ಅಕ್ರಮ ಕಲ್ಲು ಗಣಿಕಾರಿಕೆ ಪ್ರಕರಣದಲ್ಲಿ ಬೆಳ್ತಂಗಡಿ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿದಂತೆ, ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದು, ಶಾಸಕ ಹರೀಶ್ ಪೂಂಜಾ ತಮ್ಮ ಬೆಂಬಲಿಗರೊಂದಿಗೆ ಶನಿವಾರ ರಾತ್ರಿ ಬೆಳ್ತಂಗಡಿ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗಳಿಗೆ ಧಮಕಿ ಹಾಕಿದ್ದು, ಆ ವಿಡಿಯಿವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಬಿಜೆಪಿ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ.
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳಿಗೆ ಧಮಕಿ ಹಾಕುವ ಮೂಲಕ ಬಿಜೆಪಿಗರು ಎಂದಿಗೂ ಕ್ರಿಮಿನಲ್ ಗಳ ರಕ್ಷಕರು ಎಂಬುದನ್ನು ಸಾಬೀತು ಮಾಡಿದ್ದಾರೆ.
ಪೊಲೀಸರ ನೈತಿಕ ಸ್ಥೈರ್ಯವನ್ನು ಕಸಿಯುತ್ತ, ಕ್ರಿಮಿನಲ್ ಗಳಿಗೆ ಬೆಂಬಲ ನೀಡುತ್ತ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಬಿಜೆಪಿ ಕೆಲಸಗಳಿಗೆ ಕಡಿವಾಣ ಹಾಕುವುದಕ್ಕೆ ನಮ್ಮ ಸರ್ಕಾರ ಸಮರ್ಥವಾಗಿದೆ” ಎಂದು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ಪೋಸ್ಟ್ ಮಾಡಿದೆ.
ತಾಲ್ಲೂಕಿನ ಮೆಲಂತಬೆಟ್ಟು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಕ್ವಾರೆಗೆ ಶನಿವಾರ ಸಂಜೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಪೊಲೀಸರ ತಂಡ ಜಂಟಿ ದಾಳಿ ನಡೆಸಿ, ಕಲ್ಲು ಕ್ವಾರಿಯಲ್ಲಿನ ಸ್ಫೋಟಕಗಳು ವಶಪಡಿಕೊಂಡಿದ್ದರು. ಜೊತೆಗೆ, ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಿದ್ದರು. ಬಿಜೆಪಿ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಈ ಅಕ್ರಮ ಕಲ್ಲು ಕ್ವಾರಿ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ತಮ್ಮ ಪಕ್ಷದ ಕಾರ್ಯಕರ್ತನನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ, ಠಾಣೆಗೆ ಧಾವಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಯಲ್ಲೇ ಪ್ರತಿಭಟನೆ ನಡೆಸುವ ನೆಪದಲ್ಲಿ ಪೊಲೀಸರು ಧಮಕಿ ಹಾಕಿದ್ದಾರೆ. ಅಕ್ರಮ ಕಲ್ಲು ಕ್ವಾರಿ ನಡೆಸುತ್ತಿದ್ದ ಆರೋಪ ಹೊತ್ತಿರುವ ಬಂಧಿತ ಶಶಿರಾಜ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಧಮಕಿ ಹಾಕಿದ್ದಾರೆ ಎನ್ನಲಾಗಿದೆ.
ಮೇಲಂತಬೆಟ್ಟು ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗದಲ್ಲಿ ಈ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಇಬ್ಬರೂ ನಡೆಸುತ್ತಿದ್ದರೆಂದು ಹೇಳಲಾಗಿದೆ. ಈ ಕ್ವಾರಿಯನ್ನು ಯಾವುದೇ ಸೂಕ್ತ ದಾಖಲೆಗಳಿಲ್ಲದೇ ನಡೆಸಲಾಗುತ್ತಿತ್ತು ಎಂಬ ದೂರುಗಳ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು ಎನ್ನಲಾಗಿದ್ದು, ಸ್ಥಳದಲ್ಲಿದ್ದ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಒಂದು ಹಿಟಾಚಿ, ಒಂದು ಕಂಪ್ರೆಸರ್ ಮೆಷಿನ್, ಒಂದು ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಬೆಂಬಲಕ್ಕೆ ನಿಂತ ಸಿಟಿ ರವಿ:
ಅಕ್ರಮ ಕಲ್ಲು ಗಣಿಗಾರಿಕೆ ಆರೋಪದಲ್ಲಿ ಬಂಧಿತರಾಗಿರುವ ಆರೋಪಿ ಶಶಿರಾಜ್ ಬೆಂಬಲಿಸಿ ಮಾಜಿ ಶಾಸಕ ಸಿಟಿ ರವಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಸಕ್ರಿಯವಾಗಿರುವ ಕಾರ್ಯಕರ್ತರನ್ನು ಕೇಸ್ ದಾಖಲಿಸಿ, ಉಳಿದ ಕಾರ್ಯಕರ್ತರನ್ನು ಬೆದರಿಸುವ, ನಮ್ಮ ಕಾರ್ಯಕರ್ತರನ್ನು ಹಣಿಯಲು ಪ್ರಯತ್ನಿಸುವುದು ಕಾಂಗ್ರೆಸ್ಸಿನ ಹಳೆ ಚಾಳಿ. ಕೊಲೆ ಸುಲಿಗೆ ಮಾಡಿರುವವರನ್ನು ಬಂಧಿಸಲು ಹಿಂದೆ ಮುಂದೆ ನೋಡುವ ಕಾಂಗ್ರೆಸ್ ಸರ್ಕಾರ ಸುಳ್ಳು ಕೇಸಿನ ಆಧಾರದ ನಿನ್ನೆ ಮಧ್ಯರಾತ್ರಿ ಉಗ್ರಗಾಮಿಯನ್ನು ನಡೆಸಿಕೊಳ್ಳುವಂತೆ ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಅವರನ್ನು ಬಂಧಿಸಿದೆ. ಆಡಳಿತ ಯಂತ್ರವನ್ನು ಉಪಯೋಗಿಸಿ, ಪೊಲೀಸ್ ದೌರ್ಜನ್ಯದಿಂದ, ನಿಮ್ಮ ಕೀಳುಮಟ್ಟದ ತಂತ್ರಗಳಿಂದ ನಮ್ಮ ಕಾರ್ಯಕರ್ತರನ್ನು ಬೆದರಿಸಲು ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರ ಜೊತೆ ಸಂಘಟನೆ ನಿಲ್ಲಲಿದೆ, ಏನೇ ಬರಲಿ ಕಾರ್ಯಕರ್ತರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ; ನಿಕೋಬಾರ್ ದ್ವೀಪಗಳಿಗೆ ಆಗಮಿಸಿದ ನೈರುತ್ಯ ಮಾನ್ಸೂನ್; ಮೇ 31ರ ವೇಳೆಗೆ ಕೇರಳ ತಲುಪುವ ನಿರೀಕ್ಷೆ


