ಇಂದು ರಾತ್ರಿ 7:30ಕ್ಕೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಬಿ.ಎಸ್ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ನೂತನ ಸಿಎಂ ಅನ್ನು ಘೋಷಿಸಲಾಗುತ್ತದೆ ಎನ್ನಲಾಗಿದೆ.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿಯವರು ವೀಕ್ಷಕರಾಗಿ ಆಗಮಿಸಲಿದ್ದು, ಎಲ್ಲಾ ಶಾಸಕರ ಅಭಿಪ್ರಾಯ ಪಡೆದು ನೂತನ ಸಿಎಂ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಬಿಜೆಪಿ ಹೈಕಮಾಂಡ್ ಈಗಾಗಲೇ ಸಿಎಂ ಯಾರಾಗಬೇಕು ಎನ್ನುವುದನ್ನು ನಿರ್ಧರಿಸಿದೆ. ಸುಮ್ಮನೆ ನೆಪ ಮಾತ್ರಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದು ಎಲ್ಲಾ ಶಾಸಕರ ಅಭಿಪ್ರಾಯ ಪಡೆಯುವ ಕಸರತ್ತು ನಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.
ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ಒಂದು ದಿನವಾಯಿತು. ತಮ್ಮ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಶಾಸಕರು blank ಆಗಿದ್ದಾರೆ. ಸ್ವತಃ ಶಾಸಕರಿಗೇ ಮುಂದಿನ ಮುಖ್ಯಮಂತ್ರಿ ಯಾರೆಂಬುದು ಗೊತ್ತಿಲ್ಲ, ಅಭ್ಯರ್ಥಿಗಳು ಮೊದಲೇ ಗೊತ್ತಿಲ್ಲ. ಒಂದು ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲದವನೂ ಸೇರಿದಂತೆ ಕನಿಷ್ಠ ಐವತ್ತು ಮಂದಿಯ ಹೆಸರು ಓಡುತ್ತಿವೆ. ಕೊನೆಯಲ್ಲಿ ಶಾಸಕಾಂಗ ಸಭೆಯಲ್ಲಿ ಶಾಸಕರೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದರೂ ಚೀಟಿಯಲ್ಲಿ ಬರೋ ಹೆಸರಿಗೇ ಅವರು ಮುದ್ರೆ ಒತ್ತಬೇಕು. ನಮ್ಮ ಸಂಸದೀಯ ಪ್ರಜಾಸತ್ತೆಯ ದೊಡ್ಡ ತಮಾಶೆ ಇದು. ಕರ್ನಾಟಕದ ಮುಖ್ಯಮಂತ್ರಿ ಸ್ಥಾನವೆಂಬುದು ವಾಟ್ಸಾಪ್ ಫಾರ್ವಾರ್ಡ್ ಜೋಕ್ ಆಗಿ ಹೋಗಿದ್ದು ನಮ್ಮ ಕಾಲದ ದುರಂತ. ಪ್ರಜಾಪ್ರಭುತ್ವವನ್ನು ಹೇಗೆಲ್ಲ ಚುಚ್ಚಿ ಕೊಲ್ಲಲಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಪತ್ರಕರ್ತರಾದ ದಿನೇಶ್ ಕುಮಾರ್ ದಿನೂ ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ಬಹುಶಃ ಎರಡ್ಮೂರು ವಾರಗಳ ಹಿಂದೆ ಕೇಂದ್ರ ಸಂಪುಟ ಪುನರ್ ರಚನೆಯ ಸಂಧರ್ಭದಲ್ಲೇ ಆಗಿದೆ. ಹಾಗಾಗಿಯೇ ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾಗಿದ್ದಾರೆ. ಇನ್ನು ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗೋದು ಏನೂ ಇಲ್ಲ. ಹೆಚ್ಚೆಂದರೆ ಈಗಾಗಲೇ ಮಾರಗುಡಿ ಬ್ರದರ್ಸ್ ಆಯ್ಕೆ ಮಾಡಿರುವ ಯೆಸ್ ಮ್ಯಾನ್ ಹೆಸರನ್ನು ಶಾಸಕಾಂಗ ಸಭೆಯಲ್ಲಿ ತೇಲಿಬಿಟ್ಟು, ಬಹುಮತದಿಂದ ಅದನ್ನು ಅಂಗೀಕಾರವಾಗುವಂತೆ ನೋಡಿ, ರಾಜ್ಯದ ಮುಖ್ಯಮಂತ್ರಿಯನ್ನು ಶಾಸಕರು ಆರಿಸಿದ್ದು ಎಂದು ತೋರಿಸುವ ನಾಟಕ ನಡೆಯಬಹುದು. ಅದಕ್ಕೆ ನಮ್ಮ ಶಾಸಕರು ‘ಸಂತೋಷ’ದಿಂದ ಅಸ್ತು ಎನ್ನುವುದೂ ಗ್ಯಾರಂಟಿ ಎಂದು ಪತ್ರಕರ್ತರಾದ ಅಲ್ಮೇಡ ಗ್ಲಾಡ್‌ಸನ್ ವ್ಯಂಗ್ಯವಾಡಿದ್ದಾರೆ.
ಬಹುಶಃ ಕಾಂಗ್ರೆಸ್ಸಿನ ಹೈಕಮಾಂಡ್ ಸಂಸ್ಕೃತಿಯನ್ನು ಬಿಜೆಪಿ (ಜನಸಂಘ) ಹಾಸ್ಯ ಮಾಡಿದಷ್ಟು ಬೇರಾರೂ ಮಾಡಿರಲಾರರು. ಡಾ. ಮನಮೋಹನ್ ಸಿಂಗರು ಪ್ರಧಾನಿಗಳಾಗಿದ್ದಾಗ, ಅವರು ಕಾಂಗ್ರೆಸ್ಸಿನ ಅಧ್ಯಕ್ಷೆ ಶ್ರೀಮತಿ ಸೋನಿಯಾ ಅವರನ್ನು ಭೇಟಿ ಮಾಡಿ ಸಲಹೆ ಕೇಳುತ್ತಿದ್ದುದೂ ಬಿಜೆಪಿಯ ನಿರಂತರ ಅಪಹಾಸ್ಯಕ್ಕೆ ಒಳಗಾಗಿದ್ದುದು ದೂರದ ಮಾತೇನಲ್ಲ. ಅಂತ ಬಿಜೆಪಿಯು ಕ್ಷಿಪ್ರ ವೇಗದಲ್ಲಿ ಈಗ ತಲುಪಿದ ಅವಸ್ಥೆ ನೋಡಿ! ಹೈಕಮಾಂಡ್ ನ ಅನುಮತಿ ಇಲ್ಲದೆ ಹುಲ್ಲುಕಡ್ಡಿಯೂ ಅಲುಗಾಡಲಾಗದ ಸ್ಥಿತಿಯನ್ನು ಅದು ನಿರ್ಮಾಣಮಾಡಿಕೊಂಡಿದೆ. ಅದರ ಬಗ್ಗೆ ಗುಟ್ಟಿನಲ್ಲಿಯೂ ಮಾತಾಡಿಕೊಳ್ಳಲಾಗದ ಭಯ ಅದರ ಚುನಾಯಿತ ಪ್ರತಿನಿಧಿಗಳನ್ನೂ ಆವರಿಸಿದೆ. ಏನಿಲ್ಲವೆಂದರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಜನರಿಂದ ಚುನಾಯಿತರಾಗಿದ್ದರು ಮತ್ತು ಪಕ್ಷದ ಅಧ್ಯಕ್ಷರಾಗಿದ್ದರು. ಈ ಬಿಜೆಪಿಯವರಿಗೆ ಮಾರ್ಗದರ್ಶನ ಮಾಡುವ ಆರ್ ಎಸ್ ಎಸ್ ಚುನಾವಣೆಯಲ್ಲಿ ಗೆದ್ದಿದೆಯಾ? ಅಥವಾ ಜನರು ಅದಕ್ಕೆ ಓಟ್ ಹಾಕಿದ್ದಾರಾ? ಪ್ರಜಾಪ್ರಭುತ್ವ ನಾಶವಾಗುವುದೆಂದರೆ ಹೀಗೆ.. ಎಂದು ಖ್ಯಾತ ಚಿಂತಕರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರ ಪೆಟ್ಟು ಕೊಟ್ಟಿದ್ದು ಯಡಿಯೂರಪ್ಪನವರಿಗೆ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೆ


