ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದ್ದು, “ಬಿಜೆಪಿ ಮಾವೋವಾದಿಗಳಿಗಿಂತ ಅಪಾಯಕಾರಿ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಪುರುಲಿಯಾದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ಬಿಜೆಪಿ ನೀಡುತ್ತಿದೆ. ರಾಜಕೀಯ ಎನ್ನುವುದು ಹೊಣೆಗಾರಿಕೆಯಿಂದ ಕೂಡಿದ ಸಿದ್ಧಾಂತ. ಇದನ್ನು ಬಟ್ಟೆ ಬದಲಾಯಿಸಿದಂತೆ ದಿನವೂ ಬದಲಾಯಿಸಲು ಸಾಧ್ಯವಿಲ್ಲ. ಯಾರು ಬಿಜೆಪಿಯನ್ನು ಸೇರಲು ಬಯಸುತ್ತೀರೊ ಅವರು ತೆರಳಬಹುದು. ಆದರೆ ನಾವು ಆ ಪಕ್ಷದ ಮುಂದೆ ಎಂದಿಗೂ ತಲೆ ತಗ್ಗಿಸುವುದಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಜಂಗಲ್‌ಮಹಲ್ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿ ಜನರನ್ನು ಬಿಜೆಪಿ ನಾಯಕರು ದಾರಿತಪ್ಪಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ನೀಡಿದ್ದ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಈ ಕಡೆ ತಲೆ ಹಾಕಿಲ್ಲ” ಎಂದರು.
ಇದನ್ನೂ ಓದಿ: ಪ.ಬಂಗಾಳ ಚುನಾವಣೆ: ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಣೆ
ಇನ್ನೇನು ಕೆಲವೇ ತಿಂಗಳಿನಲ್ಲಿ ವಿಧಾನಸಭೆ ಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಹಲವು ಟಿಎಂಸಿ ನಾಯಕರು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಹಲವು ಪ್ರಮುಖ ಪಕ್ಷಗಳು ಇದುವರೆಗೂ ಘೋಷಿಸಿವೆ. ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಶಿವಸೇನೆ ಮತ್ತು ಅಸದುದ್ದೀನ್ ಓವೈಸಿ ಅವರ ಪಕ್ಷವೂ ಸಹ ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಇನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವೂ ಸಹ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಮತ್ತೊಂದು ಕಡೆ ಬಿಜೆಪಿ, ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎಂದು ಹವಣಿಸುತ್ತಿದೆ. ಈ ನಿಟ್ಟಿನಲ್ಲಿ ಹಲವು ಟಿಎಂಸಿ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಇನ್ನು ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಕೊರೊನಾ ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಚುನಾವಣೆ ಇದಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ತೃಣಮೂಲ ಕಾಂಗ್ರೆಸ್‌ಗೆ ನೇರಾನೇರಾ ತೀವ್ರ ಪೈಪೋಟಿ ಇರಲಿದೆ. ಹಾಗಾಗಿ ಪಶ್ಚಿಮ ಬಂಗಾಳ ಯಾರ ತೆಕ್ಕೆಗೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಮಮತಾಗೆ ಮತ್ತೊಂದು ಆಘಾತ!


