ಬಿಜೆಪಿಯ ಐಟಿ ಸೆಲ್ ತಾವು ಆಡಳಿತ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ಜನರಿಗೆ ಕರೆ ಮಾಡಿ, ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆರೋಪಿಸಿದ್ದಾರೆ.
“ಕೋಲ್ಕತ್ತಾದ ಜಾದವ್‌ಪುರ್ ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರಿಗೆ ಇಂತಹ ಕರೆ ಬಂದಿದ್ದು, ಕರೆ ಮಾಡಿರುವವರು ತಮ್ಮನ್ನು ತಾವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರೆಂದು ಹೇಳಿಕೊಂಡಿದ್ದಾರೆ. ಕರೆ ಮಾಡಿ, ಮುಂಬರುವ ಚುನಾವಣೆಯಲ್ಲಿ ಈ ಪ್ರಾಧ್ಯಾಪಕರು ಯಾರಿಗೆ ಮತ ಹಾಕುತ್ತಾರೆಂದು ತಿಳಿಯಲು ಬಯಸಿದ್ದರು. ಅಲ್ಲದೆ ಅವರು ಸಾಕಷ್ಟು ತಪ್ಪು ಮಾಹಿತಿ ಸೇರಿದಂತೆ ಅವಮಾನಕರವಾಗಿ ಮಾತನಾಡಿದ್ದರು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮಬಂಗಾಳ ಚುನಾವಣೆ: ಪೂರಕ ಬಜೆಟ್‌ನಲ್ಲಿ ರೈತರ ಸಬಲೀಕರಣಕ್ಕೆ ಒತ್ತು ನೀಡಿದ ಮಮತಾ
“ಆದರೆ ಪ್ರಾಧ್ಯಾಪಕರು ಈ ಸಂಖ್ಯೆಗಳನ್ನು ಪರಿಶೀಲಿಸಿದಾಗ ಅವರು ಟಿಎಂಸಿಗೆ ಕಾರ್ಯಕರ್ತರಲ್ಲ ಎಂದು ತಿಳಿದುಬಂದಿದೆ. ಇದು ಬಿಜೆಪಿ ಐಟಿ ಸೆಲ್‌ನ ಕೆಟ್ಟ ಕೆಲಸ. ಕೂಡಲೇ ತನಿಖೆ ಆರಂಭಿಸುವಂತೆ ಪೊಲೀಸರನ್ನು ಕೇಳುತ್ತಿದ್ದೇನೆ. ಜನರು ಅನುಮಾನಾಸ್ಪದ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಬಾರದು ಮತ್ತು ಒಂದು ವೇಳೆ ಇಂತಹ ಕರೆಗಳು ಬಂದರೆ ಪೊಲೀಸರಿಗೆ ದೂರು ಸಲ್ಲಿಸಿ ಎಂದು ಮನವಿ ಮಾಡುತ್ತೇನೆ. ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಕಲಿ ಸುದ್ದಿಗಳನ್ನು ಹರಡುವಲ್ಲಿ ಬಿಜೆಪಿಯ ಐಟಿ ಸೆಲ್ ಪ್ರಾವಿಣ್ಯತೆ ಹೊಂದಿದೆ. ಯಾವುದೆ ವಿಷಯವನ್ನು ಸಾವಿರಾರು ವಾಟ್ಸಪ್ ಗುಂಪುಗಳ ಮೂಲಕ ವೈರಲ್ ಮಾಡಬಹುದು ಎಂದು ಅಮಿತ್ ಶಾ ಅವರೇ ಒಮ್ಮ ಹೇಳಿಕೊಂಡಿದ್ದರು” ಎಂದು ಮಮತಾ ಹೇಳಿದ್ದಾರೆ.
ಆದರೆ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ರಿತೇಶ್ ತಿವಾರಿ ಮಮತಾ ಅವರ ಆರೋಪವನ್ನು ಅಲ್ಲಗೆಳೆದಿದ್ದು, ಅವರು ರೂಡಿಗತ ಸುಳ್ಳುಗಾರ್ತಿ ಎಂದು ಹೇಳಿದ್ದಾರೆ.
“ಮಮತಾ ಅವರು ರೂಡಿಗತ ಸುಳ್ಳುಗಾರ್ತಿ ಎಂದು ಬಂಗಾಳದ ಜನರಿಗೆ ತಿಳಿದಿದೆ. ಶಿಕ್ಷಕ ಸಮುದಾಯದ ಸಹಾನುಭೂತಿ ಪಡೆಯಲು ಅವರು ಈ ಕಥೆಗಳನ್ನು ಹಣೆಯುತ್ತಿದ್ದಾರೆ. ಅವರು ಆರೋಪಿಸಿದಂತೆ ನಡೆದಿದ್ದರೆ ಕರೆಗಳ ದಾಖಲೆಗಳು ಮತ್ತು ಸಂಭಾಷಣೆಗಳ ಆಡಿಯೊ ರೆಕಾರ್ಡಿಂಗ್‌ಗಳನ್ನು ಯಾಕೆ ಬಹಿರಂಗಪಡಿಸಿಲ್ಲ. ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ, ಅವರಿಗೆ ಸಾಧ್ಯವಾದರೆ ಪ್ರಕರಣದಲ್ಲಿ ಬಿಜೆಪಿ ಐಟಿ ಸೆಲ್‌ನ ಒಳಗೊಳ್ಳುವಿಕೆಯನ್ನು ಸಾಬೀತುಪಡಿಸಲಿ” ಎಂದು ತಿವಾರಿ ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಎಂದೂ ಬಂಗಾಳವನ್ನು ಆಳಲಾಗದು: ಮಮತಾ


