾದ ಕೇವಲ 9 ತಿಂಗಳಿನಲ್ಲಿ, 2020ರ ಫೆಬ್ರವರಿಯಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಗಳಿಸಿದ್ದು ಕೇವಲ 8 ಸ್ಥಾನಗಳನ್ನು ಮಾತ್ರ ಎಂಬುದು ಏನನ್ನು ಸೂಚಿಸುತ್ತದೆ? ಜನಪರ ಕಾರ್ಯಗಳ ಮೂಲಕ ಜನರ ವಿಶ್ವಾಸಗಳಿಸಿದರೆ ಮೋದಿಯ ಮ್ಯಾಜಿಕ್ ಏನೂ ನಡೆಯೋಲ್ಲ ಅಂತ ತಾನೆ?

ಕಳೆದ ಮೇನಲ್ಲಿ ನಡೆದ ಚುನಾವಣೆಗಳನ್ನೇ ತೆಗೆದುಕೊಳ್ಳೋಣ. ದೇಶಾದ್ಯಂತ ಭಾರೀ ಸಂಚಲನವನ್ನುಂಟು ಮಾಡಿದ್ದ ಪಶ್ಚಿಮ ಬಂಗಾಳದ ಕತೆ ನಮಗೆ ಗೊತ್ತೇ ಇದೆ. ಇನ್ನೇನು ಪಶ್ಚಿಮ ಬಂಗಾಳದ ಗದ್ದುಗೆ ಅವರ ಕೈವಶವಾಯಿತು ಎಂಬುದು ಬಿಜೆಪಿಗರ ಬಡಾಯಿ ಮಾತ್ರವಾಗಿರಲಿಲ್ಲ; ಎಲ್ಲಾ ನಮೂನೆಯ
ರಾಜಕೀಯ ಪಂಡಿತರ ಭವಿಷ್ಯವಾಣಿಯೂ ಆಗಿತ್ತು. 2015ಕ್ಕೆ ಹೋಲಿಸಿದರೆ ಸೀಟುಗಳನ್ನು ಹೆಚ್ಚಿಸಿಕೊಂಡರೂ ಮಮತಾ ಬ್ಯಾನರ್ಜಿ ಎದುರು ಅತಿರಥ ಮಹಾರಥರೆಲ್ಲರೂ ಮಕಾಡೆ ಬಿದ್ದಿದ್ದನ್ನು ನಾವು ಕಂಡಿದ್ದೇವೆ. ಮಾತ್ರವಲ್ಲದೆ, ಬಿಜೆಪಿ ಸೇರಿದ್ದ ಅನೇಕ ಶಾಸಕರು, ನಾಯಕರು ಸಾಲುಸಾಲಾಗಿ ಘರ್ ವಾಪಸಿ ನಡೆಸುತ್ತಿರುವುದು ನಿತ್ಯದ ಸುದ್ದಿಯಾಗಿದೆ. ಇದೇ ಅವಧಿಯಲ್ಲಿ ನಡೆದ ಕೇರಳ, ತಮಿಳುನಾಡುಗಳಲ್ಲಿ ಯಥಾಪ್ರಕಾರ ಬಿಜೆಪಿಯ ಹೀನಾಯ ಪ್ರದರ್ಶನ ಮುಂದುವರೆದಿದೆ.

ಇದಲ್ಲದೆ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲು ನಿರಂತರ ಕುಸಿತ ಕಾಣುತ್ತಿದೆ. ಇದೇ ಫೆಬ್ರವರಿಯಲ್ಲಿ ನಡೆಯಲಿರುವ ಉತ್ತರಪ್ರದೇಶದ ಚುನಾವಣೆಯ ಮೇಲೆ ಈಗ ಎಲ್ಲರ ಕಣ್ಣೂ ನೆಟ್ಟಿದೆ. ಭುಗಿಲೆದ್ದಿರುವ ರೈತರ ಆಕ್ರೋಶ, ಮೇರೆಮೀರಿದ ಹಿಂಸಾಚಾರ, ಪೊಲೀಸ್ ದೌರ್ಜನ್ಯ, ಆಡಳಿತ ವಿರೋಧಿ ಅಲೆ ಇತ್ಯಾದಿ ಅಂಶಗಳನ್ನು ಮ್ಯಾನೇಜ್ ಮಾಡಲು ಮೋದಿ-ಶಾ-ಯೋಗಿ ತ್ರಿವಳಿ ಸರ್ಕಸ್ ಆರಂಭಿಸಿದೆ. ಪರಿಸ್ಥಿತಿ ಅವರಿಗೆ ಆಶಾದಾಯಕವಾಗೇನೂ ಇಲ್ಲ, ಇರಲಿ.

ಇಷ್ಟೆಲ್ಲ ವಿಷಯಗಳನ್ನು ಇಲ್ಲಿ ಯಾಕಾಗಿ ಪಟ್ಟಿ ಮಾಡಬೇಕಾಗಿ ಬಂತೆಂದರೆ, ಬಿಜೆಪಿ/ಮೋದಿಯ ಅಜೇಯತೆ ಬಗ್ಗೆ ಅಬ್ಬರದ ಪ್ರಚಾರವನ್ನು ಪಕ್ಕಕ್ಕೆ ಸರಿಸಿ ವಾಸ್ತವಾಂಶಗಳತ್ತ ಗಮನ ಸೆಳೆಯಲಿಕ್ಕಾಗಿ. ಯುದ್ಧದಲ್ಲಿ ಅಥವ ಕ್ರೀಡೆಯಲ್ಲಿ ಎದುರಾಳಿಯನ್ನು ಮಣಿಸಲು ಸಾಮಾನ್ಯವಾಗಿ ಒಂದು ತಂತ್ರವನ್ನು ಬಳಸಲಾಗುತ್ತದೆ. ಅದು ನಿಮ್ಮ ’ಶತ್ರು ಅಜೇಯ’, ’ಏನೇ ಮಾಡಿದರೂ ನೀವು ಆತನನ್ನು ಗೆಲ್ಲಲಾಗದು’ ಎಂಬಂತೆ ಬಿಂಬಿಸಿ ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವುದು. ಆತ್ಮಸ್ಥೈರ್ಯ ಕಳೆದುಕೊಂಡ ಬಣ ಗೆಲ್ಲುವ ಭರವಸೆ ಕಾಣದೆ, ತನ್ನ ಶಕ್ತಿ ಸಾಮರ್ಥ್ಯಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳುವುದಿಲ್ಲ. ಮನಸ್ಪೂರ್ವಕ ಹೋರಾಟವನ್ನೂ ಮಾಡುವುದಿಲ್ಲ. ಅಲ್ಲಿಗೆ ನಿಮ್ಮ ಶತ್ರು ಅರ್ಧ ಯುದ್ಧ ಗೆದ್ದಂತೆಯೇ. ಇದು ಬಿಜೆಪಿ ಪ್ರಚಾರದ ರಣತಂತ್ರ. ಇದಕ್ಕೆ ಹೇಗೆ ಸ್ಪಂದಿಸಬೇಕೆಂಬುದು ನಮಗೇ ಬಿಟ್ಟದ್ದು.


ಇದನ್ನೂ ಓದಿ: ಚುನಾವಣೆಯಲ್ಲಿ BJP ಸೋಲಿಸಿದರೆ ಇಂಧನ ದರ ಇಳಿಯುತ್ತದೆ ಎಂಬ ಪಾಠ ಕಲಿಸಿಕೊಟ್ಟ ಮೋದಿ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...