ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಕ್ರಿಕೆಟ್ ತಂಡ ಸೇರಿದಂತೆ ದೇಶಾದ್ಯಂತ ವಿವಿಧ ಸಂಸ್ಥೆಗಳನ್ನು ಕೇಸರಿಮಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸದ ವೇಳೆ ತೊಡುವ ಜೆರ್ಸಿಗಳು ಈಗ ಕೇಸರಿ ಬಣ್ಣದ್ದಾಗಿವೆ.
ಸೆಂಟ್ರಲ್ ಕೋಲ್ಕತ್ತಾದ ಪೊಸ್ತಾ ಬಝಾರ್‌ನಲ್ಲಿ ನಡೆದ ಜಗಧಾತ್ರಿ ಪೂಜೆಯನ್ನು ಉದ್ಘಾಟಿಸಿ ಮಾತನಾಡಿದ ಬ್ಯಾನರ್ಜಿ, ಟೀಂ ಇಂಡಿಯಾದ ಅಭ್ಯಾಸ ಜೆರ್ಸಿಗಳಲ್ಲಿ ಮಾತ್ರವಲ್ಲದೆ, ಮೆಟ್ರೋ ಸ್ಟೇಷನ್‌ಗಳಿಗೂ ಕೇಂದ್ರ ಸರ್ಕಾರ ಕೇಸರಿ ಬಣ್ಣ ಹೊಡೆಸುತ್ತಿದೆ ಎಂದು ಆರೋಪಿಸಿದರು.
ಅವರು ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ಮೇಲೆ ನಾವು ಅಭಿಮಾನ ಹೊಂದಿದ್ದೇವೆ, ಅವರು ವಿಶ್ವಕಪ್ ಗೆಲ್ಲುತ್ತಾರೆಂದು ನಂಬುತ್ತೇನೆ, ಆದರೆ, ನಮ್ಮ ಆಟಗಾರರು ಈಗ ಕೇಸರಿ ಬಣ್ಣದ ಜೆರ್ಸಿ ಹಾಕಿ ಆಡಬೇಕಿದೆ, ಮೆಟ್ರೋ ಸ್ಟೇಷನ್‌ಗಳಿಗೂ ಕೇಸರಿ ಬಳಿಯಲಾಗಿದೆ, ಇದನ್ನು ಒಪ್ಪಲಾಗದು ಎಂದು ಬ್ಯಾನರ್ಜಿ ಹೇಳಿದ್ದಾರೆ.
“ಅವರು ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಅವರು ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುತ್ತಾರೆ ಎಂದು ನಾನು ನಂಬುತ್ತೇನೆ. ಆದರೆ ಅವರು (ಬಿಜೆಪಿ) ಅಲ್ಲಿಯೂ ಕೇಸರಿ ಬಣ್ಣಗಳನ್ನು ತಂದರು. ನಮ್ಮ ಹುಡುಗರು ಈಗ ಕೇಸರಿ ಬಣ್ಣದ ಜರ್ಸಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. ಇದು ಸ್ವೀಕಾರಾರ್ಹವಲ್ಲ” ಎಂದು ಕಿಡಿಕಾರಿದರು.
ದೇಶವು ಇಲ್ಲಿನ ಜನರಿಗೆ ಸೇರಿದ್ದೇ ವಿನಃ, ಬಿಜೆಪಿಯ ಜನರಿಗೆ ಸೇರಿದ್ದಲ್ಲ. ಅಧಿಕಾರ ಬರುತ್ತದೆ ಹೋಗುತ್ತದೆ, ಆದರೆ, ಇಂತಹದ್ದೆಲ್ಲಾ ಯಾವ ಕಾರಣಕ್ಕೂ ಫಲ ನೀಡುವುದಿಲ್ಲ ಎಂದಿದ್ದಾರೆ.
”ಬಿಜೆಪಿಯವರು ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ ನನಗೆ ಯಾವುದೇ ಸಮಸ್ಯೆಗಳಿಲ್ಲ, ಆದರೆ ಅವರು ಎಲ್ಲವನ್ನೂ ಕೇಸರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಾಯಾವತಿ ಅವರ ಪ್ರತಿಮೆಯನ್ನು ನಾನು ಒಮ್ಮೆ ನೋಡಿದ್ದೇನೆ, ಅದರ ನಂತರ, ನಾನು ಏನನ್ನೂ ಕೇಳಲಿಲ್ಲ. ಈ ನಾಟಕಗಳು ಯಾವುದಕ್ಕೂ ಪ್ರಯೋಜಕ್ಕೆ ಬರುವುದಿಲ್ಲ” ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೊದಲ ಪುಟದ ಜಾಹೀರಾತುಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ ಆದರೆ “ರಾಜ್ಯಕ್ಕೆ ಬರಬೇಕಿದ್ದ ಬಾಕಿ ಹಣವನ್ನು ನಿಲ್ಲಿಸಿದೆ, ಹೀಗಾಗಿ ರಾಜ್ಯದಲ್ಲಿ ಸಾವಿರಾರು (MGNREGA) ಕಾರ್ಮಿಕರು ಉದ್ಯೋಗದಿಂದ ವಂಚಿತರಾಗಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಇದನ್ನೂ ಓದಿ: ರಾಜೀನಾಮೆ ನೀಡಬೇಕೇ ಅಥವಾ ಜೈಲಿನಿಂದಲೇ ಸರ್ಕಾರ ನಡೆಸಬೇಕೇ?: ಜನರು ತೀರ್ಮಾನಿಸಲಿ ಎಂದ ಕೇಜ್ರಿವಾಲ್


