ಮಧ್ಯಪ್ರದೇಶದ ಜಬಲ್ಪುರದಲ್ಲಿ ಬಿಜೆಪಿ ನಾಯಕಿಯೊಬ್ಬರು ಅಂಧ ಮಹಿಳೆಗೆ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ.
ಅಂಧ ಮಹಿಳೆಯ ಅಂಗವೈಕಲ್ಯವದ ಕುರಿತು ಬಿಜೆಪಿ ನಾಯಕಿ ಅವಹೇಳನಕಾರಿ ಹೇಳಿಕೆ ನೀಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. “ನೀನು ಈ ಜನ್ಮದಲ್ಲಿ ಕುರುಡಿಯಾಗಿದ್ದೀಯ, ಮುಂದಿನ ಜನ್ಮದಲ್ಲೂ ಕುರುಡಿಯಾಗಿಯೇ ಇರುತ್ತೀಯ” ಎಂದು ನಿಂದಿಸಿರುವುದು ಕಂಡುಬಂದಿದೆ.
ಬಿಜೆಪಿ ನಾಯಕಿ ಸಂತ್ರಸ್ತ ಮಹಿಳೆಯ ಕೈಹಿಡಿದು ಎಳೆದಾಡುವುದು ಮತ್ತು ತಳ್ಳಾಟ ನಡೆಸಿರುವುದನ್ನು ದೃಶ್ಯಾವಳಿಗಳು ಪುಷ್ಟೀಕರಿಸಿವೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ.
ಡಿಸೆಂಬರ್ 20ರಂದು ಜಬಲ್ಪುರದ ಗೋರಖ್‌ಪುರ ಪ್ರದೇಶದ ಚರ್ಚ್ ಒಂದರಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಮತಾಂತರಕ್ಕಾಗಿ ಅಂಧ ವಿದ್ಯಾರ್ಥಿಗಳನ್ನು ಚರ್ಚ್‌ಗೆ ಕರೆತರಲಾಗಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಇದು ಉಭಯ ಬಣಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲೇ ಪ್ರಸ್ತುತ ಘಟನೆ ನಡೆದಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಬಿಜೆಪಿ ಜಿಲ್ಲಾ ಪದಾಧಿಕಾರಿ ಅಂಜು ಭಾರ್ಗವ ಅವರು ಹಿಂದೂ ಸಂಘಟನೆಗಳ ಸದಸ್ಯರೊಂದಿಗೆ ಸ್ಥಳದಲ್ಲಿದ್ದರು. ಚರ್ಚ್ ಆವರಣದಲ್ಲಿ ಕುಳಿತಿದ್ದ ಮಕ್ಕಳು ಮತ್ತು ದಿವ್ಯಾಂಗ ಮಹಿಳೆಯ ಬಳಿ ತೆರಳಿ ವಾಗ್ವಾದ ನಡೆಸಿದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗಿದೆ.
ಸೋಮವಾರ (ಡಿ.22) ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅಂಧ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವವರು ಬಿಜೆಪಿಯ ಜಬಲ್ಪುರ ಜಿಲ್ಲಾ ಉಪಾಧ್ಯಕ್ಷೆ ಅಂಜು ಭಾರ್ಗವ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.
ಇದೊಂದು ಕ್ರೂರ ಕೃತ್ಯ ಎಂದು ಟೀಕಿಸಿರುವ ಸುಪ್ರಿಯಾ, ಬಿಜೆಪಿಯ ಮಾತು ಮತ್ತು ಕೃತಿಗಳ ನಡುವಿನ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ. ಪ್ರಸ್ತುತ ವೈರಲ್ ವಿಡಿಯೊ ಅಥವಾ ಘಟನೆಯ ಕುರಿತು ಬಿಜೆಪಿ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.


